ಒಳ ಮೀಸಲು ಇಲ್ಲದೆಯೇ 56 ಸಾವಿರ ಹುದ್ದೆ ನೇಮಕಾತಿ | ಯುವಕ್ರಾಂತಿ ಬೆನ್ನಲ್ಲೇ ಸರ್ಕಾರಿ ಹುದ್ದೆ ಭರ್ತಿಗೆ ಸಂಪುಟ ನಿರ್ಧಾರ, ಶೇ.50 ಮೀಸಲಾತಿಯಂತೆ ನೇಮಕಾತಿ

Picture of Savistara

Savistara

Bureau Report

ಬೆಂಗಳೂರು: ಎಸ್‌ಸಿ ಒಳಮೀಸಲು ವರ್ಗೀಕರಣ ವಿಧೇಯಕಕ್ಕೆರಾಜ್ಯಪಾಲರು ಅಂಗೀಕಾರ ನೀಡಿದ ಹೊರತಾಗಿಯೂ ರಾಜ್ಯ ಸರ್ಕಾರವು 2022ರ ಹಿಂದಿದ್ದ ಹಳೆ ಮೀಸಲು ಪದ್ಧತಿಯಡಿ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗಿದೆ.ಸರ್ಕಾರದ ವಿವಿಧ ಇಲಾಖೆಗಳು, ನಿಗಮ ಹಾಗೂ ಮಂಡಳಿಗಳಲ್ಲಿ ಖಾಲಿ ಇರುವ 56,432 ಹುದ್ದೆಗಳನ್ನು ಶೇ.50ರ ಮೀಸಲಾತಿಯಂತೆ ನೇರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, 30 ದಿನಗಳ ಒಳಗಾಗಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯು ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಇದರೊಂದಿಗೆ ಬಹುತೇಕ 2 ವರ್ಷಗಳ ಬಳಿಕ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಈ ಹಿಂದೆ ಪರಿಶಿಷ್ಟ ಜಾತಿಗೆ ಶೇ.15 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3ರಷ್ಟು ಮೀಸಲಾತಿ ಇತ್ತು. ಇದನ್ನು ಕ್ರಮವಾಗಿ ಶೇ.17 ಹಾಗೂ ಶೇ.7ಕ್ಕೆ ಏರಿಸುವ ನಿರ್ಣಯವನ್ನು ಸರ್ಕಾರ ಕೈಗೊಂಡಿತ್ತು. ಆದರೆ, ಇದರಿಂದ ಒಟ್ಟಾರೆ ಮೀಸಲಾತಿ ಪ್ರಮಾಣವು ಶೇ. 50ನ್ನು ಮೀರಿ ಶೇ.56ಕ್ಕೆ ತಲುಪುತ್ತದೆ. ಇನ್ನು ಇದಕ್ಕೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದ ಮುಂದಿದೆ. ಹೀಗಾಗಿ ಶೇ.50ರ ಮೀಸಲಾತಿಯಂತೆ ನೇಮಕಾತಿ ಆದೇಶವನ್ನು ಹೊರಡಿಸಿ, ಉಳಿದ ಶೇ.6ರ ಮೀಸಲಾತಿಯಡಿ ಬರುವ ಹುದ್ದೆಗಳನ್ನು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ನೇಮಕಾತಿ ಮಾಡಿಕೊಳ್ಳಲು ನಿರ್ಣಯಿಸಲಾಗಿದೆ. ಅಂದರೆ, 2022ಕ್ಕೂ ಮುನ್ನ ಶೇ.50ರ ಮೀಸಲಾತಿ ಹಾಗೂ ರೋಸ್ಟರ್ ಬಿಂದುವಿನಡಿ ನಡೆಯುತ್ತಿದ್ದ ನೇಮಕಾತಿಯಂತೆಯೇ ಸದ್ಯಕ್ಕೆ ನೇಮಕಾತಿಗಳು ನಡೆಯಲಿವೆ.

ರಾಜ್ಯಪಾಲರು ಕೊಟ್ಟರೂ ಸರ್ಕಾರ ಕೊಡಲಿಲ್ಲ!

