ಕೋಟ್ಯಂತರ ರೂ ಆದಾಯವಿರುವ ದೇಗುಲದಲ್ಲಿ ಅಭಿವೃದ್ಧಿ ಶೂನ್ಯ: ರಾಜ್ಯದ ಶ್ರೀಮಂತ ದೇಗುಲಕ್ಕೆ ಇದೆಂಥಾ ಸ್ಥಿತಿ?

Picture of Savistara

Savistara

Bureau Report

ಮಂಗಳೂರು, ಮಾರ್ಚ್​​ 17: ಕುಕ್ಕೆ ಸುಬ್ರಹ್ಮಣ್ಯ‌ ದೇವಸ್ಥಾನ (Kukke Shree Subrahmanya Temple) ರಾಜ್ಯದ ಶ್ರೀಮಂತ ದೇಗುಲಗಳಲ್ಲಿ ಒಂದು. ಕೋಟ್ಯಂತರ ರೂ ಆದಾಯ ತಂದು ಕೊಡುವ ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮಾತ್ರ ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲ ಎಂಬುದು‌ ದಶಕಗಳ‌ ಆರೋಪ.‌ ಸಂಪತ್ತು ಇದ್ದರೂ ಇಚ್ಛಾಶಕ್ತಿ, ಕ್ರಿಯಾಶಕ್ತಿ‌ ಇಲ್ಲದ ಪರಿಣಾಮ ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಭಕ್ತರು ಪರದಾಡುವಂತಾಗಿದೆ.

ಭಕ್ತರ ಆರೋಪವೇನು?

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಪ್ರಸಿದ್ಧ ನಾಗ ಕ್ಷೇತ್ರ ಅಂತಾನೆ ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿರುವ ಈ ದೇವಸ್ಥಾನಕ್ಕೆ ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರ್ತಾರೆ. ಆದರೆ ಇತಿಹಾಸ ಪ್ರಸಿದ್ಧವಾಗಿರುವ ಈ ದೇವಸ್ಥಾನದಲ್ಲಿ ವ್ಯವಸ್ಥೆಗಳು ಮಾತ್ರ ಇನ್ನು ಇತಿಹಾಸ ಕಾಲದ್ದೆ ಇದೆ ಎಂಬುದು ಭಕ್ತರ ಆರೋಪ.

ದೇವಳದ ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲ್ಯಾನ್ ಯೋಜನೆ ಜಾರಿಗೊಳಿಸಿ 17 ವರ್ಷವಾದರೂ ಇನ್ನು ಕೂಡ ಪೂರ್ಣವಾಗಿಲ್ಲ ಎಂಬದು ಇಲ್ಲಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟು 604 ಕೋಟಿ ರೂ ಕಾಮಗಾರಿಯಲ್ಲಿ ಈಗಾಗಲೇ ಎರಡು ಹಂತವನ್ನೂ ಪೂರ್ಣಗೊಳಿಸಿದ್ದು, ಈಗ ಮೂರನೇ ಹಂತದ ಕಾಮಗಾರಿಗಳ ಯೋಜನೆ, ಅಂದಾಜುಪಟ್ಟಿ ಸಿದ್ದಗೊಳಿಸಿ ಪಿಡಬ್ಲ್ಯುಡಿ ಇಲಾಖೆಯಿಂದ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗಿದ್ದರು ಸಹ ಇನ್ನು ಸಹ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ 600 ಕೋಟಿ ರೂ ಎಫ್​​ಡಿ ಇದ್ದರೂ, ವಾರ್ಷಿಕ 150 ಕೋಟಿಗೂ ಹೆಚ್ಚು ಆದಾಯವಿದ್ದರು ಸಹ ಈ ಹಣವನ್ನು ದೇವಳದ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕೆಂದರೆ ಸರ್ಕಾರದ, ಹಣಕಾಸು ಇಲಾಖೆಯ‌ ಅನುಮೋದನೆ ಕಡ್ಡಾಯವಾಗಿದೆ. ಹೀಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ, ಕ್ರಿಯಾಶಕ್ತಿ ಇಲ್ಲದೆ, ಅವೈಜ್ಞಾನಿಕ ತೀರ್ಮಾನಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂಬ ಆರೋಪವಿದೆ.

ಏನೆಲ್ಲಾ ನಿರ್ಮಾಣವಾಗಬೇಕು?

ದೇವಳದಲ್ಲಿ ಸರ್ಪ ಸಂಸ್ಕಾರ ಸೇವೆ ಬಹಳಷ್ಟು ಪ್ರಸಿದ್ಧಿ ಪಡೆದಿದ್ದು ಪ್ರಸ್ತುತ ದಿನವೊಂದಕ್ಕೆ 175 ಭಕ್ತರಿಗೆ ಮಾತ್ರ ಸೇವೆ ನಡೆಸಲು ಅವಕಾಶವಿದ್ದು, ಎರಡು ತಿಂಗಳ ಕಾಲ ಬುಕ್ಕಿಂಗ್​ಗೆ ಕಾಯಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಸರ್ಪ ಸಂಸ್ಕಾರ ಯಾಗಶಾಲೆಯ ನಿರ್ಮಾಣವಾಗಬೇಕಿದೆ. ಒಂದು ಸಾವಿರ ಮಂದಿ ಆಶ್ಲೇಷ ಬಲಿ ಪೂಜೆ ಸಲ್ಲಿಸಲು ಪೂಜಾ ಮಂದಿರವೂ ನಿರ್ಮಾಣವಾಗಬೇಕಿದೆ. ಸದ್ಯ 25 ವರ್ಷ ಹಿಂದಿನ ಭೋಜನಶಾಲೆಯಿದ್ದು ಇನ್ನು ಮುಂದೆ ಏಕಕಾಲದಲ್ಲಿ ಐದು ಸಾವಿರ ಮಂದಿ ಕೂತು ಊಟ ಮಾಡುವ ಭೋಜನ ಶಾಲೆ ನಿರ್ಮಾಣವಾಗಬೇಕಿದೆ.

ಸದ್ಯ ದೇವಳದಲ್ಲಿ ವಸತಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಸೀಸನ್ ಸಮಯದಲ್ಲಿ ಭಕ್ತರು ರಥಬೀದಿಯಲ್ಲೆ ಮಲಗಬೇಕಾದ ಪರಿಸ್ಥಿತಿಯಿದೆ. ಹೀಗಾಗಿ 604 ಕೋಟಿ ರೂ ಗಳ‌ ಮಾಸ್ಟರ್ ಪ್ಲ್ಯಾನ್​ನಲ್ಲಿ ಪಾರಂಪರಿಕ ರಥಬೀದಿ, 800 ಕೊಠಡಿಗಳ ವಸತಿಗೃಹ, ಶೌಚಾಲಯ, ಗೆಸ್ಟ್ ಹೌಸ್, ಸುತ್ತು ಪೌಳಿ‌ ದುರಸ್ತಿ ಸೇರಿದಂತೆ ಅನೇಕ‌ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಸದ್ಯ ಈ ಬಾರಿಯ ಬಜೆಟ್​ನಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಾಧಿಕಾರ ರಚಿಸುವ ಬಗ್ಗೆ ಸರ್ಕಾರ ಘೋಷಣೆ ಮಾಡಿದ್ದು, ಇನ್ನಾದರೂ ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಗಳು ಆಗುತ್ತಾ ಅಂತಾ ಕಾದು ನೋಡಬೇಕಾಗಿದೆ‌.

[t4b-ticker]
error: Content is protected !!