ಬೆಂಗಳೂರು: ದೇಶದ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕಕ್ಕೆ ತಾನು ಅಭಿವೃದ್ಧಿಗೆ ಪೂರಕವಾದ ನೆರವನ್ನು ಹರಿಸಿರುವುದರ ಕುರಿತ ಅಂಕಿಅಂಶವನ್ನು ಕೇಂದ್ರ ಸರ್ಕಾರ ತೆರೆದಿಟ್ಟಿದೆ. ತೆರಿಗೆ ಹಂಚಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನಕಲ್ಯಾಣ ಯೋಜನೆಗಳ ಮೂಲಕ ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೇಂದ್ರದ ಭರಪೂರ ನೆರವು ಬಲವಾದ ಮೆರುಗು ನೀಡುತ್ತಿದೆ ಎಂದು ಪ್ರತಿಪಾದಿಸಿದೆ.
ದಾಖಲೆಯ ಅನುದಾನ: ಕರ್ನಾಟಕಕ್ಕೆ ಕೇಂದ್ರದ ಅನುದಾನವು ಗಣನೀಯವಾಗಿ ಹೆಚ್ಚಳವಾಗಿದ್ದು, 2014-26ರ ಅವಧಿಯಲ್ಲಿ 3.89 ಲಕ್ಷ ಕೋಟಿ ರೂ.ಗಳ ತೆರಿಗೆ ಹಂಚಿಕೆ ಮಾಡಲಾಗಿದೆ. 2026-27ನೇ ಸಾಲಿನ ಬಜೆಟ್ ಅಂದಾಜಿನಲ್ಲಿ ರಾಜ್ಯಕ್ಕೆ ದಾಖಲೆಯ 63,049 ಕೋಟಿ ರೂ. ಹಣವನ್ನು ನಿಗದಿಪಡಿಸಲಾಗಿದೆ. ಇದರೊಂದಿಗೆ, ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಅವಧಿಯ ಬಡ್ಡಿರಹಿತ ಸಾಲದ ರೂಪದಲ್ಲಿ ವಿಶೇಷ ನೆರವು ನೀಡಲಾಗುತ್ತಿದ್ದು, ಕರ್ನಾಟಕವು ಈ ಯೋಜನೆಯಡಿ ಜನವರಿ 2026ರವರೆಗೆ ಒಟ್ಟು 15,945 ಕೋಟಿ ರೂ.ಗಳನ್ನು ಪಡೆದುಕೊಂಡಿದೆ.
ವೇಗಪಡೆದ ಮೂಲಸೌಕರ್ಯ: ಭಾರತಮಾಲಾ ಪರಿಯೋಜನೆಯಡಿ ನಿರ್ವಿುಸಲಾಗುತ್ತಿರುವ ಅನೇಕ ಗ್ರೀನ್ ಫೀಲ್ಡ್ ಕಾರಿಡಾರ್ ಗಳು ಕರ್ನಾಟಕದ ಮೂಲಕ ಹಾದುಹೋಗುತ್ತವೆ. ಇದರಲ್ಲಿ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ, ಬೆಂಗಳೂರು ವರ್ತಲ ರಸ್ತೆ ಮತ್ತು ಸೋಲಾಪುರ-ಕರ್ನಲ್- ಚೆನ್ನೈ ಕಾರಿಡಾರ್ ಗಳು ಸೇರಿವೆ.ರಾಜ್ಯದಲ್ಲಿ ಸಾರಿಗೆ ಕ್ರಾಂತಿಯೇ ಸಂಭವಿಸುತ್ತಿದ್ದು, 2025ರ ಜೂನ್ ವೇಳೆಗೆ 8,191 ಕಿ.ಮೀ ಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ವಿುಸಲಾಗಿದೆ. ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಿದ್ದರೆ, ಬೆಂಗಳೂರು ಮೆಟ್ರೋ ಹಂತ- 3ಕ್ಕೆ 15,611 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ದೊರೆತಿದೆ. ರೈಲ್ವೆ ಕ್ಷೇತ್ರದಲ್ಲಿಯೂ ಕ್ರಾಂತಿಕಾರಕ ಬದಲಾವಣೆಯಾಗಿದ್ದು, 2014-24ರ ಅವಧಿಯಲ್ಲಿ ವಾರ್ಷಿಕ ಸರಾಸರಿ 317 ಕಿ.ಮೀ ಹಳಿಗಳ ವಿದ್ಯುದೀಕರಣ ಮಾಡಲಾಗಿದೆ, ಇದು ಹಿಂದಿನ ಅವಧಿಗೆ ಹೋಲಿಸಿದರೆ 18 ಪಟ್ಟು ಹೆಚ್ಚಾಗಿದೆ.
