ಫೆಬ್ರವರಿ 19ಕ್ಕೆ ಸಾರಿಗೆ ನೌಕರರ ರಾಜ್ಯವ್ಯಾಪಿ ಪ್ರತಿಭಟನೆ; ಬೇಡಿಕೆ ಈಡೇರದಿದ್ದರೆ ಬಸ್‌ ಬಂದ್‌ ಎಚ್ಚರಿಕೆ

Picture of Savistara

Savistara

Bureau Report

ಬೆಂಗಳೂರು: ಕರ್ನಾಟಕದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಸರ್ಕಾರದ ವಿರುದ್ಧ ಮತ್ತೆ ಹೋರಾಟಕ್ಕೆ ಸಜ್ಜಾಗಿದ್ದಾರೆ. ಜಂಟಿ ಕ್ರಿಯಾ ಸಮಿತಿ (ಜೆಎಸಿ) ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ನೌಕರರು ಫೆಬ್ರವರಿಯ ಮೂರನೇ ವಾರದಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.ಈ ಹಿಂದೆ ಜನವರಿ 29ರಂದು ನಿಗದಿಯಾಗಿದ್ದ ಹೋರಾಟವನ್ನು ಎಚ್.ವಿ. ಅನಂತ್ ಸುಬ್ಬರಾವ್ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ಫೆಬ್ರವರಿ 19ರಂದು ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯುವುದಾಗಿ ಜೆಎಸಿ ಪ್ರಕಟಿಸಿದೆ. ಬೇಡಿಕೆಗಳು ಈಡೇರದಿದ್ದರೆ ಬಸ್‌ ಸಂಚಾರ ಸ್ಥಗಿತಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನೂ ನೌಕರರು ನೀಡಿದ್ದಾರೆ.ನೌಕರರ ಪ್ರಮುಖ ಬೇಡಿಕೆಗಳಲ್ಲಿ 38 ತಿಂಗಳ ವೇತನ ಹಿಂಬಾಕಿ ಪಾವತಿ, 2024 ಜನವರಿ 1ರಿಂದ ಅನ್ವಯವಾಗುವಂತೆ ಹೊಸ ವೇತನ ಪರಿಷ್ಕರಣೆ ಜಾರಿಗೊಳಿಸುವುದು ಹಾಗೂ ಇತರೆ ಸೇವಾ ಸಂಬಂಧಿತ ವಿಷಯಗಳು ಸೇರಿವೆ. ಈ ಕುರಿತು ಸರ್ಕಾರದೊಂದಿಗೆ ಹಲವು ಸುತ್ತು ಚರ್ಚೆಗಳು ನಡೆದರೂ ಯಾವುದೇ ಸ್ಪಷ್ಟ ಪ್ರಗತಿ ಕಂಡುಬಂದಿಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಆರೋಪಿಸಿದೆ.ಇದೀಗ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಜೆಎಸಿ ಪತ್ರ ಬರೆದು ಅಂತಿಮ ಎಚ್ಚರಿಕೆ ನೀಡಿದೆ. ನಿಗದಿತ ಅವಧಿಯಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿ 19ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಮುಂದಿನ ಬೆಳವಣಿಗೆಗಳತ್ತ ಸಾರ್ವಜನಿಕರ ಗಮನ ಕೇಂದ್ರೀಕೃತವಾಗಿದೆ.

[t4b-ticker]
error: Content is protected !!