ರಾಜ್ಯದ ಕರಾವಳಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ವಿಶೇಷ ಕೊಡುಗೆ; ಸಾಗರಮಾಲಾ ಯೋಜನೆಯಡಿ 491 ಕೋಟಿ ರೂ. ವೆಚ್ಚದ 8 ಯೋಜನೆಗಳ ಅನುಷ್ಠಾನ | ಹವಾಮಾನ ವೈಪರೀತ್ಯ ಎದುರಿಸಲು ಸಜ್ಜಾದ ಕರಾವಳಿ: ಕರ್ನಾಟಕದ ಮೀನುಗಾರರ ಗ್ರಾಮಗಳು ಇನ್ನು ‘ಹವಾಮಾನ ನಿರೋಧಕ ಗ್ರಾಮ’

Picture of Savistara

Savistara

Bureau Report

ನವದೆಹಲಿ, 09 ಫೆಬ್ರವರಿ 2026: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್.ಡಿ.ಎ ಸರ್ಕಾರ ಕರ್ನಾಟಕದ ಕರಾವಳಿ ತೀರದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ, ‘ಸಾಗರಮಾಲಾ’ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 491 ಕೋಟಿ ರೂ. ವೆಚ್ಚದಲ್ಲಿ 8 ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರಭಾನಂದ ಸೋನೊವಾಲ್ ಅವರು ಮಾಹಿತಿ ನೀಡಿದ್ದಾರೆ. ಈ ವಿಷಯದ ಕುರಿತಂತೆ ಪ್ರಸಕ್ತ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರಿಗೆ ಉತ್ತರ ನೀಡಿರುವ ಸಚಿವರು, ಈ ಯೋಜನೆಗಳು ಬಂದರುಗಳ ಆಧುನೀಕರಣ, ಮೀನುಗಾರಿಕೆ ಮೂಲಸೌಕರ್ಯ ವೃದ್ಧಿ ಮತ್ತು ಕರಾವಳಿ ಸಮುದಾಯದ ಆರ್ಥಿಕ ಪ್ರಗತಿಗೆ ಪೂರಕವಾಗಿವೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಉಡುಪಿಯ ಮಲ್ಪೆ ಬಂದರು ಮತ್ತು ಉತ್ತರ ಕನ್ನಡದ ಅಮದಳ್ಳಿಯ ಮೀನುಗಾರಿಕಾ ಬಂದರುಗಳ ಆಧುನೀಕರಣ ಹಾಗೂ ಕಾರವಾರ ಬಂದರಿನಲ್ಲಿ ಅಗ್ನಿಶಾಮಕ ಉಪಕರಣಗಳ ಅಳವಡಿಕೆ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿವೆ.

ಉಳಿದಂತೆ, ಮಂಗಳೂರಿನ ಕುಲಾಯಿ ಮೀನುಗಾರಿಕಾ ಬಂದರು ನಿರ್ಮಾಣ (196.51 ಕೋಟಿ ರೂ.) ಮತ್ತು ಉಡುಪಿಯ ಹೆಜಮಾಡಿ ಕೊಡಿ ಮೀನುಗಾರಿಕಾ ಕೇಂದ್ರದ ಅಭಿವೃದ್ಧಿ ಸೇರಿದಂತೆ ಪ್ರಮುಖ ಯೋಜನೆಗಳು ಪ್ರಗತಿಯಲ್ಲಿದ್ದು, ಇವುಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ನಿರಂತರ ಸಮನ್ವಯ ಸಭೆಗಳನ್ನು ನಡೆಸಲಾಗುತ್ತಿದೆ. ಈ ಯೋಜನೆಗಳ ಮೂಲಕ ಕರಾವಳಿಯ ಮೀನುಗಾರರ ಬದುಕಿನಲ್ಲಿ ಹೆಚ್ಚಿನ ಪರಿವರ್ತನೆ ಸಾಧ್ಯವಾಗುವುದಲ್ಲದೆ, ನವ ಮಂಗಳೂರು ಬಂದರು ಪ್ರಾಧಿಕಾರ ಮತ್ತು ರಾಜ್ಯ ಮೀನುಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಈ ಭಾಗದಲ್ಲಿ ಉದ್ಯೋಗಾವಕಾಶಗಳು ಕೂಡ ಹೆಚ್ಚಲಿವೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಆರ್ಥಿಕ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಗಳು ಹೊಸ ಆಯಾಮ ನೀಡಲಿವೆ ಎಂದು ಕೇಂದ್ರ ಸಚಿವರು ಸಂಸದ ರಾಘವೇಂದ್ರ ಅವರಿಗೆ ತಿಳಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸೇರಿರುವ ಬೈಂದೂರು ಕ್ಷೇತ್ರದ ಮೀನುಗಾರರಿಗೆ ನೆರವು ಮತ್ತು ಆ ಪ್ರದೇಶದ ಅಭಿವೃದ್ಧಿಯ ಜೊತೆಗೆ ರಾಜ್ಯದ ಸಮಗ್ರ ಕರಾವಳಿ ಪ್ರದೇಶಕ್ಕೆ ಈ ಯೋಜನೆಗಳ ಲಾಭ ದೊರಕಲಿದೆ.

