ಬೇರೆಡೆಗೆ ಹೋಗುತ್ತಿದ್ದ ರಷ್ಯನ್ ತೈಲ ಟ್ಯಾಂಕರ್​ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು

Picture of Savistara

Savistara

Bureau Report

ನವದೆಹಲಿ, ಮಾರ್ಚ್ 5: ಪಶ್ಚಿಮ ಏಷ್ಯನ್ ಯುದ್ಧದಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ ಭಾರತವು ಪೆಟ್ರೋಲಿಯಂ ಕೊರತೆಗೆ ಸಿಲುಕುತ್ತಿದೆ. ಇದೇ ಹೊತ್ತಲ್ಲಿ ರಷ್ಯಾ ದೇಶದಿಂದ ನೆರವಿನ ಹಸ್ತ ಸಿಕ್ಕಿದೆ. ಬ್ಲೂಮ್​ಬರ್ಗ್ ವರದಿ ಪ್ರಕಾರ ರಷ್ಯಾದಿಂದ ತೈಲ ಹೊತ್ತ ಮೂರು ಹಡಗುಗಳು (Oil cargoes) ಭಾರತಕ್ಕೆ ಬರುತ್ತಿವೆ. ಇದರಲ್ಲಿ ಒಂದು ಹಡಗು ನಿನ್ನೆಯೇ (ಫೆ. 4) ಭಾರತಕ್ಕೆ ಬಂದಾಗಿದೆಯಂತೆ. ಈ ಮೂರು ಹಡಗುಗಳಲ್ಲಿ 21 ಲಕ್ಷಕ್ಕೂ ಅಧಿಕ ಬ್ಯಾರಲ್ ತೈಲ ಇದೆ.

ಒಡುನೆ, ಮಟಾರಿ ಮತ್ತು ಇಂದ್ರಿ ಹಡಗುಗಳ ಮೂಲಕ ಭಾರತಕ್ಕೆ ಈ ತೈಲ ಸಿಗುತ್ತಿದೆ. ಒಡುನೆ ಮತ್ತು ಇಂದ್ರಿ ಹಡಗುಗಳು ಸ್ಯೂಜ್​ಮ್ಯಾಕ್ಸ್ ದರ್ಜೆಯ ಹಡುಗಗಳಾಗಿದ್ದು, ತಲಾ 7,30,000 ಬ್ಯಾರಲ್​ಗಳನ್ನು ಸಾಗಿಸುತ್ತವೆ. ಮಟಾರಿ ಎಂಬುದು ಆಫ್ರಾಮ್ಯಾಕ್ಸ್ ದರ್ಜೆಯ ಹಡಗಾಗಿದ್ದು, ಇದು 7,00,000 ಬ್ಯಾರಲ್ ತೈಲ ಸಾಗಿಸುತ್ತದೆ.

7.3 ಲಕ್ಷ ಬ್ಯಾರಲ್ ತೈಲ ಹೊತ್ತ ಒಡುನೆ ಹಡಗು ಭಾರತದ ಪಾರದೀಪ್ ಬಂದರನ್ನು ತಲುಪಿದೆ. ಮಟಾರಿ ಟ್ಯಾಂಕರ್ ಗುಜರಾತ್​ನ ವಾಡಿನರ್ ಬಂದರಿನತ್ತ ಬರುತ್ತಿದೆ. ಇನ್ನು, ಸಿಂಗಾಪುರದತ್ತ ಹೋಗುತ್ತಿದ್ದ ಇಂದ್ರಿ ಟ್ಯಾಂಕರ್ ಭಾರತದತ್ತ ತಿರುಗಿದೆ ಎಂದು ಹೇಳಲಾಗುತ್ತಿದೆ.ಭಾರತದ ಪೆಟ್ರೋಲಿಯಂ ರಿಫೈನರಿ ಕಂಪನಿಗಳು ರಷ್ಯಾದಿಂದ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುತ್ತಿರುವುದು ಕೂಡ ತಿಳಿದುಬಂದಿದೆ.ಉಕ್ರೇನ್ ಯುದ್ಧ ಶುರುವಾಗಿ, ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳು ನಿಷೇಧ ಹಾಕಿದ ಬಳಿಕ ರಷ್ಯಾದಿಂದ ಭಾರತ ಹಾಗೂ ಚೀನಾ ಕಡಿಮೆ ಬೆಲೆಗೆ ತೈಲ ಖರೀದಿ ಮಾಡುತ್ತಿವೆ. ಆದರೆ, ಅಮೆರಿಕದ ಒತ್ತಡದಿಂದ ತಿಂಗಳ ಹಿಂದಷ್ಟೇ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿತ್ತು. ಭಾರತಕ್ಕೆಂದು ಇದ್ದ ತೈಲವನ್ನು ಚೀನಾ ಮತ್ತಷ್ಟು ಕಡಿಮೆ ಬೆಲೆಗೆ ಕೊಂಡುಕೊಂಡಿತು.

ಈಗ ಗಲ್ಫ್ ದೇಶಗಳಿಂದ ತೈಲ ಪೂರೈಕೆ ಸ್ಥಗಿತಗೊಂಡಿರುವುದರಿಂದ ರಷ್ಯನ್ ತೈಲಕ್ಕೆ ಬೇಡಿಕೆ ಬರುತ್ತಿದೆ. ಭಾರತ ಮತ್ತು ಚೀನಾದ ಕಂಪನಿಗಳು ರಷ್ಯನ್ ತೈಲದ ಮೇಲೆ ಆಸಕ್ತಿ ತೋರಿವೆ.

[t4b-ticker]
error: Content is protected !!