ಬ್ರಿಟಿಷರಿಗೆ ಸಾಲ ಕೊಟ್ಟಿದ್ದ ಭಾರತೀಯ ಉದ್ಯಮಿ: 109 ವರ್ಷದ ಬಾಕಿಗಾಗಿ ಲಂಡನ್ ಸರ್ಕಾರಕ್ಕೆ ನೋಟಿಸ್!

Picture of Savistara

Savistara

Bureau Report

ಸೆಹೋರ್: ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಅಚ್ಚರಿಯ ಸಂಗತಿಗಳು ಹೊರಬರುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಇತ್ತೀಚೆಗೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಈ ಘಟನೆಯೇ ಸಾಕ್ಷಿಯಾಗಿದೆ. ಬರೊಬ್ಬರಿ 109 ವರ್ಷಗಳ ಹಿಂದೆ ಬ್ರಿಟಿಷ್ ಸರ್ಕಾರಕ್ಕೆ ನೀಡಿದ್ದ ಸಾಲವನ್ನು ಮರುಪಾವತಿಸುವಂತೆ ಕುಟುಂಬವೊಂದು ಕಾನೂನು ಸಮರಕ್ಕೆ ಸಜ್ಜಾಗಿದೆ ಎಂದರೆ ನೀವು ನಂಬಲೇ ಬೇಕು.

ಅಸಲಿಗೆ ನಡೆದಿದ್ದೇನು?

ಅದು 1917 ರ ಸಮಯ ಅಂದರೆ ಮೊದಲ ಮಹಾಯುದ್ಧದ ಅಬ್ಬರ ಜೋರಾಗಿದ್ದ ಕಾಲ. ಅಂದು ಬಹುತೇಕ ವಿಶ್ವವನ್ನೇ ಆಳುತ್ತಿದ್ದ ಬ್ರಿಟಿಷ್ ಸರ್ಕಾರ ಆರ್ಥಿಕವಾಗಿ ಸೊರಗಿದ್ದ ಕಾಲ. ಈ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿಗಳು ಸೆಹೋರ್‌ನ ಖ್ಯಾತ ಉದ್ಯಮಿ (Indian Businessman) ಸೇಠ್ ಜುಮ್ಮಾ ಲಾಲ್ ರುಥಿಯಾ ಅವರ ಬಳಿ ಸಹಾಯ ಹಸ್ತ ಚಾಚಿದ್ದರು. ಇದನ್ನೂ ಓದಿ: ಬಾಡಿಗೆಗೆ ಹೆಂಡತಿ ಲಭ್ಯ: ಕೇವಲ ವ್ಯೂಸ್‌ಗಾಗಿ ಪತ್ನಿಯನ್ನೇ ಹರಾಜಿಗಿಟ್ಟ ಪತಿ! ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶದೇಶದ ಮೇಲಿನ ಕಾಳಜಿಯೋ ಅಥವಾ ಬ್ರಿಟಿಷರ ಮೇಲಿನ ನಂಬಿಕೆಯೋ, ಸೇಠ್ ಜುಮ್ಮಾ ಲಾಲ್ ಅಂದಿನ ಕಾಲಕ್ಕೆ ಬರೋಬ್ಬರಿ 35,000 ರೂಪಾಯಿಗಳನ್ನು ಬ್ರಿಟಿಷ್ ಸರ್ಕಾರಕ್ಕೆ ಸಾಲವಾಗಿ ನೀಡಿದ್ದರು. ಬ್ರಿಟಿಷ್ ಸರ್ಕಾರವೂ ಸಹ ಈ ಹಣವನ್ನು ವಾಪಸ್ ಮಾಡುವುದಾಗಿ ಲಿಖಿತ ದಾಖಲೆಗಳನ್ನು ಸೇಠ್ ಜುಮ್ಮಾ ಲಾಲ್ ಅವರಿಗೆ ನೀಡಿತ್ತು.