ಹವಾಮಾನ ವೈಪರೀತ್ಯ ಎದುರಿಸಲು ಸಜ್ಜಾದ ಕರಾವಳಿ: ಕರ್ನಾಟಕದ ಮೀನುಗಾರರ ಗ್ರಾಮಗಳು ಇನ್ನು ‘ಹವಾಮಾನ ನಿರೋಧಕ ಗ್ರಾಮ’:

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ (PMMSY) ದೇಶದ 100 ಕರಾವಳಿ ಮೀನುಗಾರಿಕಾ ಗ್ರಾಮಗಳನ್ನು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಬಲ್ಲ ‘ಹವಾಮಾನ ಸ್ಥಿತಿಸ್ಥಾಪಕ ಗ್ರಾಮಗಳನ್ನಾಗಿ’ (Climate Resilient Coastal Fishermen Villages – CRCFV) ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಕರ್ನಾಟಕದ ಐದು ಗ್ರಾಮಗಳು ಆಯ್ಕೆಯಾಗಿವೆ. ಮೀನುಗಾರರ ಜೀವನೋಪಾಯವನ್ನು ರಕ್ಷಿಸಲು ಮತ್ತು ಕರಾವಳಿ ಮೂಲಸೌಕರ್ಯಗಳನ್ನು ಬಲಪಡಿಸಲು ರೂಪಿಸಲಾದ ಈ ಯೋಜನೆಯಡಿ, ಕರ್ನಾಟಕದ ಉಪ್ಪುಂದ ಮಡಿಕಲ್, ಮಟ್ಟದಹಿತ್ಲು, ಕೋಟೇಶ್ವರ, ಕೊಡವೂರು ಮತ್ತು ಬೈಲೂರು ಮೀನುಗಾರಿಕಾ ಗ್ರಾಮಗಳನ್ನು ಈ ವಿಶೇಷ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ. ಹವಾಮಾನ ಬದಲಾವಣೆಯ ಅಪಾಯಗಳಿಂದ ಮೀನುಗಾರರನ್ನು ರಕ್ಷಿಸುವುದಲ್ಲದೆ, ಆಧುನಿಕ ಮೂಲಸೌಕರ್ಯ, ಸುರಕ್ಷಿತ ನೆಲೆಗಳು ಮತ್ತು ಪರಿಸರ ಸ್ನೇಹಿ ಮೀನುಗಾರಿಕಾ ಚಟುವಟಿಕೆಗಳಿಗೆ ಈ ಯೋಜನೆಯ ಮೂಲಕ ಕೇಂದ್ರದ ಮೋದಿ ಸರ್ಕಾರ ಸಂಪೂರ್ಣ ಆರ್ಥಿಕ ನೆರವು ನೀಡಲಿದೆ. ಕರಾವಳಿ ಮೀನುಗಾರರ ಆರ್ಥಿಕ ಸಬಲೀಕರಣ ಹಾಗೂ ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು ಮೈಲಿಗಲ್ಲಾಗಿದ್ದು, ಕರ್ನಾಟಕದ ಕರಾವಳಿ ತೀರ ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯದ ವಿರುದ್ಧ ಬಲಿಷ್ಠ ರಕ್ಷಣಾ ಕವಚವನ್ನು ಹೊಂದಲಿದೆ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಲಲನ್ ಸಿಂಗ್ ಸಂಸದ ರಾಘವೇಂದ್ರ ಅವರಿಗೆ ಉತ್ತರಿಸಿದ್ದಾರೆ.

[t4b-ticker]
error: Content is protected !!