ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ವ್ಯಾಪ್ತಿಯಲ್ಲಿ ಮಿತಿಮೀರುತ್ತಿರುವ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಕೊನೆಗೂ ಪ್ರತ್ಯೇಕ ‘ಆನೆ ಕಾರ್ಯಪಡೆ’ (Elephant Task Force) ಯನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.
ಕರಾವಳಿ ಭಾಗದ ರೈತರ ಪ್ರಾಣ ಮತ್ತು ಬೆಳೆ ರಕ್ಷಣೆಗಾಗಿ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಅವರು ನಡೆಸಿದ್ದ ಭಗೀರಥ ಯತ್ನ ಮತ್ತು ನಿರಂತರ ಹೋರಾಟಕ್ಕೆ ಇದೀಗ ಬೃಹತ್ ಜಯ ಸಿಕ್ಕಿದೆ.
ಕಾಡಾನೆಗಳ ಉಪಟಳದಿಂದಾಗಿ ಈ ಭಾಗದ ರೈತರು ತಮ್ಮ ಜೀವನಾಧಾರವಾದ ಅಡಿಕೆ, ತೆಂಗು, ಬಾಳೆ ಬೆಳೆಗಳನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದರು. ಈ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದ ಶಾಸಕ ಕಿಶೋರ್ ಕುಮಾರ್ ಅವರು, ವಿಧಾನ ಪರಿಷತ್ ಸದನದಲ್ಲಿ ಅನೇಕ ಬಾರಿ ಈ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಗುಡುಗಿದ್ದರು. ಕೇವಲ ಸದನದಲ್ಲಿ ಮಾತನಾಡಿ ಸುಮ್ಮನಾಗದೆ, ಕಿಸಾನ್ ಸಂಘದ ನಿಯೋಗದೊಂದಿಗೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಖುದ್ದಾಗಿ ಹಲವು ಬಾರಿ ಭೇಟಿಯಾಗಿ, ಕರಾವಳಿಗೆ ಪ್ರತ್ಯೇಕ ಟಾಸ್ಕ್ ಫೋರ್ಸ್ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದರು.
ಶಾಸಕರ ಸತತ ಒತ್ತಡ, ಬೆನ್ನುಬಿಡದ ಯತ್ನ ಹಾಗೂ ಕರಾವಳಿ ರೈತರ ಮೇಲಿನ ಅವರ ಬದ್ಧತೆಯ ಫಲವಾಗಿಯೇ ಸರ್ಕಾರ ಇಂದು ಮಣಿದು ಈ ಅಧಿಕೃತ ಆದೇಶವನ್ನು ಹೊರಡಿಸಿದೆ.ಸರ್ಕಾರ ಹೊರಡಿಸಿರುವ ನೂತನ ಆದೇಶದ ಪ್ರಕಾರ, ಈ ಆನೆ ಕಾರ್ಯಪಡೆಯ ಕೇಂದ್ರ ಸ್ಥಾನವು ‘ಸುಳ್ಯ’ ಆಗಿರಲಿದೆ. ಈ ಹಿಂದೆ ಆನೆಗಳನ್ನು ಹಿಮ್ಮೆಟ್ಟಿಸಲು ಮಡಿಕೇರಿಯಿಂದಲೇ ಟಾಸ್ಕ್ ಫೋರ್ಸ್ ಬರಬೇಕಾಗಿದ್ದರಿಂದ ಕಾರ್ಯಾಚರಣೆ ವಿಳಂಬವಾಗುತ್ತಿತ್ತು. ಈಗ ಸುಳ್ಯದಲ್ಲೇ ಕೇಂದ್ರಸ್ಥಾನ ಇರುವುದರಿಂದ ರೈತರಿಗೆ ತ್ವರಿತ ಸ್ಪಂದನೆ ಸಿಗಲಿದೆ. ಈ ಕಾರ್ಯಪಡೆಯಲ್ಲಿ ಓರ್ವ ಉಪ ವಲಯ ಅರಣ್ಯಾಧಿಕಾರಿ, ಇಬ್ಬರು ಗಸ್ತು ಅರಣ್ಯ ಪಾಲಕರು ಹಾಗೂ ಹೊರಗುತ್ತಿಗೆ ಆಧಾರದ ಮೇಲೆ 25 ವಾಹನ ಚಾಲಕರು ಸೇರಿದಂತೆ ಒಟ್ಟು 28 ಮಂದಿ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ತ್ವರಿತ ಕಾರ್ಯಾಚರಣೆಗಾಗಿ ಆನೆ ಕಾರ್ಯಪಡೆಗೆ ಅರಣ್ಯ ಇಲಾಖೆಯಿಂದಲೇ 3 ಬೊಲೆರೊ ಜೀಪ್‌ಗಳನ್ನು ಹಾಗೂ 2 ಕ್ಯಾಂಟರ್ ವಾಹನಗಳನ್ನು ಒದಗಿಸಲಾಗುತ್ತಿದೆ.
ಅಲ್ಲದೆ, ಆನೆಗಳನ್ನು ಹಿಮ್ಮೆಟ್ಟಿಸಲು ಬೇಕಾಗುವ ವಾಕಿ-ಟಾಕಿ, ಬಂದೂಕು, ಪಟಾಕಿ ಹಾಗೂ ಇತರ ಅತ್ಯಗತ್ಯ ಸಲಕರಣೆಗಳೊಂದಿಗೆ ಸುಳ್ಯದ ಕೇಂದ್ರಸ್ಥಾನದಲ್ಲಿ 24 ಗಂಟೆ ಕಾರ್ಯನಿರ್ವಹಿಸುವ ‘ಕಂಟ್ರೋಲ್ ರೂಮ್’ (ನಿಯಂತ್ರಣ ಕೊಠಡಿ) ಕೂಡ ತಲೆ ಎತ್ತಲಿದೆ.ಶಾಸಕ ಕಿಶೋರ್ ಕುಮಾರ್ ಅವರ ಈ ಸಾಧನೆಯಿಂದಾಗಿ, ಕಾಡಾನೆ ಹಾವಳಿಯಿಂದ ಪ್ರಾಣಭೀತಿಯಲ್ಲಿ ಬದುಕುತ್ತಿದ್ದ ಕರಾವಳಿಯ ಕೃಷಿಕರಿಗೆ ದೊಡ್ಡ ನೆಮ್ಮದಿ ಸಿಕ್ಕಂತಾಗಿದೆ. ತಮ್ಮ ನಿರಂತರ ಹೋರಾಟಕ್ಕೆ ಮಣಿದು ಆನೆ ಕಾರ್ಯಪಡೆ ರಚಿಸಿದ ಅರಣ್ಯ ಸಚಿವರಿಗೆ ಶಾಸಕರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಶೀಘ್ರವೇ ಈ ಕಾರ್ಯಪಡೆಗೆ ವಾಹನ ಮತ್ತು ಸಿಬ್ಬಂದಿ ನೇಮಕಗೊಂಡು, ಕೂಡಲೇ ಕಾರ್ಯಾಚರಣೆ ಆರಂಭಿಸುವಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ರೈತರ ನೆರವಿಗೆ ಧಾವಿಸುವುದಾಗಿ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಭರವಸೆ ನೀಡಿದ್ದಾರೆ.













































