ಮುಂಬೈ: ಗುರುವಾರ (ಮಾರ್ಚ್ 19) ಧುರಂಧರ್ 2: ದಿ ರಿವೆಂಜ್ ಸಿನಿಮಾ ತೆರೆಕಂಡ ಬೆನ್ನಲ್ಲೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲು ಪ್ರಾರಂಭಿಸಿದೆ. ತೆರೆಕಂಡ ಮೊದಲ ದಿನವೇ ಸುಮಾರು 143 ಕೋಟಿ ಗಳಿಸುವ ಮೂಲಕ ಅತ್ಯಧಿಕ ಹಣ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸಿನಿಮಾಗೆ ಮೆಚ್ಚಿಗೆಯ ಮಹಾಪೂರದ ಜೊತೆ-ಜೊತೆಗೆ ಇದೊಂದು ಪ್ರೊಪಗಾಂಡಾ ಸಿನಿಮಾ ಎಂಬ ಆರೋಪ ಸಹ ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಏಕ ಕಾಲಕ್ಕೆ ನಡೆದಿದ್ದ ನೈಜ ಸನ್ನಿವೇಶಗಳನ್ನು ಸಿನಿಮಾದಲ್ಲಿ ಬಳಸಿಕೊಂಡಿರುವುದೇ ಇದರ ಈ ಮಟ್ಟಿಗಿನ ಖ್ಯಾತಿಗೆ ಕಾರಣವಾಗಿದೆ ಎಂದತೆ ಸುಳ್ಳಲ್ಲ.
ಈ ಸಿನಿಮಾ ಯಾವುದೇ ರೀತಿಯ ಡಾಕ್ಯೂಮೆಂಟರಿ ಅಲ್ಲ, ಇದೊಂದು ನೈಜ ಸಂಗತಿಗಳನ್ನು ಆಧರಿಸಿ ನಿರ್ಮಿಸಿರುವ ಕಾಲ್ಪನಿಕ ಕತೆ ಎಂದು ಚಿತ್ರ ತಂಡದವರು ಹೇಳಿದ್ದರೂ ಸಹ ಕೆಲ ಪ್ರೇಕ್ಷಕರು ಇದೊಂದು ಸಂಪೂರ್ಣ ಸತ್ಯಾಂಶದಿಂದ ಕೂಡಿರುವ ಸಿನಿಮಾ ಎಂದೇ ಭಾವಿಸಿದ್ದಾರೆ.ಈ ಸಿನಿಮಾದಲ್ಲಿ ತೋರಿಸಿರುವ ಅನೇಕ ಪಾತ್ರಗಳು ಈಗ ಬಹುಮಟ್ಟಿಗೆ ಚರ್ಚೆಗೆ ಗ್ರಾಸ ವಾಗುತ್ತಿದ್ದು, ಅದರಲ್ಲಿ ಈ ಅತೀಫ್ ಅಹ್ಮದ್ (Atiq Ahmed in Dhurandhar 2) ಪಾತ್ರ ಪ್ರಮುಖವಾಗಿದೆ.
ಯಾರು ಈ ಅತೀಫ್ ಅಹ್ಮದ್?
ಧುರಂಧರ್ ಸಿನಿಮಾದಲ್ಲಿ ಈ ಅತೀಫ್ ಅಹ್ಮದ್ ಎಂಬ ಪಾತ್ರವನ್ನು ಚಿತ್ರಿಸಿದ್ದು ಬಾಲಿವುಡ್ ನಟ ಸಲೀಮ್ ಸಿದ್ದಕಿ ಈ ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾದಲ್ಲಿ ಇವನೊಬ್ಬ ಭಾರತದ ರಾಜಕಾರಣಿ, ಗ್ಯಾಂಗ್‌ಸ್ಟಾರ್ ಹಾಗೂ ಪಾಕಿಸ್ತಾನದ ಐಎಸ್‌ಐ ಜೊತೆಗೆ ಸಂಬಂಧ ಹೊಂದಿರುವ ವ್ಯಕ್ತಿ ಎಂದು ತಿಳಿಸಲಾಗಿದೆ.
ಇವನು ಪಾಕಿಸ್ತಾನದಲ್ಲಿ ತಯಾರಾಗುವ ಭಾರತೀಯ ನಕಲಿ ನೋಟುಗಳನ್ನು ಭಾರತಕ್ಕೆ ತೆಗೆದುಕೊಂಡು ಬರುವಂತೆ ನೋಡಿಕೊಂಡು, ಅದನ್ನು ಭಾರತದಾದ್ಯಂತ ಪಸರಿಸುವಂತೆ ನೋಡಿಕೊಳ್ಳುತ್ತಿದ್ದ. ಇವನೊಬ್ಬ ದೇಶದ್ರೋಹಿ ಎಂಬತ್ತೆ ಸಿನಿಮಾದಲ್ಲಿ ತೋರಿಸಲಾಗಿದ್ದು, ಕೊನೆಗೆ ಈತ ಅಪರಿಚಿತ ವ್ಯಕ್ತಿಯ ಗುಂಡಿಗೆ ಬಲಿಯಾಗುವುದನ್ನು ಸಿನಿಮಾದಲ್ಲಿ ನೋಡ ಬಹುದಾಗಿದೆ.
ಈ ಅತೀಫ್ ಅಹ್ಮದ್ ನೈಜ ಪಾತ್ರವೇ?
ಸಿನಿಮಾದಲ್ಲಿ ತೋರಿಸಲಾಗಿರುವ ಅತೀಫ್ ಅಹ್ಮದ್ ಎಂಬ ಪಾತ್ರ ಸಮಾಜವಾದಿ ಪಕ್ಷದ ಮಾಜಿ ಸಂಸದ ಹಾಗೂ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಪಾತ್ರವನ್ನು ಬಹುಮಟ್ಟಿಗೆ ಹೋಲುತ್ತದೆ.
ಈ ಪಾತ್ರದಲ್ಲಿ ಅಭಿನಯಿಸಿರುವ ವ್ಯಕ್ತಿ ನೋಡಲು ಅತಿಕ್ ಅಹ್ಮದ್ ರೀತಿಯಲ್ಲೇ ಕಾಣಿಸುವ ಕಾರಣ ಇದೊಂದು ನಿಜವಾದ ವ್ಯಕ್ತಿಯನ್ನು ಆಧರಿಸಿ ತಯಾರಿಸಲಾದ ಪಾತ್ರ ಎನ್ನಬಹುದು. ಸಿನಿಮಾದಲ್ಲಿ ತೋರಿಸಿದಂತೆ ಅತೀಕ್ ಅಹ್ಮದ್ ಒಬ್ಬ ಗ್ಯಾಂಗ್‌ಸ್ಟರ್, ರಾಜಕಾರಣಿ ಹಾಗೂ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿದ್ದ ಎನ್ನುವುದಕ್ಕೆ ಈಗಾಗಲೇ ಬಹಳಷ್ಟು ಸಾಕ್ಷಗಳು ಲಭ್ಯವಾಗಿದೆ.













































