ಲಂಡನ್: ಬ್ರಿಟನ್ ಪ್ರಧಾನ ಮಂತ್ರಿ ಸ್ಥಾನ ಹಾಗೂ ಲೇಬರ್ ಪಕ್ಷದನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಕೀರ್ ಸ್ಟಾರ್ಮರ್ ಸೋಮವಾರ ಘೋಷಿಸಿದ್ದಾರೆ. ಇದರೊಂದಿಗೆ ತಿಂಗಳಿಗೂ ಹೆಚ್ಚು ಸಮಯದಿಂದ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸಿ, ಹೊಸ ನಾಯಕನ ಆಯ್ಕೆಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಟಾರ್ಮರ್ ಅವರ ಲೇಬರ್ ಪಕ್ಷವು ಭಾರಿ ಬಹುಮತ ಸಾಧಿಸಿ ಅಧಿಕಾರಕ್ಕೇರಿತ್ತು.ಈ ವರ್ಷದ ಮೇ ತಿಂಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಲೇಬರ್ ಪಕ್ಷವು ಮುಖಭಂಗ ಅನುಭವಿಸಿತ್ತು. ಅದಾದ ನಂತರ, ಪಕ್ಷದ ನಾಯಕತ್ವ ಹಾಗೂ ಸರ್ಕಾರದ ನೀತಿಯ ಬಗ್ಗೆ ಸ್ವಪಕ್ಷೀಯರಿಂದಲೇ ಅಸಮಾಧಾನ, ಬಂಡಾಯ ಶುರುವಾಯಿತು. ಇದು ಸ್ಟಾರ್ಮರ್ ಅವರ ರಾಜೀನಾಮೆ ನಿರ್ಧಾರಕ್ಕೆ ಕಾರಣವಾಗಿದೆ.
ಲಂಡನ್‌ನಲ್ಲಿರುವ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಇಂದು (ಸೋಮವಾರ) ಮಾತನಾಡಿರುವ ಪ್ರಧಾನಿ, ನಾಯಕತ್ವಕ್ಕಾಗಿನ ಸ್ಪರ್ಧೆ ಪೂರ್ಣಗೊಳ್ಳುವವರೆಗೆ ಹುದ್ದೆಯಲ್ಲಿ ಮುಂದುವರಿಯುವುದಾಗಿ ಮತ್ತು ಅಧಿಕಾರದ ಕ್ರಮಬದ್ಧ ಹಸ್ತಾಂತರಕ್ಕೆ ನೆರವಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.
10 ಡೌನಿಂಗ್ ಸ್ಟ್ರೀಟ್‌ಗೆ ಪ್ರವೇಶಿಸುವುದು ತಮ್ಮ ಬದುಕಿನ ಅತ್ಯಂತ ಹೆಮ್ಮೆಯ ಕ್ಷಣ ಎಂದಿರುವ ಸ್ಟಾರ್ಮರ್, ತಮ್ಮ ಅಧಿಕಾರಾವಧಿಯಲ್ಲಿ ಬ್ರಿಟನ್‌ನ ಖ್ಯಾತಿಯನ್ನು ಪುನಃಸ್ಥಾಪಿಸಲಾಗಿದೆ. ಹೂಡಿಕೆ ಸುರಕ್ಷಿತವಾಗಿದೆ. ಕಾರ್ಮಿಕ ಹಕ್ಕುಗಳಲ್ಲಿ ಸುಧಾರಣೆ ತರಲಾಗಿದೆ ಎಂದು ಹೇಳಿಕೊಂಡಿದ್ದಾರೆ.ಹಾಗೆಯೇ, ಮುಂದಿನ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯದ ಬಗ್ಗೆ ಪಕ್ಷದ ಸಹೋದ್ಯೋಗಿಗಳು ಪ್ರಶ್ನೆ ಎತ್ತಿದ್ದಾರೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ.
‘ಸಂಸದೀಯ ಪಕ್ಷದ ನಾಯಕರ ಪ್ರತಿಕ್ರಿಯೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತೇನೆ. ನಾನು ಲೇಬರ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದಿದ್ದಾರೆ.
