ಕಾಡಾನೆಗಳ ಉಪಟಳವನ್ನು ತಡೆಯಲು ಸುಳ್ಯ ತಾಲೂಕನ್ನು ಕೇಂದ್ರವಾಗಿರಿಸಿ ಮಂಗಳೂರು ಅರಣ್ಯ ವಿಭಾಗಕ್ಕೆ ಎಲಿಫೆಂಟ್ ಟಾಸ್ಕ್ ಫೋರ್ಸ್ ನ್ನು ನಿಯೋಜನೆಗೊಳಿಸಿ ಸರಕಾರ ಆದೇಶ ಮಾಡಿದೆ. ತತ್ ಕ್ಷಣದಿಂದ ಈ ಕಾರ್ಯಪಡೆಗೆ ಸಿಬ್ಬಂದಿ ನೇಮಕಗೊಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಪ್ರತಿ ವರ್ಷವೂ ಬೆಳೆ ಪರಿಹಾರ ಹಾಗೂ ಮಾನವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಾಗೂ ಜನವಸತಿ ಪ್ರದೇಶಗಳಿಗೆ ಆನೆಗಳು ನುಗ್ಗಿದಾಗ ಅವುಗಳನ್ನು ಓಡಿಸಲು ಮಡಿಕೇರಿ ವಿಭಾಗದಿಂದ ಎಲಿಫೆಂಟ್ ಟಾಸ್ಕ್ ಫೋರ್ಸ್ ಅನ್ನು ಕರೆಯಿಸಬೇಕಾಗುತ್ತಿರುವುದರಿಂದ ಹಿಮ್ಮೆಟ್ಟಿಸುವ ಪ್ರಕ್ರಿಯೆ ತಡವಾಗುತ್ತಿದೆ. ಆದ್ದರಿಂದ, ದಕ್ಷಿಣ ಕನ್ನಡ ಹಿಮ್ಮೆಟ್ಟಿಸಲು ಮಡಿಕೇರಿ ಜಿಲ್ಲೆ, ಮಂಗಳೂರು ವಿಭಾಗಕ್ಕೆ ಹೊಸದಾಗಿ ಆನೆ ಕಾರ್ಯಪಡೆಯನ್ನು ರಚಿಸಿ ಆದೇಶ ಹೊರಡಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಸರಕಾರ ಈ ಕುರಿತು ಅಧಿಕೃತ ಆದೇಶ ಮಾಡಿದೆ.ಈ ಕಾರ್ಯಪಡೆಯ ಕೇಂದ್ರಸ್ಥಾನ ಸುಳ್ಯವಾಗಿರುತ್ತದೆ. ಇದರಲ್ಲಿ ಒಬ್ಬರು ಉಪ ವಲಯ ಅರಣ್ಯಾಧಿಕಾರಿ, ಇಬ್ಬರುಗಸ್ತು ಅರಣ್ಯ ಪಾಲಕರು,ವಾಹನ ಚಾಲಕರು/ತತ್ರಮಾನ ಸಿಬ್ಬಂದಿಗಳು 25 ಮಂದಿಯನ್ನು ನೇಮಿಸಲಾಗುತ್ತದೆ.ಈ ಆನೆ ಕಾರ್ಯಪಡೆಯು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವಿಭಾಗ, ಮಂಗಳೂರು ರವರ ನಿರ್ದೇಶನದ ಅಡಿಯಲ್ಲಿ ಕಾರ್ಯನಿರ್ವಹಿಸತಕ್ಕದ್ದು. ಈ ಆನೆ ಕಾರ್ಯಪಡೆ ತಂಡವು ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಜನವಸತಿ ಪ್ರದೇಶಗಳಲ್ಲಿ, ಕೃಷಿ ಪ್ರದೇಶಗಳಲ್ಲಿ ಹಾಗೂ ಕಾಫಿ ಎಸ್ಟೇಟ್‌ಗಳಲ್ಲಿ ಆನೆಗಳ ಚಲನವಲನಗಳನ್ನು ಗುರುತಿಸಿ ಕೂಡಲೇ ಸ್ಥಳಕ್ಕೆ ಧಾವಿಸಿ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸುವುದು.