ಮೆಟ್ರೊ ಪ್ರಯಾಣ ದರ ಹೆಚ್ಚಳಕ್ಕೆ ಕೇಂದ್ರವೇ ಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯ

Picture of Savistara

Savistara

Bureau Report

ಬೆಂಗಳೂರು: ಮೆಟ್ರೊ ಪ್ರಯಾಣ ದರದ ಹೆಚ್ಚಳಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಮೆಟ್ರೊ ರೈಲ್ವೆ ಕಾಯ್ದೆ ಪ್ರಕಾರ ಮೆಟ್ರೊ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಕ ರಚಿಸಲಾದ ಸ್ವತಂತ್ರ ದರ ನಿಗದಿ ಸಮಿತಿ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.ಕಾಯ್ದೆಯ ಸೆಕ್ಷನ್‌ 36ರ ಪ್ರಕಾರ, ದರ ನಿಗದಿ ಸಮಿತಿಯು ನಿಗದಿತ ಅವಧಿಯೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕು ಮತ್ತು ಸೆಕ್ಷನ್ 37ರ ಅಡಿ ಈ ಶಿಫಾರಸುಗಳು ಮೆಟ್ರೊ ಆಡಳಿತವು ಒಪ್ಪಲೇಬೇಕಿದೆ ಹಾಗೂ ಜಾರಿ ಮಾಡಬೇಕಿದೆ. ರಾಜ್ಯ ಸರ್ಕಾರಕ್ಕೆ ಅಥವಾ ಮೆಟ್ರೊ ರೈಲು ನಿಗಮಕ್ಕೆ ಈ ಶಿಫಾರಸುಗಳನ್ನು ರದ್ದುಗೊಳಿಸುವ ಅಥವಾ ಉಲ್ಲಂಘಿಸುವ ಕಾನೂನಾತ್ಮಕ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.’ಸಂಸತ್ತಿನಲ್ಲಿ ತಾವೇ (ಕೇಂದ್ರ)ಈ ಶಿಫಾರಸುಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡಿ ಈಗ ನಮ್ಮ ಸರ್ಕಾರದ ಮೇಲೆ ಬೆಲೆ ಏರಿಕೆ ನಿರ್ಧಾರದ ಆರೋಪ ಹೊರಿಸಲಾಗುತ್ತಿದೆ. ಇದು ಜನರನ್ನು ಉದ್ದೇಶಪೂರ್ವಕವಾಗಿ ತಪ್ಪು ದಾರಿಗೆಳೆಯುವ ಪ್ರಯತ್ನ. ದರ ಪರಿಷ್ಕರಣೆಯ ಹೊಣೆಯನ್ನು ನಮ್ಮ ಸರ್ಕಾರದ ತಲೆಗೆ ಕಟ್ಟುವುದು ದುಷ್ಟತನ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ದರ ಪರಿಷ್ಕರಣೆಯ ಎಲ್ಲ ಪ್ರಕ್ರಿಯೆಗಳನ್ನು ಕಾನೂನು ನಿಗದಿಪಡಿಸುತ್ತದೆ. ಆದರೆ ಜನ ಹಿತದ ವಿಚಾರದಲ್ಲಿ ನಮ್ಮ ಬದ್ಧತೆ ಪ್ರಶ್ನಾತೀತವಾಗಿದ್ದು, ನಾವು ಜನರೊಂದಿಗೆ ದೃಢವಾಗಿ ಇರುತ್ತೇವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಎಲ್ಲರಿಗೂ ಲಭ್ಯವಾಗುವಂತೆ ಕೈಗೆಟುಕುವ ದರದಲ್ಲಿರಬೇಕು ಮತ್ತು ದೈನಂದಿನ ಬದುಕಿಗೆ ಬಲ ತುಂಬುವಂತಿರಬೇಕು. ಬೆಂಗಳೂರಿನ ಬೆಳವಣಿಗೆಯೂ ಪ್ರಯಾಣಿಕರಿಗೆ ಹೊರೆಯಾಗಬಾರದು’ ಎಂದು ಅವರು ಹೇಳಿದ್ದಾರೆ.’ನಗರಗಳ ಸಂಪರ್ಕ ಹಾಗೂ ಸಾರಿಗೆ, ಸಾರ್ವಜನಿಕ ಸೇವೆಗಳು ಮತ್ತು ಜನರ ಹಿತ ರಕ್ಷಿಸುವಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿ ರಾಜ್ಯ, ಬೆಂಗಳೂರು ನಗರ ನಿವಾಸಿಗಳ ಹಿತರಕ್ಷಣೆಗಾಗಿ ಸಂವಿಧಾನಾತ್ಮಕವಾಗಿ, ರಚನಾತ್ಮಕವಾಗಿ ಮತ್ತು ದೃಢವಾಗಿ ನಿಲ್ಲಲಿದ್ದೇವೆ. ವಿರೋಧ ಪಕ್ಷಗಳು ಹರಡುತ್ತಿರುವ ತಪ್ಪು ಮಾಹಿತಿಯನ್ನು ಬದಿಗೊತ್ತಿ ರಾಜ್ಯದ ಹಿತಕ್ಕಾಗಿ ನೀವೆಲ್ಲರೂ ನಮ್ಮ ಜೊತೆ ನಿಲ್ಲಬೇಕು’ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ.

