ನಾಗಪುರ: ಭಾರತದ ಆರ್ಥಿಕ ಪ್ರಗತಿಯಲ್ಲಿ ಪಶುವೈದ್ಯರುಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಅವರು ತಮ್ಮ ಸಾಂಪ್ರದಾಯಿಕ ಜವಾಬ್ದಾರಿಗಳ ಆಚೆಗೂ ಯೋಚಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಕರೆ ನೀಡಿದ್ದಾರೆ.ನಾಗಪುರದಲ್ಲಿ ಮಹಾರಾಷ್ಟ್ರ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (MAFSU) ಹಾಗೂ ಭಾರತೀಯ ಶ್ವಾನ ಅಭ್ಯಾಸ ಪ್ರಗತಿ ಸೊಸೈಟಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.ಹಿಂದೆ ನಾವು ಪಶುವೈದ್ಯರ ಪಾತ್ರ ಸೀಮಿತ ಎಂದು ಭಾವಿಸಿದ್ದೆವು. ಆದರೆ ಈಗ ಕಾಲ ಬದಲಾಗಿದೆ. ಪಶುವೈದ್ಯರು ಕೇವಲ ಪ್ರಾಣಿ ತಜ್ಞರಲ್ಲ, ಅವರು ಸಮಾಜದ ಪ್ರಮುಖ ಪಾಲುದಾರರು ಮತ್ತು ರಾಷ್ಟ್ರದ ಆರ್ಥಿಕತೆಗೆ ಕೊಡುಗೆ ನೀಡುವ ಶಕ್ತಿಯಾಗಿದ್ದಾರೆ ಎಂದು ಹೇಳಿದರು.ಮನುಷ್ಯರು, ಪ್ರಾಣಿಗಳು ಮತ್ತು ಪ್ರಕೃತಿ ಪರಸ್ಪರ ಸಾಮರಸ್ಯದಿಂದ ಬದುಕಬೇಕು. ಈ ಸಮತೋಲಿತ ಸಹಬಾಳ್ವೆಯ ಬಗ್ಗೆ ಸಮಾಜ ಗಂಭೀರವಾಗಿ ಚಿಂತಿಸಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.ಪಶುವೈದ್ಯಕೀಯ ಕ್ಷೇತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರತ್ಯೇಕ ಆಡಳಿತ ಮಂಡಳಿ ಅಥವಾ ಕೌನ್ಸಿಲ್ ಇರಬೇಕು. ಆಯಾ ಕ್ಷೇತ್ರದ ತಜ್ಞರು ಮಾರ್ಗದರ್ಶನ ನೀಡಿದಾಗ ಮಾತ್ರ ಯಾವುದೇ ಕ್ಷೇತ್ರವು ಪ್ರಗತಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕೃಷಿ ಆಧಾರಿತ ಆರ್ಥಿಕತೆ: ಭಾರತವು ಕೃಷಿ ಪ್ರಧಾನದೇಶವಾಗಿದ್ದು, ರೈತರಿಗೆ ಮತ್ತು ಪಶುಸಂಗೋಪನೆಯಲ್ಲಿ ತೊಡಗಿರುವವರಿಗೆ ಪಶುವೈದ್ಯರ ಬೆಂಬಲ ಅತಿ ಅಗತ್ಯ. ಇದು ಪರೋಕ್ಷವಾಗಿ ದೇಶದ ಆರ್ಥಿಕ ವೃದ್ಧಿಗೆ ಕಾರಣವಾಗಲಿದೆ ಎಂದರು.ಇತ್ತೀಚೆಗೆ ಬೀದಿ ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಅವರು, ಈ ವಿಷಯದಲ್ಲಿ ತೀವ್ರ ಸ್ವರೂಪದ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇಂತಹ ವಿವಾದಾತ್ಮಕ ವಿಷಯಗಳನ್ನು ಬಗೆಹರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕು ಎಂದು ಸಲಹೆ ನೀಡಿದರು.













































