ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಮಾದರಿಯಲ್ಲೇ ಗ್ರಾಮ ಪಂಚಾಯತಿ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲೂ ಇವಿಎಂ(ಎಲೆಕ್ಟ್ರಾನಿಕ್ ಮತಯಂತ್ರ) ಬದಲಿಗೆ ಮತಪತ್ರ (ಬ್ಯಾಲೆಟ್ ಪೇಪರ್) ಬಳಕೆಗೆ ಅವಕಾಶ ಕಲ್ಪಿಸುವ ಸಂಬಂಧ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ತಿದ್ದುಪಡಿ ವಿಧೇಯಕ-2026’ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ರಾಜ್ಯ ಸರಕಾರದ ನಿರ್ಧಾರದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗೆ ಇವಿಎಂ ಬದಲು ಮತಪತ್ರ ಬಳಸಲು ರಾಜ್ಯ ಚುನಾವಣಾ ಆಯೋಗ ಇತ್ತೀಚೆಗೆ ನಿರ್ಧಾರ ಕೈಗೊಂಡಿತ್ತು. ಸಂಪುಟ ಸಭೆಯಲ್ಲಿ ಪಂಚಾಯತಿ ಚುನಾವಣೆಯಲ್ಲೂ ಮತಪತ್ರ ಬಳಕೆ ಬಗ್ಗೆ ವಿಸ್ತೃತ ಚರ್ಚೆ ನಡೆದು ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಎಚ್.ಕೆ.ಪಾಟೀಲ್, ”ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆಗೆ ಇವಿಎಂ ಬದಲಿಗೆ ಮತಪತ್ರ ಬಳಸಲು ನಿರ್ಧರಿಸಲಾಗಿದೆ. ಇದೇ ರೀತಿ ಪಂಚಾಯತಿಗಳ ಚುನಾವಣೆಗೂ ಮತಪತ್ರ ಬಳಸಲು ತಿದ್ದುಪಡಿ ಕಾಯಿದೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ,” ಎಂದು ಹೇಳಿದರು.
ಪಂಚಾಯತಿ ಚುನಾವಣೆ ಯಾವಾಗ ?
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಅಧಿಕಾರಾವಧಿಯು ಮಾರ್ಚ್ ವೇಳೆಗೆ ಮುಕ್ತಾಯವಾಗಲಿದೆ. ಇನ್ನೂ ಜಿಲ್ಲಾ, ತಾಲೂಕು ಪಂಚಾಯತಿ, ಜಿಬಿಎ ಚುನಾವಣೆಗಳು ಕಳೆದ 5 ವರ್ಷಗಳಿಂದ ಬಾಕಿ ಇವೆ. ಸದ್ಯ ಮೀಸಲಾತಿ ನಿಗದಿ ವಿಚಾರವಾಗಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಗಳು ಮುಕ್ತಾಯವಾಗಿ ಮೀಸಲಾತಿ ನಿಗದಿ ಯಾಗಲು ಒಂದೆರಡು ತಿಂಗಳು ಬೇಕಾಗಬಹುದು. ಮುಂಬರುವ ಮೇಗೆ ಪಂಚಾಯತಿಗಳ ಚುನಾವಣೆ ನಡೆಸುವ ಸಾಧ್ಯತೆ ಇದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ಷೇಪ
ಚುನಾವಣೆಗಳಲ್ಲಿ ಇವಿಎಂ ಬದಲು ಮತಪತ್ರಕ್ಕೆ ಮಣೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ಆಧುನಿಕತೆ, ತಂತ್ರಜ್ಞಾನ ವಿರುದ್ಧದ ನಡೆ ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ಷೇಪಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯತಿ ಚುನಾವಣೆಯಲ್ಲೂ ಮತಪತ್ರಗಳ ಬಳಕೆಗೆ ನಿರ್ಧರಿಸಿರುವುದು ಪ್ರಗತಿ ವಿರುದ್ಧದ ನಿಲುವಾಗಿದೆ. ಇಡೀ ದೇಶವೇ ಆಧುನಿಕ ತಂತ್ರಜ್ಞಾನ ಮತ್ತು ಪ್ರಗತಿಯತ್ತ ಸಾಗುತ್ತಿದೆ. ಆದರೆ, ರಾಜ್ಯ ಸರಕಾರ ಚುನಾವಣೆಯಲ್ಲಿಮತಪತ್ರ ಬಳಕೆ ಮೂಲಕ ಆಧುನಿಕತೆಯ ವಿರುದ್ಧ ಕಾರ್ಯ ನಿರ್ವಹಿಸುತ್ತಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ದೇಶಾದ್ಯಂತ ಇವಿಎಂ ಪರಿಚಯದ ಬಳಿಕ ಚುನಾವಣಾ ಅಕ್ರಮಗಳಿಗೆ ಬ್ರೇಕ್ ಬಿದ್ದಿದೆ. ಆದಾಗ್ಯೂ ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಹೈಕಮಾಂಡ್ ಮೆಚ್ಚಿಸಲು ಈ ರೀತಿ ವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿದೆ, ಎಂದು ಜೋಶಿ ಕಿಡಿಕಾರಿದ್ದಾರೆ.
ರಾಷ್ಟ್ರಪತಿಗಳಿಗೆ ಸಲ್ಲಿಸುವ ವರದಿ ಸದ್ಯ ಅಂತಿಮ
ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವನ್ನು ರಾಜ್ಯಪಾಲರು ರಾಷ್ಟ್ರಪತಿ ಅವಗಾಹನೆಗೆ ಸಲ್ಲಿಸಿದ್ದಾರೆ. ರಾಷ್ಟ್ರಪತಿಗಳು ಒಪ್ಪಿಗೆ ನೀಡಲು ಯಾವೆಲ್ಲಾ ವಿಶೇಷ ಮಾಹಿತಿಯನ್ನು ಒದಗಿಸಬೇಕೋ ಅದನ್ನು ಸರಕಾರ ಒದಗಿಸಲಿದೆ. ರಾಷ್ಟ್ರಪತಿಗಳಿಗೆ ಏನೆಲ್ಲಾಅಂಶಗಳಿರುವ ವರದಿ ಸಲ್ಲಿಸಬೇಕೆಂಬುದನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.















































