ಪುತ್ತೂರು: ಅವೈಜ್ಞಾನಿಕ ಇಂಟರ್‌ಲಾಕ್ ಕಾಮಗಾರಿ -ಸರಣಿ ಅಪಘಾತ; ಸಾರ್ವಜನಿಕರ ಆಕ್ರೋಶದ ಬಳಿಕ ಎಚ್ಚೆತ್ತ ನಗರಸಭೆ, ದುರಸ್ತಿ ಕಾರ್ಯ ಆರಂಭ

Picture of Savistara

Savistara

Bureau Report

ಪುತ್ತೂರು: ನಗರದ ಜನನಿಬಿಡ ದರ್ಬೆ ಧನ್ವಂತರಿ ಆಸ್ಪತ್ರೆ ಸಮೀಪದ ಮುಖ್ಯರಸ್ತೆಗೆ ಅಳವಡಿಸಲಾದ ಇಂಟರ್‌ಲಾಕ್‌ಗಳು ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಿತ್ತು ಹೋಗಿದ್ದು, ಸರಣಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಸಾರ್ವಜನಿಕರ ತೀವ್ರ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ನಗರಸಭೆ ಮಂಗಳವಾರದಿಂದ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ.

ಅಪಘಾತಗಳ ತಾಣವಾದ ರಸ್ತೆ:ಮಳೆಗಾಲದಲ್ಲಿ ಡಾಮಾರು ಕಾಮಗಾರಿ ಬಾಳಿಕೆ ಬರುವುದಿಲ್ಲ ಎಂಬ ಕಾರಣ ನೀಡಿ ನಗರಸಭೆಯು ಸುಮಾರು 6 ತಿಂಗಳ ಹಿಂದೆ ನಗರದ ಮೂರು ಕಡೆಗಳಲ್ಲಿ ರಸ್ತೆಗೆ ಇಂಟರ್‌ಲಾಕ್ ಅಳವಡಿಸಿತ್ತು. ಆದರೆ, ದರ್ಬೆ ಸಮೀಪ ಅಳವಡಿಸಲಾದ ಇಂಟರ್‌ಲಾಕ್‌ಗಳು ಘನ ವಾಹನಗಳ ಭಾರ ತಾಳಲಾರದೆ ತುಂಡಾಗಿ ಮೇಲೆದ್ದಿವೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವುದು ನಿರಂತರವಾಗಿ ನಡೆಯುತ್ತಿದೆ. ಫೆಬ್ರವರಿ 6ರಂದು ಮಧ್ಯಾಹ್ನ ಸ್ಕೂಟ‌ರ್ ಸವಾರರೊಬ್ಬರು ಇಲ್ಲಿ ಬಿದ್ದು ಗಾಯಗೊಂಡಿದ್ದು, ಸ್ಥಳೀಯ ರಿಕ್ಷಾ ಚಾಲಕರು ರಕ್ಷಣೆಗೆ ಧಾವಿಸಿದ್ದರು.

