ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿಯನ್ನು ಭೇಟಿಯಾದ ದ.ಕ ಸಂಸದ ಕ್ಯಾ. ಬ್ರಿಜೇಶ್‌ ಚೌಟ | ಮಾಣಿ – ಸಂಪಾಜೆ ,ದಕ್ಷಿಣ ಕನ್ನಡದಲ್ಲಿ ಪ್ರಗತಿಯಲ್ಲಿರುವ ಯೋಜನೆಗಳ ಕಾಮಗಾರಿ ವೇಗ ಹೆಚ್ಚಿಸಲು ಮನವಿ

Picture of Savistara

Savistara

Bureau Report

ನವದೆಹಲಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಹೆದ್ದಾರಿ ಯೋಜನೆಗಳ ಕಾಮಗಾರಿ ಪ್ರಗತಿ ಬಗ್ಗೆ ಸಂಸದರು ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಈ ಯೋಜನೆಗಳ ಕಾಮಗಾರಿಗಳನ್ನು ಯಾವುದೇ ವಿಳಂಬವಾಗದಂತೆ ಗಮನಹರಿಸುವ ಮೂಲಕ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ಶಿರಾಡಿ ಘಾಟ್ ಹಾಗೂ ಸುರತ್ಕಲ್ -ಬಿ.ಸಿ ರೋಡ್ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ (DPR) ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಈ ಯೋಜನೆಗಳು ಜಿಲ್ಲೆಯ ರಸ್ತೆ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ, ಇವುಗಳ ಅನುಷ್ಠಾನಕ್ಕೆ ವೇಗ ನೀಡುವಂತೆಯೂ ಅಧಿಕಾರಿಗಳಿಗೆ ಸಂಸದ ಕ್ಯಾ. ಚೌಟ ಅವರು ಮನವರಿಕೆ ಮಾಡಿದ್ದಾರೆ.

ಮಾಣಿ -ಸಂಪಾಜೆ ನಡುವಿನ ರಸ್ತೆಯು ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ವ್ಯಾಪ್ತಿಗೆ ಬಂದಿರುವುದರಿಂದ, ಅದರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಹೆಚ್ಚಿನ ಗಮನಹರಿಸುವ ಮೂಲಕ ಮರುಪರಿಶೀಲಿಸುವ ಅಗತ್ಯತೆಯನ್ನು ಸಭೆಯಲ್ಲಿ ಸಂಸದರು ಒತ್ತಿ ಹೇಳಿದರು. ಮಾಣಿ – ಸಂಪಾಜೆ ರಸ್ತೆಗೆ ಈ ಹಿಂದೆ ಕರ್ನಾಟಕ ಸರಕಾರದ ಲೋಕೋಪಯೋಗಿ ಇಲಾಖೆಯ NH PWD ವತಿಯಿಂದ ಅಂದಾಜು 1000 ಕೋಟಿ ರೂಪಾಯಿಗಳ ಡಿಪಿಆರ್ ಸಿದ್ದಪಡಿಸಿ ಅನುಮೋದನೆ ಮತ್ತು ಅನುದಾನಕ್ಕಾಗಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿತ್ತು. ಇದರಲ್ಲಿ ಮಾಣಿಯಿಂದ – ಸಂಪಾಜೆವರೆಗೆ ನಾಲ್ಕು ಪಥದ ರಸ್ತೆ ಸೇರಿದಂತೆ ಮಾಣಿಯಿಂದ – ಕುಂಬ್ರದವರೆಗೆ ಹೆಚ್ಚುವರಿ ಸರ್ವಿಸ್ ರಸ್ತೆಯೊಂದಿಗೆ ಹೈವೇಯಿಂದ ಬೊಳುವಾರು ತಿರುಗುವಲ್ಲಿ, ಪರ್ಲಡ್ಕ ಜಂಕ್ಷನ್ ಮತ್ತು ದರ್ಬೆ ಜಂಕ್ಷನಲ್ಲಿ VUP ( Vehicular Under Pass) ನೀಡಲಾಗಿತ್ತು, ಇದರೊಂದಿಗೆ ಸುಳ್ಯದ ಬೋಳುಬೈಲಿನಿಂದ – ಪರಿವಾರಕಾನದವರೆಗೆ ಬೈಪಾಸ್ ರಸ್ತೆಯನ್ನು ನೀಡಲಾಗಿತ್ತು. ಉಳಿದಂತೆ ಇವಾಗ ಇರುವ ರಸ್ತೆಯ ಮಧ್ಯದಿಂದ ಎರಡು ಬದಿಯ 24 ಮೀಟರ್ ಗಳಂತೆ ಒಟ್ಟು 48 ಮೀಟರ್ ಅಗಲದಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲು ಅಂದಾಜಿಸಲಾಗಿತ್ತು.