ಸ್ಟಾರ್ಮ‌್ರಗೆ ಹಿನ್ನಡೆ
ದೇಶದಲ್ಲಿ ಸ್ವಾರ್ಮರ್ ಅವರ ಜನಪ್ರಿಯತೆ ಕುಸಿಯುತ್ತಿರುವುದು, ಪಕ್ಷದಲ್ಲಿ ಆಂತರಿಕ ಕಲಹಕ್ಕೆ ಎಡೆ ಮಾಡಿಕೊಟ್ಟಿದೆ. ಜೂನ್ 18 ರಂದು ನಡೆದ ವಿಶೇಷ ಚುನಾವಣೆಯಲ್ಲಿ ಗ್ರೇಟರ್ ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಆ್ಯಂಡಿ ಬರ್ನ್ ಹ್ಯಾಮ್ ಅವರು ಸ್ವಾರ್ಮರ್ ಎದುರು ಮುನ್ನಡೆ ಸಾಧಿಸಿದ್ದರು. ಇದು, ಪಕ್ಷದಲ್ಲಿನ ರಾಜಕೀಯ ಬಿಕ್ಕಟ್ಟು ಮತ್ತು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಒತ್ತಡವನ್ನೂ ಹೆಚ್ಚು ಮಾಡಿತ್ತು.ಹಣಕಾಸು ನೀತಿಗಳಿಗೆ ಸಂಬಂಧಿಸಿದಂತೆ ಸ್ವಾರ್ಮರ್ ಮತ್ತು ಹಣಕಾಸು ಸಚಿವೆ ರಚೆಲ್ ರೀವ್ ಅಸಮಾಧಾನಗಳನ್ನು ಎದುರಿಸುತ್ತಿದ್ದಾರೆ. ಹಾಗೆಯೇ, ತಮ್ಮ ಆಪ್ತ ಪೀಟರ್ ಮ್ಯಾಂಡೆಲ್ಸನ್ ಅವರನ್ನು ಅಮೆರಿಕದ ರಾಯಭಾರಿಯಾಗಿ ನೇಮಿಸಿದ್ದು ಪಕ್ಷದೊಳಗೆ ಅಸಮಾಧಾನ ವ್ಯಕ್ತವಾಗುವಂತೆ ಮಾಡಿತ್ತು.
ಮ್ಯಾಂಡೆಲ್ಸನ್ ಅವರು ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್ ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ, ಅವರ ತಲೆದಂಡವಾಗಿತ್ತು.ಸ್ಟಾರ್ಮರ್ ಆಡಳಿತಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿದ್ದ Ipsos, ಶುಕ್ರವಾರ ವರದಿ ಪ್ರಕಟಿಸಿತ್ತು. ಅದರಂತೆ, ಬ್ರಿಟನ್‌ನ ಶೇ 52ರಷ್ಟು ಜನರು ಸ್ಟಾರ್ಮರ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವುದನ್ನು ಹಾಗೂ ಶೇ 35ರಷ್ಟು ಮಂದಿ ಸ್ಥಾನದಲ್ಲಿ ಮುಂದುವರಿಯಲಿ ಎಂದು ಬಯಸುತ್ತಿದ್ದಾರೆ ಎನ್ನಲಾಗಿದೆ.ಬ್ರಿಟನ್ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ಸಾರ್ವಜನಿಕ ಸಾಲದ ಮಟ್ಟವೂ ಹೆಚ್ಚಿದೆ. ಆದರೆ, ಜಿ7 ರಾಷ್ಟ್ರಗಳಿಗೆ ಹೋಲಿಸಿದರೆ, ಬಜೆಟ್ ಅಥವಾ ಆರ್ಥಿಕತೆಯ ಐತಿಹಾಸಿಕ ಪ್ರವೃತ್ತಿಯು ವಿಚಲನಗೊಳ್ಳುವ ಹಂತದಲ್ಲಿಲ್ಲ. ಸ್ಟಾರ್ಮರ್ ನಾಯಕತ್ವದಲ್ಲಿ, ಬ್ರಿಟನ್ ಜಗತ್ತಿನೆದುರು ಇನ್ನಷ್ಟು ತೆರೆದುಕೊಂಡಿದೆ. ಹೊಸ ವ್ಯಾಪಾರ ಒಪ್ಪಂದಗಳಿಗೆ ಸಹಿ ಮಾಡಿದೆ. ನೈಜ ಜಿಡಿಪಿ ಬೆಳವಣಿಗೆಯಯಲ್ಲಿ ಶೇ 1.5ರಷ್ಟು ಏರಿಕೆಯನ್ನೂ ಕಂಡಿದೆ ಎಂದು ಬ್ರಿಟನ್ನ ಪ್ರಮುಖ ಹೂಡಿಕೆ ಬ್ಯಾಂಕ್ ಪೀಲ್ ಹಂಟ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಕಲ್ಲಮ್ ಪಿಕರಿಂಗ್ ಹೇಳಿದ್ದಾರೆ.