ಕೇಂದ್ರಕ್ಕೆ ಸಿ.ಎಂ ಒತ್ತಾಯವೇನು?

*ದರ ನಿಗದಿ ಸಮಿತಿಯು ಶಿಫಾರಸು ಮಾಡಿರುವ ದರವನ್ನು ಮರುಪರಿಶೀಲಿಸಬೇಕು.

*ದೈನಂದಿನ ಪ್ರಯಾಣಿಕರು ವಿದ್ಯಾರ್ಥಿಗಳು ಮತ್ತು ಬಡಜನರಿಗೆ ಅನುಕೂಲವಾಗುವಂತೆ ಸಮಾನವಾಗಿ ದರ ನಿಗದಿ ಮಾಡುವ ವ್ಯವಸ್ಥೆಯನ್ನು ಅನುಸರಿಸಬೇಕು.

*ಸಾಮಾಜಿಕ ನ್ಯಾಯದೊಂದಿಗೆ ಸುಸ್ಥಿರ ಆರ್ಥಿಕತೆಯನ್ನು ಸರಿದೂಗಿಸುವ ನೀತಿಗಳ ಬಗ್ಗೆ ಗಮನ ಹರಿಸಬೇಕು.

ದರ ಏರಿಕೆ ಖಂಡಿಸಿ ದಿನಸಿ ಪ್ರದರ್ಶನ

ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆಯನ್ನು ಖಂಡಿಸಿ “ನಮ್ಮ ಕನ್ನಡ ಸೇನೆ’ಯ ಸದಸ್ಯರು ಶಾಂತಿನಗರದಲ್ಲಿ ಇರುವ ಬಿಎಂಆರ್‌ಸಿಎಲ್ ಕಚೇರಿ ಬಳಿ ದಿನಸಿ ವಸ್ತುಗಳನ್ನು ಪ್ರದರ್ಶಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.’ಬಿಎಂಆರ್‌ಸಿಎಲ್ ಕಳೆದ ವರ್ಷ ಪ್ರಯಾಣ ದರವನ್ನು ವಿಪರೀತ ಏರಿಕೆ ಮಾಡಿತ್ತು. ಈಗ ಮತ್ತೆ ಏರಿಸುತ್ತಿದೆ. ನಮ್ಮಲ್ಲಿ ದುಡ್ಡಿಲ್ಲ. ದಿನಸಿ ವಸ್ತುಗಳನ್ನು ತೆಗೆದುಕೊಂಡು ನಮಗೆ ಟಿಕೆಟ್ ಕೊಡಿ’ ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಸೇನೆಯ ಅಧ್ಯಕ್ಷ ಎಂ. ಬಸವರಾಜ ಪಡುಕೋಟೆ ನೇತೃತ್ವದಲ್ಲಿ ನಿತ್ಯ ಬಳಕೆ ವಸ್ತುಗಳಾದ ಅಕ್ಕಿ ಬೇಳೆ, ಹಾಲು, ಸೋಪು ಪ್ರದರ್ಶಿಸಲಾಯಿತು.

[t4b-ticker]
error: Content is protected !!