ತಲೆಮಾರು ಕಳೆದರೂ ದೊರೆಯದ ಹಣ

1937ರಲ್ಲಿ ಸೇಠ್ ಜುಮ್ಮಾ ಲಾಲ್ ನಿಧನರಾದರು. ಕಾಲ ಉರುಳಿತು, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು; ಬ್ರಿಟಿಷರು ದೇಶ ಬಿಟ್ಟು ಹೋದರು. ಹಾಗೆಯೇ ಈ ಸಾಲದ ಕಥೆ ಮರೆಯಾಗಿ ಹೋಯಿತು. ಆದರೆ ಜುಮ್ಮಾ ಲಾಲ್ ಅವರ ಮಗ ಸೇಠ್ ಮನಕ್ ಚಂದ್ ಈ ದಾಖಲೆಗಳನ್ನು ಜೋಪಾನವಾಗಿ ಕಾಯ್ದಿರಿಸಿದ್ದರು. 2013ರಲ್ಲಿ ಅವರು ನಿಧನರಾದ ನಂತರ ಈ ದಾಖಲೆಗಳು ಅವರ ಮೊಮ್ಮಗ ವಿವೇಕ್ ರುಥಿಯಾ ಅವರ ಕೈ ಸೇರಿದವು. ಇತ್ತೀಚೆಗೆ ಮನೆಯ ಹಳೆಯ ಪತ್ರಗಳನ್ನು ಪರಿಶೀಲಿಸುತ್ತಿದ್ದಾಗ ವಿವೇಕ್ ಅವರ ಕಣ್ಣಿಗೆ ಈ ಐತಿಹಾಸಿಕ ಸಾಲದ ಪತ್ರ ಬಿದ್ದಿದೆ. ಅಂದಿನಿಂದ ಈ ಕುಟುಂಬ ಹಳೆಯ ಬಾಕಿ ವಸೂಲಿಗೆ ಪಣ ತೊಟ್ಟಿ ನಿಂತಿದೆ.

ಅಂದಿನ 35 ಸಾವಿರಕ್ಕೆ ಇಂದೆಷ್ಟು ಬೆಲೆ?.

ಹಣದುಬ್ಬರ ಮತ್ತು ಇಂದಿನ ಮಾರುಕಟ್ಟೆ ಮೌಲ್ಯವನ್ನು ಲೆಕ್ಕ ಹಾಕಿದರೆ, 1917ರ 35,000 ರೂಪಾಯಿಗಳು ಇಂದು ಬರಿ ಅಸಲೇ 1.85 ಕೋಟಿ ರೂಪಾಯಿಗಳಾಗುತ್ತದೆ. ಇದಕ್ಕೆ ಒಂದು ಶತಮಾನದ ಬಡ್ಡಿಯನ್ನು ಸೇರಿಸಿದರೆ ಈ ಮೊತ್ತ ನೂರಾರು ಕೋಟಿಗಳನ್ನು ದಾಟಬಹುದು ಎಂದು ಅಂದಾಜಿಸಲಾಗಿದೆ.

ಇದು ಕೇವಲ ಹಣದ ವಿಚಾರವಲ್ಲ, ನಮ್ಮ ತಾತ ಬ್ರಿಟಿಷರಿಗೆ ನೀಡಿದ ನಂಬಿಕೆ ಮತ್ತು ನ್ಯಾಯದ ಪ್ರಶ್ನೆ. ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ ಸಾರ್ವಭೌಮ ರಾಷ್ಟ್ರವು ತನ್ನ ಹಳೆಯ ಸಾಲವನ್ನು ಮನ್ನಾ ಮಾಡುವಂತಿಲ್ಲ ಎನ್ನುವುದು ವಿವೇಕ್ ರುಥಿಯಾ ಅವರ ವಾದವಾಗಿದೆ.

ಲಂಡನ್ ಸರ್ಕಾರಕ್ಕೆ ಲೀಗಲ್​ ನೋಟಿಸ್​

ವಿವೇಕ್ ರುಥಿಯಾ ಈಗ ಸುಮ್ಮನೆ ಕುಳಿತಿಲ್ಲ. ಬ್ರಿಟಿಷ್ ಸರ್ಕಾರಕ್ಕೆ ಅಧಿಕೃತವಾಗಿ ಕಾನೂನು ನೋಟಿಸ್ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ. ಅಗತ್ಯ ಬಿದ್ದರೆ ನೆದರ್ಲ್ಯಾಂಡ್ಸ್‌ನ ಹೇಗ್ ಅಂತರರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಲು ಕೂಡ ಅವರು ಸಿದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.ಸೆಹೋರ್‌ನಲ್ಲಿ ಶಾಲೆ, ಆಸ್ಪತ್ರೆಗಳನ್ನು ಕಟ್ಟಿ ದಾನಶೂರತ್ವಕ್ಕೆ ಹೆಸರಾದ ರುಥಿಯಾ ಕುಟುಂಬದ ಈ ಸಾಲ ಪುರಾಣ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಬ್ರಿಟಿಷರು ಭಾರತವನ್ನು ಲೂಟಿ ಮಾಡಿದ್ದು ಎಲ್ಲರಿಗೂ ಗೊತ್ತು, ಆದರೆ ಭಾರತೀಯ ಉದ್ಯಮಿಯೊಬ್ಬರಿಂದ ಸಾಲ ಪಡೆದು ಅವರಿಗೆ ನಾಮ ಹಾಕಿದ್ದು ಓಡಿ ಹೋದ ಘಟನೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವುದು ಮಾತ್ರ ಸತ್ಯವಾಗಿದೆ,

[t4b-ticker]
error: Content is protected !!