ಆದಾಗ್ಯೂ, ಜಿ7 ದೇಶಗಳ ಪೈಕಿ ಕಳೆದ 10 ವರ್ಷಗಳಲ್ಲಿ ಹೆಚ್ಚಿನ ಹಣದುಬ್ಬರದ ಸರಾಸರಿ ಹೊಂದಿರುವ ರಾಷ್ಟ್ರವಾಗಿ ಬ್ರಿಟನ್‌ನಲ್ಲಿ ಉಳಿದಿದೆ ಎಂದೂ ತಿಳಿಸಿದ್ದಾರೆ.
10 ವರ್ಷಗಳಲ್ಲಿ ಏಳನೇ ಪ್ರಧಾನಿ!ಯುರೋಪಿಯನ್ ಒಕ್ಕೂಟದಿಂದ ಹೊರಬರಲು ಬ್ರಿಟನ್ ಮತ ಚಲಾಯಿಸಿದ ಸುಮಾರು 10 ವರ್ಷಗಳ ನಂತರ ಸ್ಟಾರ್ಮರ್ ರಾಜೀನಾಮೆ ವಿಚಾರ ಮುನ್ನಲೆಗೆ ಬಂದಿದೆ. ಸ್ವಾರ್ಮರ್ ನಂತರ ಅಧಿಕಾರಕ್ಕೇರುವವರು, ಕಳೆದ ಹತ್ತು ವರ್ಷಗಳಲ್ಲಿ ಬ್ರಿಟನ್ ಏಳನೇ ಪ್ರಧಾನಿಯಾಗಲಿದ್ದಾರೆ. ಬ್ರೆಕ್ಸಿಟ್ ಪ್ರಕ್ರಿಯೆಯ ನಂತರವೂ ಈ ರೀತಿ ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆ ಮುಂದುವರಿದಿರುವುದಕ್ಕೆ ಈ ಬೆಳವಣಿಗೆ ಕನ್ನಡಿ ಹಿಡಿದಂತಾಗಿದೆ.2010ರಲ್ಲಿ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಅವರು 2016ರಲ್ಲಿ ಬ್ರೆಕ್ಸಿಟ್ ಪರ ಜನಾಭಿಪ್ರಾಯ ಮೂಡಿಸುವಲ್ಲಿ ಸೋತ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಉತ್ತರಾಧಿಕಾರಿ ಬಂದ ಥೆರೇಸಾ ಮೇ ಆಡಳಿತ 2019ರಲ್ಲಿ ಕೊನೆಗೊಂಡಿತ್ತು. ಬಳಿಕ ಪ್ರಧಾನಿಯಾದ ಬೋರಿಸ್ ಜಾನ್ಸನ್ ಕೂಡ ಅವಧಿ ಪೂರ್ಣಗೊಳಿಸಲಿಲ್ಲ.2022ರ ಸೆಪ್ಟೆಂಬರ್‌ನಲ್ಲಿ ಜಾನ್ಸನ್ ಸ್ಥಾನಕ್ಕೆ ಬಂದ ಲಿಜ್ ಟ್ರಸ್ ಆಡಳಿತ ಕೇವಲ 50 ದಿನಗಳಲ್ಲೇ ಕೊನೆಯಾಯಿತು. ನಂತರ, ರಿಷಿ ಸುನಕ್ ಅಧಿಕಾರ ವಹಿಸಿಕೊಂಡರೂ, ಹಣದುಬ್ಬರ ಹಾಗೂ ಉಕ್ರೇನ್ ಯುದ್ಧದ ಪರಿಣಾಮಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
2024ರ ಜುಲೈನಲ್ಲಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷದ ಎದುರು ಸ್ವಾರ್ಮರ್ ಅವರ ಲೇಬರ್ ಪಕ್ಷ ಜಯಭೇರಿ ಭಾರಿಸಿ ಅಧಿಕಾರಕ್ಕೇರಿತು. ಬಹುಮತವಿದ್ದರೂ, ಪಕ್ಷದಲ್ಲಿನ ಆಂತರಿಕ ಕಲಹವು ಆಡಳಿತದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತಿದೆ. ಹೀಗಾಗಿ, ಮತ್ತೊಬ್ಬರು ಪ್ರಧಾನಿಯಾಗಲು ವೇದಿಕೆ ಸಿದ್ಧವಾಗಿದೆ.










