ವಾಯುಯಾನಕ್ಕೆ ಹೊಸ ಚೈತನ್ಯ: ಆರ್ಸಿಎಸ್ ಉಡಾನ್ ಯೋಜನೆಯಡಿ ಶಿವಮೊಗ್ಗ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 7 ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಿದ್ದು, 57 ಹೊಸ ಮಾರ್ಗಗಳು ತೆರೆದುಕೊಂಡಿವೆ. ಶಿಕ್ಷಣ ಕ್ಷೇತ್ರದಲ್ಲಿ ಐಐಟಿ ಧಾರವಾಡವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದ್ದು , ಯಾದಗಿರಿ, ಚಿತ್ರದುರ್ಗ ಹಾಗೂ ರಾಯಚೂರಿನಲ್ಲಿ ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಅಲ್ಲದೆ, ತುಮಕೂರಿನಲ್ಲಿ ದೇಶದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಸ್ಥಾಪಿಸುವ ಮೂಲಕ ಕರ್ನಾಟಕವನ್ನು ರಕ್ಷಣಾ ಉತ್ಪಾದನೆಯ ಹಬ್ ಆಗಿ ರೂಪಿಸಲಾಗುತ್ತಿದೆ.
ಜನಕಲ್ಯಾಣ ಸಾಕಾರ
ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳು ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿವೆ. ಜಲಜೀವನ್ ಮಿಷನ್ ಅಡಿಯಲ್ಲಿ 87.7 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 1.89 ಕೋಟಿಗೂ ಅಧಿಕ ಕಾರ್ಡ್ಗಳನ್ನು ಸೃಷ್ಟಿಸಲಾಗಿದ್ದು, 43.2 ಲಕ್ಷಕ್ಕೂ ಹೆಚ್ಚು ರೈತರು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಎಲ್ಲಾ ಅಂಕಿಅಂಶಗಳು ಕರ್ನಾಟಕದ ವಿಕಾಸದಲ್ಲಿ ಕೇಂದ್ರ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸುತ್ತವೆ ಎಂಬ ವಿಶ್ಲೇಷಣೆ ಇದೆ.
ಯೋಜನೆಗಳ ಯಶೋಗಾಥೆ
- ಪಿಎಂ ಮುದ್ರಾ ಯೋಜನೆ (ವಿತರಿಸಿದ ಮೊತ್ತ)- 3.39 ಲಕ್ಷ ಕೋಟಿ
- ಪಿಎಂ ಜನ ಧನ್ ಯೋಜನೆ (ಒಟ್ಟು ಖಾತೆಗಳು)2.12 ಕೋಟಿ
- ಆಯುಷ್ಮಾನ್ ಕಾರ್ಡ್ಗಳ ಸೃಷ್ಟಿ 1.89 ಕೋಟಿ
- ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ 402 ಲಕ್ಷ ಫಲಾನುಭವಿಗಳು
- ಪಿಎಂ ಉಜ್ವಲ ಯೋಜನೆ (ಎಲ್ಪಿಜಿ ಸಂಪರ್ಕ) 41.4 ಲಕ್ಷಸಣ್ಣ ಕೈಗಾರಿಕೆ, ಕುಶಲಕರ್ವಿುಗಳಿಗೆ ಆಸರೆ
ಕರ್ನಾಟಕದ ಸಾಂಪ್ರದಾಯಿಕ ಕುಶಲಕರ್ವಿುಗಳು ಮತ್ತು ಶಿಲ್ಪಕಲೆಗಾರರಿಗೆ ಈ ಯೋಜನೆಯಡಿ ಆಧುನಿಕ ಉಪಕರಣಗಳು, ತರಬೇತಿ ಮತ್ತು ಬಡ್ಡಿ ರಹಿತ ಸಾಲದ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದು ರಾಜ್ಯದ ಸ್ಥಳೀಯ ಕಲೆಗಳಿಗೆ ಜಾಗತಿಕ ವೇದಿಕೆ ಕಲ್ಪಿಸುವ ಗುರಿ ಹೊಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ‘ಫೇಮ್ ಯೋಜನೆಯಡಿ ನೂರಾರು ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗೆ ಇಳಿಸಲಾಗಿದೆ.
