ಡೋನ್ ದಾಳಿಯಿಂದ ದುಬೈಏರ್‌ಪೋರ್ಟ್ ಬಳಿ ಬೆಂಕಿ:ವಿಮಾನಗಳ ಕಾರ್ಯಾಚರಣೆ ಸ್ಥಗಿತ

Picture of Savistara

Savistara

Bureau Report

ಡೋನ್ ದಾಳಿಯಿಂದಾಗಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ದುಬೈ ಅಧಿಕಾರಿಗಳು ತಿಳಿಸಿದ್ದಾರೆ.

ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಡೋನ್ ದಾಳಿ ನಡೆದಿದೆ. ಯಾರಿಗೂ ಗಾಯಗಳಾಗಿಲ್ಲ. ಸದ್ಯ ಬೆಂಕಿ ಹತೋಟಿಯಲ್ಲಿದೆ ಎಂದು ದುಬೈ ಮೀಡಿಯಾ ಹೌಸ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.

ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗುವುದು. ಪ್ರಯಾಣಿಕರು ತಮ್ಮ ವಿಮಾನಯಾದ ಬಗ್ಗೆ ಹೊಸ ಅಪ್ಲೇಟ್‌ಗಾಗಿ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ದುಬೈ ಮೀಡಿಯಾ ಹೌಸ್ ‘ಎಕ್ಸ್’ನಲ್ಲಿ ಸೂಚಿಸಿದೆ.

ದುಬೈಗೆ ತೆರಳುವ ಮತ್ತು ಅಲ್ಲಿಂದ ಬರುವ ವಿಮಾನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವುದಾಗಿ ಎಮಿರೇಟ್ಸ್ ಏರ್‌ಲೈನ್ಸ್ ಘೋಷಿಸಿದೆ.

ತಿರುವನಂತಪುರಕ್ಕೆ ವಾಪಸ್ ಆದ ಎಮಿರೇಟ್ಸ್ ವಿಮಾನ

ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾರಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ, ತಿರುವನಂತಪುರನಿಂದ ದುಬೈಗೆ ತೆರಳುತ್ತಿದ್ದ ಎಮಿರೇಟ್ಸ್ ವಿಮಾನವು ಸೋಮವಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ದುಬೈ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರಿಂದ ಎಮಿರೇಟ್ಸ್ ಟಿಆರ್‌ವಿ ಡಿಎಕ್ಸ್‌ಬಿ ವಿಮಾನವು ಮಧ್ಯದಲ್ಲಿಯೇ ವಾಪಾಸ್ ಆಗಿ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದು ಇಲ್ಲಿನ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. 353 ಪ್ರಯಾಣಿಕರು ಮತ್ತು 19 ಸಿಬ್ಬಂದಿಯನ್ನು ಹೊತ್ತ ಈ ವಿಮಾನ ಬೆಳಿಗ್ಗೆ 4.40ಕ್ಕೆ ಹೊರಟು, 8.40ಕ್ಕೆ ವಾಪಸ್ ಆಗಿದೆ.

ಇದಕ್ಕೂ ಮುನ್ನ 325 ಜನರನ್ನು ಹೊತ್ತು ಬೆಳಿಗ್ಗೆ 4.30ಕ್ಕೆ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಎಮಿರೇಟ್ಸ್‌ನ ಮತ್ತೊಂದು ವಿಮಾನ EK533 ಕೂಡ ವಾಪಸ್ ಆಗಿದ್ದು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದೂ ಅವರು ಹೇಳಿದ್ದಾರೆ.

ಫೆ.28ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನೇತೃತ್ವದ ಮಿಲಿಟರಿ ಕಾರ್ಯಾಚರಣೆ ಆರಂಭವಾದಾಗಿನಿಂದ ಗಲ್ಫ್ ಅರಬ್ ರಾಷ್ಟ್ರಗಳ ಮೇಲೆ 2,000ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡೋನ್ ದಾಳಿಗಳು ನಡೆದಿವೆ. ಗಲ್ಫ್ ತೈಲ ಘಟಕ, ಬಂದರುಗಳು, ವಿಮಾನ ನಿಲ್ದಾಣಗಳು, ಹೋಟೆಲ್‌ಗಳು, ವಸತಿ ಮತ್ತು ಕಚೇರಿ ಕಟ್ಟಡಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

[t4b-ticker]
error: Content is protected !!