ಸುಳ್ಯ : ವಿನೋಬನಗರ ವಿದ್ಯಾ ಸಂಸ್ಥೆಯಲ್ಲಿ ಗೀತಾ ಜ್ಞಾನ ಯಜ್ಞ | ಜಗತ್ತಿಗೆ ಧರ್ಮದ ಸೂಕ್ಷ್ಮತೆಯನ್ನು ಸಾರಿದ್ದು ಭಗವದ್ಗೀತೆ : ಎಡನೀರು ಶ್ರೀ | ಏಕಕಾಲದಲ್ಲಿ 650 ವಿದ್ಯಾರ್ಥಿಗಳಿಂದ ಭಗವದ್ಗೀತೆ ಪಠಣ

Picture of Savistara

Savistara

Bureau Report

ಸುಳ್ಯ: “ಸಮಾಜದಲ್ಲಿ ಹೇಗೆ ನ್ಯಾಯಯುತವಾಗಿ ಬದುಕಬೇಕೆಂದು ತಿಳಿಸಿದ ಪಾಠಪುಸ್ತಕ ಭಗವದ್ಗೀತೆ. ಇದರ ಅಧ್ಯಯನ ವಿದ್ಯಾಸಂಸ್ಥೆಗಳಲ್ಲಿ ಆಗುತ್ತಿರುವುದು ಅತ್ಯಂತ ಸಂತೋಷದಾಯಕ. ಇದು ನಿರಂತರ ನಡೆಯುತ್ತಿರಲಿ” ಎಂದು ಕಾಸರಗೋಡು ಎಡನೀರು ಮಠದ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿಯವರು ಹೇಳಿದರು.

ಜಾಲ್ಸೂರು ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಭಗವದ್ಗೀತೆ ಅಧ್ಯಯನ ನಡೆಯುತಿದ್ದು, ಅದರ ಹದಿನೆಂಟು ಅಧ್ಯಾಯಗಳ ಒಂದು ಆವೃತ್ತಿ ಪೂರ್ಣಗೊಂಡ ಪ್ರಯುಕ್ತ ಆಯೋಜಿಸಲಾದ ಗೀತಾ ಜ್ಞಾನ ಯಜ್ಞದ ಸಂದರ್ಭದಲ್ಲಿ ಭಾಗವಹಿಸಿದ ಸ್ವಾಮೀಜಿಯವರು, ಬಳಿಕ ಆಶೀರ್ವಚನ ನೀಡಿದರು.”ಭಗವದ್ಗೀತೆ ಅಧ್ಯಯನದ ಮೂಲಕ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕೆಲಸ. ಈ ರೀತಿಯ ಸಂಸ್ಕಾರಯುತ ಶಿಕ್ಷಣ ಆಗಬೇಕಾಗಿದೆ” ಎಂದು ಸ್ವಾಮೀಜಿ ಹೇಳಿದರು.

ಬೆಳಗ್ಗೆ 9 ಗಂಟೆಯಿಂದ ಪುರೋಹಿತ ಶ್ರೀವರ ಪಾಂಗಣ್ಣಾಯರ ನೇತೃತ್ವದಲ್ಲಿ ಗೀತಾ ಜ್ಞಾನ ಯಜ್ಞ ಆರಂಭಗೊಂಡಿತು. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಗವದ್ಗೀತೆ ಪಠಣ ಮಾಡಿದರು. ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದರು. ಮಧ್ಯಾಹ್ನ 12ರ ಸುಮಾರಿಗೆ ಎಡನೀರು ಸ್ವಾಮೀಜಿಗಳು ಆಗಮಿಸಿದರು. ಅವರನ್ನು ಪೂರ್ಣಕುಂಭದೊಂದಿಗೆ ಬರಮಾಡಿಕೊಳ್ಳಲಾಯಿತು. ಗೀತಾ ಜ್ಞಾನ ಯಜ್ಞದ‌ ಪೂರ್ಣಾಹುತಿಯಲ್ಲಿ ಭಾಗವಹಿಸಿದ ಶ್ರೀಗಳು ಬಳಿಕ ಆಶೀರ್ವಚನ ನೀಡಿದರು.

ಗೀತಾ ಜ್ಞಾನ ಯಜ್ಞ ನೆರವೇರಿಸಿದ ಶ್ರೀವರ ಪಾಂಗಣ್ಣಾಯ ಹಾಗೂ ಭಗವದ್ಗೀತೆ ಪಠಣದ ನೇತೃತ್ವ ವಹಿಸಿದ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಗಿರೀಶ್ ರನ್ನು ಗೌರವಿಸಲಾಯಿತು.

ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ನ. ಸೀತಾರಾಮ ಸ್ವಾಗತಿಸಿದರು, ಸಂಸ್ಥೆಯ ಪರಿಚಯ ಮಾಡಿದರು. ಸಂಸ್ಥೆಯ ಕೋಶಾಧಿಕಾರಿ ಸುಧಾಕರ‌ ಕಾಮತ್ ವಂದಿಸಿದರು. ಶಿಕ್ಷಕಿ ಪಾವನಾ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಡಾ. ಗೋಪಾಲ ಕೃಷ್ಣ ಭಟ್ ಕಾಟೂರು, ಸದಸ್ಯರುಗಳಾದ ಪುರುಷೋತ್ತಮ ಕಿರ್ಲಾಯ, ಶ್ಯಾಮ್ ಪ್ರಸಾದ್ ಅಡ್ಡಂತಡ್ಕ, ಶಿವಪ್ರಸಾದ್ ಉಗ್ರಾಣಿಮನೆ, ಹೇಮಂತ್ ಮಠ , ರಾಷ್ಟ್ರೀತ್ತಾನ ಶಿಶುಮಂದಿರದ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಬೊಳ್ಳುರು, ಪ್ರಾಥಮಿಕ ವಿಭಾಗದ ಶಾಲಾಭಿವೃದ್ಧಿ ಸಮೀತಿಯ ಅಧ್ಯಕ್ಷರಾದ ರವಿರಾಜ್ ಗಬ್ಬಳಡ್ಕ , ಪ್ರೌಢ ವಿಭಾಗದ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಅಶೋಕ್ ಅಡ್ಕರ್, ಹಿರಿಯಾದ ಕೃಷ್ಣ ಕಾಮತ್ ಆರಂಬೂರು ಮೊದಲಾದವರು ಇದ್ದರು.

[t4b-ticker]
error: Content is protected !!