ಕುಸುಮ್ ಯೋಜನೆಯಡಿ ರಾಜ್ಯದ ರೈತರಿಗೆ ಸೌರಶಕ್ತಿ ಚಾಲಿತ ಪಂಪ್ಸೆಟ್ಗಳನ್ನು ವಿತರಿಸಲಾಗುತ್ತಿದ್ದು, ಇದು ಕೃಷಿ ಕ್ಷೇತ್ರದಲ್ಲಿ ಇಂಧನ ವೆಚ್ಚವನ್ನು ಕಡಿಮೆ ಮಾಡಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಸಾವಿರಾರು ಯುವಕರಿಗೆ ಐಟಿ, ಆಟೋಮೊಬೈಲ್ ಮತ್ತು ಟೆಕ್ಸ್ಟೈಲ್ ಕ್ಷೇತ್ರಗಳಲ್ಲಿ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.
15 ಪ್ರಮುಖ ಅಂಶಗಳು
ಭಾರತಮಾಲಾ ಯೋಜನೆ ಹಂತ- 1ರ ಅಡಿಯಲ್ಲಿ ಕರ್ನಾಟಕದಲ್ಲಿ 63,304 ಕೋಟಿ ರೂ.ಗಳ ಒಟ್ಟು ಬಂಡವಾಳ ವೆಚ್ಚದೊಂದಿಗೆ 2,059 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ಗಳ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ.ರಾಜಸ್ಥಾನ ಮತ್ತು ಕರ್ನಾಟಕದಿಂದ 9 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಸಾಗಿಸಲು ಹೊಸ ಅಂತರ ರಾಜ್ಯ ಪ್ರಸರಣ ವ್ಯವಸ್ಥೆ ಯೋಜನೆಗಳನ್ನು ಭಾರತ ಸರ್ಕಾರ ಅನುಮೋದಿಸಿದೆ.
ಕೇಂದ್ರದ ಪಿಎಂ ಮಿತ್ರ ಯೋಜನೆಯಡಿ ದೇಶದ 7 ರಾಷ್ಟ್ರೀಯ ಮೆಗಾ ಜವಳಿ ಪಾರ್ಕ್ಗಳಲ್ಲಿ ಒಂದಾಗಿ ಕಲಬುರಗಿಯನ್ನು ಆಯ್ಕೆ ಮಾಡಲಾಗಿದೆ. ಪ್ರಸಾದ ಯೋಜನೆಯಡಿ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ (18.37 ಕೋಟಿ ರೂ.) ಮತ್ತು ಬೀದರ್ನ ಪಾಪನಾಶ ದೇವಸ್ಥಾನದ (22.25 ಕೋಟಿ ರೂ.) ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಣ ಮಂಜೂರು ಮಾಡಲಾಗಿದೆ.
