ಕೋಝಿಕೋಡ್: ಭಾರತೀಯ ರಾಜಕಾರಣದ ಪ್ರಭಾವಿ ನಾಯಕ, ಮಾಜಿ ಕೇಂದ್ರ ಸಚಿವ ಕೆ.ಪಿ. ಉನ್ನಿಕೃಷ್ಣನ್ (89) ಅವರು ವಯೋಸಹಜ ಕಾಯಿಲೆಯಿಂದ ಮಂಗಳವಾರ(ಮಾ.೩) ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಕೋಝಿಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉನ್ನಿಕೃಷ್ಣನ್ ಅವರ ನಿಧನಕ್ಕೆ ರಾಜಕೀಯ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಕೇರಳದ ವಡಕರ ಲೋಕಸಭಾ ಕ್ಷೇತ್ರದಿಂದ ಸತತ ಆರು ಬಾರಿ (1971, 1977, 1980, 1984, 1989 2 1991) ಸಂಸದರಾಗಿ ಆಯ್ಕೆಯಾಗಿದ್ದ ಉನ್ನಿಕೃಷ್ಣನ್ ಅವರು ಅಪ್ರತಿಮ ಸಂಸದೀಯ ಪಟುವಾಗಿದ್ದರು. 1989-90ರ ಅವಧಿಯಲ್ಲಿ ವಿ.ಪಿ.ಸಿಂಗ್ ಅವರ ಸಂಪುಟದಲ್ಲಿ ಭೂಸಾರಿಗೆ ಮತ್ತು ಸಂವಹನ ಖಾತೆಯ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಉನ್ನಿಕೃಷ್ಣನ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಗಲ್ಫ್ ಯುದ್ಧದ ಸಮಯದಲ್ಲಿ ಅಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಬೃಹತ್ ಸ್ಥಳಾಂತರ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದರು.
1936ರ ಸೆಪ್ಟೆಂಬರ್ 20 ರಂದು ಜನಿಸಿದ ಇವರು, ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ ಬಳಿಕ ಕಾನೂನು ಪದವಿ ಪಡೆದಿದ್ದರು. ವೃತ್ತಿಜೀವನವನ್ನು ಪತ್ರಕರ್ತರಾಗಿ ಆರಂಭಿಸಿದ ಇವರು, ಸಮಾಜವಾದಿ ವಿಚಾರಧಾರೆಗಳಿಂದ ಪ್ರೇರಿತರಾಗಿ ಸಮಾಜವಾದಿ ಪಕ್ಷದ ಮೂಲಕ ಸಕ್ರಿಯ ರಾಜಕಾರಣ ಪ್ರವೇಶಿಸಿದರು.
ವಿ.ಕೆ. ಕೃಷ್ಣ ಮೆನನ್ ಅವರ ನಿಕಟವರ್ತಿಯಾಗಿದ್ದ ಉನ್ನಿಕೃಷ್ಣನ್, 1980-82ರ ಅವಧಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.













