ಕಾಡಾನೆ ಹಾವಳಿ ಕಂಡುಬರುವ ಪ್ರದೇಶಗಳ ಹಳ್ಳಿಗಳಲ್ಲಿನ ಸಾರ್ವಜನಿಕರಿಗೆ ಆನೆಗಳ ಚಲನವಲನ ಕುರಿತು ಮಾಹಿತಿ ನೀಡುವುದಲ್ಲದೇ ಅರಣ್ಯ ಪ್ರದೇಶದ ಒಳಗೆ ಸಂಚರಿಸದಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ, ಪ್ರಚುರ ಪಡಿಸುವುದು. ಪ್ರತಿ ಆನೆ ಕಾರ್ಯವಡೆ ಕೇಂದ್ರಸ್ಥಾನದಲ್ಲಿ Control Room (ನಿಯಂತ್ರಣ ಕೊಠಡಿ) ಕಾರ್ಯ ನಿರ್ವಹಿಸತಕ್ಕದ್ದು ಮತ್ತು Control Room ನ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಲ್ಲಿ ಪ್ರಚುರ ಪಡಿಸುವುದು.ಈ ಆನೆ ಕಾರ್ಯಪಡೆಗಳಿಗೆ ಆನೆಹಾವಳಿ ತಡೆಗಟ್ಟುವ/ಹಿಮ್ಮೆಟ್ಟಿಸುವ ಕಾರ್ಯಕ್ಕೆ ಬೇಕಾಗುವ ನಾಕಿ ಟಾಕಿ, ಬಂದೂಕು. ಪಟಾಕಿ ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸಲು ಉಪಯೋಗಿತ ಸಲಕರಣೆಗಳು ಹಾಗೂ ಇನ್ನಿತರೇ ಅವಶ್ಯಕ ಸಲಕರಣೆ ಮತ್ತು ಸೌಲಭ್ಯಗಳನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಇವರು ಒದಗಿಸುವುದು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಪಡೆ ಮುಖ್ಯಸ್ಥರು) ಇವರು ಆನೆ ಕಾರ್ಯಪಡೆಗೆ ಉಪ ವಲಯ ಅರಣ್ಯಾಧಿಕಾರಿ ಮತ್ತು ಗಸ್ತು ಅರಣ್ಯ ಪಾಲಕರನ್ನು ನಿಯೋಜಿಸಿ ಸ್ಥಳನಿಯುಕ್ತಿಗೊಳಿಸಿ ಕೂಡಲೇ ಆದೇಶ ಹೊರಡಿಸಲು ಕ್ರಮವಹಿಸತಕ್ಕದ್ದು.ಸದರಿ ಆನೆ ಕಾರ್ಯಪಡೆಯೂ ಆನೆಹಾವಳಿ ಪ್ರದೇಶಗಳಿಗೆ ಶೀಘ್ರುವಾಗಿ ತಲುಪಲು ಅನುವಾಗುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಇವರು ಆನೆ ಕಾರ್ಯಪಡೆಗೆ 03 ಮೊಲೇರೋ ಜೀಪ್‌ಗಳನ್ನು ಒದಗಿಸತಕ್ಕದ್ದು. ಇದಲ್ಲದೆ 02 Canter ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನಿಯೋಜಿಸತಕ್ಕದ್ದು.ಕಾಡಾನೆ ದಾಳಿ ತಡೆ-ವ್ಯವ/ಆನೆಗಳನ್ನು ಹಿಮ್ಮೆಟ್ಟಿಸುವ ಸಂದರ್ಭಗಳಲ್ಲಿ ಸ್ಥಳೀಯ ಪೊಲೀಸ್ ಇಲಾಖೆಯ ಸಹಾಯ ಪಡೆಯತಕ್ಕದ್ದು.ಸರ್ಕಾರದ ಆದೇಶವನ್ನು ಕೂಡಲೇ ಅನುಷ್ಠಾನಗೊಳಿಸಲು ಹಾಗೂ ಈ ಟಾಸ್ಕ್ ಫೋರ್ಸ್‌ಗಳು ಕಾರ್ಯ ಪ್ರವೃತ್ತರಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.













