ಕರ್ನಾಟಕದಿಂದ ಹೈ- ಸ್ಪೀಡ್ ರೈಲು ಸಂಪರ್ಕವನ್ನು ಬಲಪಡಿಸಲು ಪ್ರಧಾನಮಂತ್ರಿಯವರು ಕೆಎಸ್ಆರ್ ರೈಲು ನಿಲ್ದಾಣದಿಂದ ಮೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ದೇಶಾದ್ಯಂತ ಶಿಕ್ಷಣ ವಂಚಿತ ಜಿಲ್ಲೆಗಳಲ್ಲಿ ಮಂಜೂರಾದ 28 ಹೊಸ ನವೋದಯ ವಿದ್ಯಾಲಯಗಳಲ್ಲಿ ಕರ್ನಾಟಕದ ಬಳ್ಳಾರಿ ಜಿಲ್ಲೆಯೂ ಸೇರಿದೆ.ರಾಜ್ಯಾದ್ಯಂತ ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ಔಷಧಿ ಒದಗಿಸಲು 1,610ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಕಾರ್ಯಾರಂಭ ಮಾಡಲಾಗಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾದ ಶ್ರೀ ಸಿದ್ಧಾರೂಢ ಸ್ವಾಮಿಜಿ ಹುಬ್ಬಳ್ಳಿ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ಫಾಮ್ರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ.ರಾಜ್ಯಾದ್ಯಂತ 5,101 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವು ರೈತರಿಗೆ ಒಂದೇ ಸೂರಿನಡಿ ರಸಗೊಬ್ಬರ, ಬೀಜ ಮತ್ತು ತಾಂತ್ರಿಕ ಸಲಹೆಗಳನ್ನು ನೀಡುವ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಇದುವರೆಗೆ 83.1 ಲಕ್ಷ ನ್ಯಾನೋ ಯೂರಿಯಾ ಬಾಟಲಿಗಳನ್ನು ವಿತರಿಸಲಾಗಿದ್ದು, ಇದು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಿದೆ.
ಕರ್ನಾಟಕದ 7 ನಗರಗಳನ್ನು ‘ಸ್ಮಾರ್ಟ್ ಸಿಟಿ’ ಯೋಜನೆಗೆ ಆಯ್ಕೆ ಮಾಡಲಾಗಿತ್ತು, ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಈಗಾಗಲೇ 6,345 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)ಅಡಿ ರಾಜ್ಯದ 1.15 ಲಕ್ಷಕ್ಕೂ ಹೆಚ್ಚು ಗ್ರಾಮಗಳನ್ನು ‘ಬಯಲು ಶೌಚಾಲಯ ಮುಕ್ತ’ ಎಂದು ಘೊಷಿಸಲಾಗಿದೆ. ದಾಖಲೆಯ ಪ್ರಕಾರ ಕರ್ನಾಟಕದಲ್ಲಿ 1,000ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳನ್ನು ಡಿಜಿಟಲ್ ಪಾವತಿಗೆ ಸಕ್ರಿಯಗೊಳಿಸಲಾಗಿದ್ದು, ಗ್ರಾಮೀಣ ಆರ್ಥಿಕತೆಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿದೆ. ಕರ್ನಾಟಕದ ಒಟ್ಟು 56 ರೈಲ್ವೆ ನಿಲ್ದಾಣಗಳನ್ನು ಈ ಯೋಜನೆಯಡಿ ಆಧುನೀಕರಣಗೊಳಿಸಲು ಆಯ್ಕೆ ಮಾಡಲಾಗಿದೆ. ಇದು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಿದೆ. ಬೆಂಗಳೂರಿನಲ್ಲಿ 1,600 ಕೋಟಿ ರೂ. ವೆಚ್ಚದಲ್ಲಿ ‘ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್’ ಸ್ಥಾಪಿಸಲಾಗಿದೆ. ಇದು ಅಮೆರಿಕದ ಹೊರಗೆ ಬೋಯಿಂಗ್ ಸಂಸ್ಥೆ ಮಾಡಿರುವ ಅತಿದೊಡ್ಡ ಹೂಡಿಕೆಯಾಗಿದೆ.













































