ಹಾಸನ, ಮಾ.18: ಇಡೀ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಮಹತ್ವದ ಹೆಜ್ಜೆ ಇಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಹಾಸನದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಬರೋಬ್ಬರಿ 13,712 ಪುಟಗಳ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ತನಿಖೆಯಲ್ಲಿ ಬಯಲಾದ ಅಂಶಗಳು:ದೋಷಾರೋಪ ಪಟ್ಟಿಯ ಪ್ರಕಾರ, ಈ ಹಗರಣದಲ್ಲಿ ಒಟ್ಟು 52 ಜನರ ಹೆಸರನ್ನು ಉಲ್ಲೇಖಿಸಲಾಗಿದ್ದು, ಈ ಪೈಕಿ 39 ಜನರ ವಿರುದ್ಧ ಗಂಭೀರ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಎಸ್‌ಐಟಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 277 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ತಾಂತ್ರಿಕ ಸಾಕ್ಷ್ಯ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಗಳ ಆಧಾರದ ಮೇಲೆ ದೋಷಾರೋಪ ಹೊರಿಸಲಾಗಿದೆ.
70 ಪೆನ್‌ಡ್ರೈವ್‌ಗಳ ಬಳಕೆ:ಚುನಾವಣಾ ಸಮಯದಲ್ಲಿ ಈ ವಿಡಿಯೋಗಳನ್ನು ಹಂಚಲು ಆರೋಪಿಗಳು ಹಾಸನದಲ್ಲೇ ಅಂದಾಜು 70 ಪೆನ್‌ಡ್ರೈವ್‌ಗಳನ್ನು ಖರೀದಿಸಿದ್ದರು ಎಂಬ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಸಂತ್ರಸ್ತ ಮಹಿಳೆಯರ ಒಪ್ಪಿಗೆಯಿಲ್ಲದೆ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿ, ಅವುಗಳನ್ನು ಪೆನ್‌ಡ್ರೈವ್ ಮೂಲಕ ಹಂಚಿಕೆ ಮಾಡಿರುವುದು ದೃಢಪಟ್ಟಿದೆ.
ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧದ ಆರೋಪ ಸಾಬೀತು!ಈ ಪ್ರಕರಣದಲ್ಲಿ ಎl ನವೀನ್, ಎ2 ಪ್ರಜ್ವಲ್ ಅವರ ಕಾರು ಚಾಲಕರಾಗಿದ್ದ ಕಾರ್ತಿಕ್ ಎನ್, ಎ3 ಚೇತನ್ ಬಿಸಿ, ಎ4 ಚೇತನ್ ವೈ ಎಸ್, ಎ5 ಲಿಖಿತ್ ಗೌಡ ಸೇರಿದಂತೆ ಒಟ್ಟು 39 ಆರೋಪಿಗಳ ವಿರುದ್ಧ ದೋಷಾರೋಪಣೆ ಮಾಡಲಾಗಿದೆ. ಇವರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಹೆಸರುಗಳೂ ಸೇರಿವೆ. ಅದರಲ್ಲೂ ಬಿಜೆಪಿ ನಾಯಕ ಪ್ರೀತಂಗೌಡ, ಸಂಸದ ಶ್ರೇಯಸ್ ಅತ್ಯಾಪ್ತರ ವಿರುದ್ಧದ ಆರೋಪ ಸಾಬೀತುಪಡಿಸಲಾಗಿದೆ.
ಪ್ರಜ್ವಲ್ ರೇವಣ್ಣ ಅವರ ಹೆಸರು ಕೈಬಿಡಲಾಗಿದೆಯೇ?
ಅಶ್ಲೀಲ ವಿಡಿಯೋಗಳ ಹಂಚಿಕೆ ಮತ್ತು ವೈರಲ್ ಮಾಡಿದ ಈ ನಿರ್ದಿಷ್ಟ ಚಾರ್ಜ್‌ಶೀಟ್‌ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹೆಸರು ಆರೋಪಿಯಾಗಿ ಸೇರ್ಪಡೆಯಾಗಿಲ್ಲ ಎಂದು ತಿಳಿದುಬಂದಿದೆ. ಪ್ರಕರಣದ ವ್ಯಾಪ್ತಿಯಲ್ಲಿ ಅವರ ಹೆಸರು ಉಲ್ಲೇಖವಾಗಿದ್ದರೂ, ವಿಡಿಯೋ ಹಂಚಿಕೆ ಮಾಡಿದವರ ಪಟ್ಟಿಯಲ್ಲಿ ಸದ್ಯಕ್ಕೆ ಅವರ ಹೆಸರಿಲ್ಲದಿರುವುದು ಕುತೂಹಲ ಮೂಡಿಸಿದೆ.
ಹಿನ್ನೆಲೆ:2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ಅವರು ನೀಡಿದ ದೂರಿನ ಮೇರೆಗೆ ಎಸ್‌ಐಟಿ ತನಿಖೆ ಆರಂಭಿಸಿತ್ತು. ಇದೀಗ ಸಲ್ಲಿಸಲಾಗಿರುವ ಈ ಬೃಹತ್ ದೋಷಾರೋಪ ಪಟ್ಟಿಯು ನ್ಯಾಯಾಲಯದಲ್ಲಿ ಮುಂದಿನ ಕಾನೂನು ಸಮರಕ್ಕೆ ದಾರಿಯಾಗಿದೆ.













































