ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾಗಿ ಜಾರಕಿಹೊಳಿ ಟೀಂ ಚರ್ಚೆ, ಅಧಿಕಾರ ಹಂಚಿಕೆ ಗೊಂದಲ ಶೀಘ್ರ ಪರಿಹರಿಸಿ:ರಾಜ್ಯ ನಾಯಕರ ಮನವಿ
ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಕೆಲವು ತಿಂಗಳಿಂದ ನಡೆಯುತ್ತಿರುವ ಕುರ್ಚಿ ಕದನ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸುತ್ತಿವೆ. ಮಾರ್ಚ್‌ನಲ್ಲಿ ಬಜೆಟ್ ಅಧಿವೇಶನ ಮುಗಿದ ಬಳಿಕ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ.ದಿಲ್ಲಿಯಲ್ಲಿ ಶನಿವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ ನೇತೃತ್ವದಲ್ಲಿ ಕೆಲವು ಶಾಸಕರ ನಿಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಬಳಿಕ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಇದಕ್ಕೆ ಸಾಕಷ್ಟು ಪುಷ್ಟಿ ನೀಡುತ್ತಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತಂತೆ ಉಂಟಾಗಿರುವ ಗೊಂದಲವನ್ನು ಆದಷ್ಟು ಬೇಗ ಬಗೆಹರಿಸಬೇಕೆಂದು ಈ ನಾಯಕರು ಖರ್ಗೆ ಅವರಲ್ಲಿ ಮನವಿ ಮಾಡಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ (ಸಿಎಂ ಸ್ಥಾನ ತಲಾ ಎರಡೂವರೆ ವರ್ಷ ಎಂಬಂತೆ) ಕುರಿತಂತೆ ನಡೆಯುತ್ತಿರುವ ಕುರ್ಚಿ ಕದನದಿಂದ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ. ಇದರ ಬಗ್ಗೆ ಯಾವುದಾದರೂ ಒಂದು ನಿರ್ಣಯ ತೆಗೆದುಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ವಿಶೇಷವಾಗಿ ನಾಯಕತ್ವ ಗೊಂದಲ ಬಗೆಹರಿಸಬೇಕು ಎಂದು ಈ ನಿಯೋಗ ಖರ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ ಎಂದು ತಿಳಿದುಬಂದಿದೆ.
ಖರ್ಗೆ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಸಹಜವಾಗಿಯೇ ಖರ್ಗೆ ಅವರ ಜತೆ ರಾಜ್ಯ ರಾಜಕೀಯ ವಿಷಯಗಳನ್ನು ಚರ್ಚಿಸಲಾಗಿದೆ. ಆದಷ್ಟು ಬೇಗ ಗೊಂದಲಗಳನ್ನು ಬಗೆಹರಿಸಬೇಕೆಂದು ಮನವಿ ಮಾಡಿದ್ದೇವೆ. ಬಹುಶಃ ಪಕ್ಷದ ಹೈಕಮಾಂಡ್ ಕೂಡ ತಾರ್ಕಿಕ ಅಂತ್ಯಕಾಣಿಸುವ ಹಂತಕ್ಕೆ ಬಂದಂತೆ ಕಾಣುತ್ತಿದೆ. ಆದಷ್ಟು ಬೇಗ ಗೊಂದಲಗಳು ಬಗೆಹರಿಯುವ ಸಾಧ್ಯತೆಗಳಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಈ ಗೊಂದಲಗಳು ಬಹಳ ಹಿಂದೆಯೇ ಬಗೆಹರಿಯಬೇಕಿತ್ತು, ಬಹಳ ವಿಳಂಬವಾಗಿದೆ ಎಂದು ಖರ್ಗೆ ಅವರು ಹೇಳಿದ್ದು ಆದಷ್ಟು ಬೇಗ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಾಗುವುದು ಎಂದು ಭರವಸೆ ನೀಡಿದ್ದಾರೆಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.













