ಕಳೆದ 6 ತಿಂಗಳಿನಿಂದ ಇದರ ಬೆನ್ನು ಹಿಡಿದಿದ್ದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಇಂದು ( ಫೆ.5) ರಂದು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ಕಾರ್ಯದರ್ಶಿ ಉಮಾಶಂಕರ್ ಅವರನ್ನು ಭೇಟಿಯಾಗಿ, ನಮ್ಮ ಈ ರಸ್ತೆಯು NHAI ಅಡಿಯಲ್ಲಿ ಬರುತಿದ್ದು ಇದು ಎಕ್ಸಪ್ರೆಸ್ ಹೈವೇ ರೀತಿಯಾಗಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡು ಈಗಾಗಲೇ ಮೈಸೂರಿನಿಂದ ಕುಶಾಲನಗರವರೆಗೆ ನಿರ್ಮಾಣವಾಗುತ್ತಿರುವ ರಸ್ತೆಯ ರೀತಿಯಲ್ಲೇ ಇದನ್ನು ಕೂಡ ತಿರುವುಗಳನ್ನು ತೆರವು ಮಾಡಿ ಆದಷ್ಟು ನೇರವಾದ ರಸ್ತೆಗಳೇ ಬರುವಂತೆ ಹಾಗೂ ಪುತ್ತೂರು ಮತ್ತು ಸುಳ್ಯದ ನಗರಗಳಿಗೆ ತೊಂದರೆಯಾಗದ ರೀತಿಯಲ್ಲಿ ಬೈಪಾಸ್ ರಸ್ತೆಗಳನ್ನು ಅಳವಡಿಸಿಕೊಂಡು NHAI ವತಿಯಿಂದಲೇ ನಿರ್ಮಾಣಗೊಳಿಸಿದರೆ ಮುಂದಿನ ದಿನಗಳಲ್ಲಿ ಮೈಸೂರು ಮತ್ತು ಭಾರತದ ಇಂಡಸ್ಟ್ರಿಯಲ್ ಹಬ್ ಆಗಿರುವ ಕೊಯಮುತ್ತೂರಿಗೆ ಅತೀ ಹತ್ತಿರದ ಮಂಗಳೂರಿನ ಬಂದರು ಸಂಪರ್ಕ ಸಿಗುವ ಬಗೆಗಿನ ವಿವರವನ್ನು ತಿಳಿಸಿ ಒಪ್ಪಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಇದರ ಪ್ರಕಾರವಾಗಿ ಮುಂದಿನ 3 ತಿಂಗಳ ಒಳಗೆ NHAI ವತಿಯಿಂದಲೇ ಹೊಸ ಡಿಪಿಆರ್ ಸಿದ್ಧಪಡಿಸಲು ತಯಾರು ಮಾಡುವುದಾಗಿ ಎಂದು ಕಾರ್ಯದರ್ಶಿಯವರು ಕೂಡ ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂದು ಕ್ಯಾ.ಚೌಟ ತಿಳಿಸಿದ್ದಾರೆ.ದೆಹಲಿ ಭೇಟಿಯ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ರವರು ಉಪಸ್ಥಿತರಿದ್ದರು.

[t4b-ticker]
error: Content is protected !!