ಕರ್ನಾಟಕದ ಹಲವು ಜಿಲ್ಲೆಗಳ ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ CT ಮತ್ತು MRI ಸ್ಕ್ಯಾನಿಂಗ್ ಸೇವೆ ಸ್ಥಗಿತಗೊಂಡಿದೆ. ಈ ವಿಚಾರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಆದರೆ ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ, ಜನರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸಚಿವರು, “ಸರ್ಕಾರದ ಹಣದ ಸರಿಯಾದ ಸದ್ಬಳಕೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ನಮ್ಮ ಬದ್ಧತೆ” ಎಂದು ತಿಳಿಸಿದ್ದಾರೆ.”CT ಮತ್ತು MRI ಸ್ಕ್ಯಾನಿಂಗ್ ಸೇವೆ ಪಡೆಯಲು ಜನರಿಗೆ ಯಾವುದೇ ಅಡಚಣೆ ಆಗಬಾರದು ಎಂಬ ಉದ್ದೇಶದಿಂದ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಲಾಗಿದೆ. CT ಮತ್ತು MRI ಸೇವೆ ನೀಡುತ್ತಿದ್ದ Krsnaa Diagnostics Ltd ಸಂಸ್ಥೆ ಸರಿಯಾದ ದಾಖಲೆ ಹಾಗೂ ದೃಢೀಕರಣ ಪದ್ಧತಿಗಳನ್ನು ಪಾಲಿಸದ ಹಿನ್ನೆಲೆಯಲ್ಲಿ, ನಮ್ಮ ಸರ್ಕಾರ ಸ್ಕ್ಯಾನಿಂಗ್ ಪ್ರಕ್ರಿಯೆಗೆ ವ್ಯವಸ್ಥಿತ ನಿಯಮಾವಳಿ ಮತ್ತು ಪರಿಶೀಲನಾ ಕ್ರಮಗಳನ್ನು ಆಗಸ್ಟ್ 30, 2024ರಂದು ಜಾರಿಗೆ ತಂದಿತು” ಎಂದು ವಿವರಿಸಿದ್ದಾರೆ.
“ಇದರ ಪರಿಣಾಮವಾಗಿ 2024ರ ಏಪ್ರಿಲ್‌ನಿಂದ 2025ರ ಡಿಸೆಂಬರ್ ತನಕ ಅಗತ್ಯವಿರುವಷ್ಟೇ ಸಿಟಿ ಸ್ಕ್ಯಾನಿಂಗ್ ನಡೆಯಿತು. ಏಪ್ರಿಲ್ 2024 ರಿಂದ ಜುಲೈ 2024ರ ಅವಧಿಯಲ್ಲಿ ಒಟ್ಟು 98,311 ಸ್ಕ್ಯಾನಿಂಗ್ ನಡೆದು, ಅದಕ್ಕೆ 15.24 ಕೋಟಿ ರೂ. ವೆಚ್ಚವಾಗಿತ್ತು. ಆಗಸ್ಟ್ 2024ರಿಂದ ನವೆಂಬರ್ 2024ರ ಅವಧಿಯಲ್ಲಿ ಈ ಪ್ರಮಾಣ 76,217ಕ್ಕೆ ಇಳಿದು 11.81 ಕೋಟಿ ರೂ. ವೆಚ್ಚವಾಯಿತು” ಎಂದು ಹೇಳಿದ್ದಾರೆ.”ಮುಂದೆ ಡಿಸೆಂಬರ್ 2024ರಿಂದ ಮಾರ್ಚ್ 2025ರ ಅವಧಿಯಲ್ಲಿ ಗಣನೀಯ ಇಳಿಕೆ ಕಂಡು ಸ್ಕ್ಯಾನಿಂಗ್ ಸಂಖ್ಯೆ 23,426ಕ್ಕೆ ತಗ್ಗಿ ಕೇವಲ 3.36 ಕೋಟಿ ರೂ. ವೆಚ್ಚವಾಯಿತು. ನಮ್ಮ ಪಾರದರ್ಶಕ ನಿಯಮಾವಳಿ ಸರ್ಕಾರಕ್ಕೆ ಆಗುತ್ತಿದ್ದ ಅನಗತ್ಯ ನಷ್ಟವನ್ನು ತಡೆಯಿತು. ಒಟ್ಟು CT ಸ್ಕ್ಯಾನಿಂಗ್ ಪ್ರಮಾಣದಲ್ಲಿ 76.18% ಹಾಗೂ MRIನಲ್ಲಿ 64.32% ಇಳಿಕೆಯಾಯಿತು. ಅನಗತ್ಯ ಸ್ಕ್ಯಾನಿಂಗ್‌ಗಳಿಗೆ ಕಡಿವಾಣ ಹಾಕುವ ಮೂಲಕ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು ₹200 ಕೋಟಿ ಸಾರ್ವಜನಿಕ ಹಣವನ್ನು ಉಳಿಸಿತು” ಎಂದು ಸ್ಪಷ್ಟಪಡಿಸಿದ್ದಾರೆ.
“ಕೇಂದ್ರ ಸರ್ಕಾರದಿಂದ ಬರಬೇಕಾದ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಅನುದಾನ ವಿಳಂಬವಾದರೂ, ಆರೋಗ್ಯ ಸೇವೆಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗಿಲ್ಲ. ಈಗಾಗಲೇ ಏಳು ಸರ್ಕಾರಿ ಆಸ್ಪತ್ರೆಗಳಲ್ಲಿ MRI ಮತ್ತು ಮೂರು ಆಸ್ಪತ್ರೆಗಳಲ್ಲಿ CT ಸ್ಕ್ಯಾನ್ ಯಂತ್ರಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಇಲಾಖೆಯ ವತಿಯಿಂದ ಸುಧಾರಿತ ಯಂತ್ರಗಳನ್ನು ಪೂರೈಸಲಾಗುತ್ತದೆ” ಎಂದು ಸಚಿವರು ತಿಳಿಸಿದ್ದಾರೆ.













