ಕಳೆದ 2.5 ವರ್ಷದಲ್ಲಿ ಖಾಲಿ ಇರುವ ಸುಮಾರು 2.85 ಲಕ್ಷ ಹುದ್ದೆಗಳ ಪೈಕಿ 8,157 ಹುದ್ದೆಗಳನ್ನು ಭರ್ತಿ ಮಾಡಿರುವ ಸರ್ಕಾರ, 3,081 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಇದಲ್ಲದೆ, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 24,300 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂವಿಧಾನದ 371(ಜೆ) ಪರಿಚ್ಛೇದದ ಅನ್ವಯ ಖಾಲಿ ಇರುವ 32,132 ಹುದ್ದೆಗಳ ಪೈಕಿ ಶೇ.80 ರಷ್ಟನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯು ಪರಿಭಾವಿತ ಸಹಮತಿಯನ್ನೂ ನೀಡಿದೆ.

ಆದರೆ, ಒಳಮೀಸಲಾತಿ ಹಂಚಿಕೆ ಗೊಂದಲ, ಶೇ.50ರಿಂದ ಶೇ.56ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಪ್ರಸ್ತಾವನೆಗಳ ಗೊಂದಲದಿಂದ ನೇಮಕಾತಿ ಪ್ರಕ್ರಿಯೆಗಳು ಬಾಕಿಯಾಗಿತ್ತು. ಗುರುವಾರ ಮಧ್ಯಾಹ್ನವಷ್ಟೇ ಕರ್ನಾಟಕ ಪರಿಶಿಷ್ಟ ಜಾತಿಗಳ ಒಳಮೀಸಲಾತಿ (ಉಪವರ್ಗೀಕರಣ) ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ಶೇ.56ರ ಮೀಸಲಾತಿಯಂತೆಯೇ ನೇಮಕಾತಿಗೆ ಸಂಪುಟ ಸಭೆ ಅನುಮೋದಿಸುವ ನಿರೀಕ್ಷೆ ಇತ್ತು. ಆದರೀಗ ಶೇ.50ರ ಮೀಸಲಾತಿಯಂತೆ ನೇಮಕಾತಿಗೆ ಅನುಮೋದನೆ ನೀಡಿದ್ದು, ಉಳಿದ ಶೇ.6ರ ಮೀಸಲಾತಿ ಬಗ್ಗೆ ಹೈಕೋರ್ಟ್ ಅಂತಿಮ ಆದೇಶಕ್ಕೆ ಒಳಪಟ್ಟು ನೇಮಕ ಮಾಡಿಕೊಳ್ಳಲು ನಿರ್ಣಯಿಸಿರುವುದರಿಂದ ಒಳಮೀಸಲಾತಿ ಮರೀಚಿಕೆ ಆದಂತಾಗಿದೆ.

ಏನಿದು ಮೀಸಲು ವಿವಾದ?

  • 2022ರ ಮುಂಚೆ ರಾಜ್ಯದಲ್ಲಿ ಎಸ್‌ಸಿಗೆ ಶೇ.15, ಎಸ್‌ಟಿಗೆ ಶೇ.3, ಒಬಿಸಿಗೆ ಶೇ.32 ಮೀಸಲಿತ್ತು
  • ಆ ಬಳಿಕ ಬಿಜೆಪಿ ಸರ್ಕಾರ ಎಸ್ಸಿ ಮೀಸಲನ್ನು ಶೇ.17ಕ್ಕೆ, ಎಸ್ಟಿ ಮೀಸಲು ಶೇ.7ಕ್ಕೆ ಹೆಚ್ಚಿಸಿತು
  • ಇದು ಸುಪ್ರೀಂ ಕೋರ್ಟ್‌ನ ಶೇ.50 ಮೀಸಲು ಮಿತಿ ಮೀರಿ, ಶೇ.56 ಆಯಿತು
  • ನಂತರ ಬಂದ ಕಾಂಗ್ರೆಸ್ ಸರ್ಕಾರವು ಈ ಮೀಸಲಾತಿಯನ್ನು ಒಪ್ಪಿಕೊಂಡಿತು
  • ಅಲ್ಲದೇ, ಎಸ್‌ಸಿ ಸಮುದಾಯಕ್ಕೆ 6, 6 ಮತ್ತು 6ರಂತೆ ಒಳಮೀಸಲಿಗೆ ಒಪ್ಪಿತು
  • ಆದರೆ, ಒಟ್ಟು ಮೀಸಲು ಶೇ.56 ಆದ್ದರಿಂದ ಹೊಸ ಮೀಸಲಿನಡಿ ನೇಮಕಾತಿ ಮಾಡಲಾಗಲಿಲ್ಲ
  • ಒತ್ತಡ ಹಿನ್ನೆಲೆಯಲ್ಲಿ 2022ರ ಹಿಂದಿದ್ದ ಶೇ.50ರ ಮೀಸಲಿನಂತೆ ಈಗ ನೇಮಕಾತಿ
[t4b-ticker]
error: Content is protected !!