ಎಚ್ಚರಿಕೆ ನೀಡಿದ್ದ ಸಾಮಾಜಿಕ ಕಾರ್ಯಕರ್ತರು:ಪುತ್ತೂರು-ದರ್ಬೆ ರಸ್ತೆಯು ಅತ್ಯಂತ ಜನನಿಬಿಡ ಪ್ರದೇಶವಾಗಿದ್ದು. ಇಲ್ಲಿ ನಿತ್ಯ ನೂರಾರು ಘನ ವಾಹನಗಳು ಸಂಚರಿಸುತ್ತವೆ. ಈ ರಸ್ತೆಗೆ ಇಂಟರ್‌ಲಾಕ್ ಅಳವಡಿಸುವ ಯೋಜನೆಯ ಆರಂಭದಲ್ಲೇ ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಇಂಟರ್‌ಲಾಕ್‌ಗಳು ಭಾರೀ ವಾಹನಗಳ ಒತ್ತಡ ತಡೆಯುವ ಶಕ್ತಿ ಹೊಂದಿಲ್ಲ ಎಂದು ಎಚ್ಚರಿಸಿದರೂ ನಗರಸಭೆ ನಿರ್ಲಕ್ಷ್ಯ ವಹಿಸಿತ್ತು ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ದುರಸ್ತಿ ಕಾರ್ಯ ಚುರುಕು:ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಫೆಬ್ರವರಿ 10ರಂದು (ಮಂಗಳವಾರ) ಕಿತ್ತುಹೋಗಿರುವ ಇಂಟರ್‌ಲಾಕ್‌ಗಳನ್ನು ತೆರವುಗೊಳಿಸಿ ಹೊಸದಾಗಿ ಮರು ಜೋಡಣೆ ಮಾಡುವ ಕಾರ್ಯ ಆರಂಭವಾಗಿದೆ. ಇದರಿಂದಾಗಿ ರಸ್ತೆಯ ಒಂದು ಬದಿಯನ್ನು ಬಂದ್ ಮಾಡಲಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹಳೆಯದರಲ್ಲಿ ಉತ್ತಮವಾಗಿರುವ ಇಂಟರ್‌ಲಾಕ್‌ಗಳನ್ನು ಮರು ಬಳಸಿ, ತುಂಡಾದ ಜಾಗಕ್ಕೆ ಹೊಸದನ್ನು ಅಳವಡಿಸಲಾಗುತ್ತಿದೆ.

ಇಂಜಿನಿಯರ್ ಸಮಜಾಯಿಷಿ:“ಜುಲೈ ತಿಂಗಳ ಭಾರೀ ಮಳೆಯ ಸಂದರ್ಭದಲ್ಲಿ ಈ ಇಂಟರ್‌ಲಾಕ್‌ಗಳನ್ನು ಅಳವಡಿಸಲಾಗಿತ್ತು. ಮಳೆಯ ಕಾರಣದಿಂದ ಅವು ಸರಿಯಾಗಿ ನೆಲಕ್ಕೆ ‘ಸೆಟ್’ ಆಗದ ಹಿನ್ನೆಲೆಯಲ್ಲಿ ಕಿತ್ತು ಬಂದಿವೆ. ಇದೀಗ ಯಾವುದೇ ಹೊಸ ಟೆಂಡ‌ರ್ ಕರೆಯದೆ, ಗುತ್ತಿಗೆದಾರರ ಸ್ವಂತ ಖರ್ಚಿನಲ್ಲೇ ಮರು ಅಳವಡಿಕೆ ಕಾರ್ಯ ಮಾಡಿಸಲಾಗುತ್ತಿದೆ.” ಎಂದು ನಗರಸಭೆ ಇಂಜಿನಿಯರ್ ಸ್ಪಷ್ಟನೆ ನೀಡಿದ್ದಾರೆ.ನಗರದ ಮೂರು ಕಡೆಗಳಲ್ಲಿ ಅಳವಡಿಸಲಾದ ಇಂಟರ್‌ಲಾಕ್‌ಗಳೂ ಇದೇ ರೀತಿ ಸಮಸ್ಯೆಗೆ ಈಡಾಗಿದ್ದು. ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರ ಹಣ ವ್ಯರ್ಥವಾಗುತ್ತಿದೆ ಎಂಬ ಆಕ್ರೋಶ ಕೇಳಿಬಂದಿದೆ. ಮುಂದಾದರೂ ವೈಜ್ಞಾನಿಕವಾಗಿ ಶಾಶ್ವತ ರಸ್ತೆ ಕಾಮಗಾರಿ ನಡೆಸಲಿ ಎಂಬುದು ಪುತ್ತೂರು ಜನರ ಒತ್ತಾಯವಾಗಿದೆ.

[t4b-ticker]
error: Content is protected !!