Kerala | ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು?; ವಿ.ಡಿ. ಸತೀಶನ್ ಗೆ ಬೆಂಬಲ ಸೂಚಿಸಿದ ಮುಸ್ಲಿಂ ಲೀಗ್

Picture of Savistara

Savistara

Bureau Report

ತಿರುವನಂತಪುರಂ: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, ಮಿತ್ರಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಈ ವಿಚಾರಕ್ಕೆ ಹೊಸ ತಿರುವು ನೀಡಿದೆ. ವಿಪಕ್ಷ ನಾಯಕ ವಿ.ಡಿ. ಸತೀಶನ್ ಅವರಿಗೆ ಐಯುಎಂಎಲ್ ಪರೋಕ್ಷ ಬೆಂಬಲ ಸೂಚಿಸಿದೆ.ಒಂದು ದಶಕದ ಬಳಿಕ ಯುಡಿಎಫ್ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಮರಳುವ ಸಾಧ್ಯತೆ ಇದೆ ಎಂದು ವಿವಿಧ ಮತದಾನೋತ್ತರ ಸಮೀಕ್ಷೆಗಳು ಸೂಚಿಸಿರುವ ಹಿನ್ನೆಲೆಯ X ಮೈತ್ರಿಕೂಟದೊಳಗಿನ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದಿಂದ ಸತೀಶನ್ ಅವರನ್ನು ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗುರುತಿಸಿವೆ.

ಮಲಪ್ಪುರಂನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಐಯುಎಂಎಲ್‌ ರಾಜ್ಯಾಧ್ಯಕ್ಷ ಸಾದಿಕ್ ಅಲಿ ಶಿಹಾಬ್‌ ತಂಬಳ್‌, “ಮತದಾನೋತ್ತರ ಸಮೀಕ್ಷೆಯ ಫಲಿತಾಂಶಗಳು ಜನರ ಭಾವನೆಗಳನ್ನು ಪ್ರತಿಬಿಂಬಿಸುತ್ತಿವೆ” ಎಂದು ಹೇಳುವ ಮೂಲಕ ಸತೀಶನ್ ಪರ ತಮ್ಮನಿಲುವು ವ್ಯಕ್ತಪಡಿಸಿದರು.”ಮುಖ್ಯಮಂತ್ರಿ ಹುದ್ದೆಯ ಕುರಿತು ಅಂತಿಮ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳಲಿದೆ. ಸಾರ್ವಜನಿಕರ ಅಭಿಪ್ರಾಯವನ್ನೂ ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ನಾವು ನಂಬಿದ್ದೇವೆ. ಸಚಿವ ಸಂಪುಟ ರಚನೆಯ ವೇಳೆ ಐಯುಎಂಎಲ್‌ಗೆ ಸೂಕ್ತ ಪ್ರತಿನಿಧಿತ್ವ ಸಿಗಲಿದೆ ಎಂಬ ವಿಶ್ವಾಸವಿದೆ’ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸ್ಥಾನಕ್ಕಾಗಿ ಸತೀಶನ್ ಜೊತೆಗೆ ಹಿರಿಯ ನಾಯಕರುಗಳಾದ ರಮೇಶ್ ಚೆನ್ನಿತ್ತಲ ಮತ್ತು ಕೆ.ಸಿ. ವೇಣುಗೋಪಾಲ್ ಅವರ ಹೆಸರುಗಳೂ ಮುನ್ನೆಲೆಗೆ ಬಂದಿವೆ. ಈ ಕುರಿತು ಪ್ರತಿಕ್ರಿಯಿಸಿದ ಶಿಹಾಬ್ ತಂಬಳ್, “ಸೂಕ್ತ ಸಮಯದಲ್ಲಿ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ” ಎಂದು ಹೇಳಿದ್ದಾರೆ.ಯುಡಿಎಫ್ ಮೈತ್ರಿಕೂಟದೊಳಗಿನ ವಿವಿಧ ಬಣಗಳು ತಮ್ಮದೇ ನಾಯಕ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ವಿಶ್ವಾಸದಲ್ಲಿವೆ. ಆದರೆ, ಕಳೆದ ಐದು ವರ್ಷಗಳಿಂದ ಮೈತ್ರಿಕೂಟವನ್ನು ಮುನ್ನಡೆಸಿ ಪಿಣರಾಯಿ ವಿಜಯನ್ ವಿರುದ್ಧ ಹೋರಾಟ ನಡೆಸಿದ ಸತೀಶನ್ ಪರ ಸಾರ್ವಜನಿಕ ಒಲವು ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದೇ ವೇಳೆ, ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಹೈಕಮಾಂಡ್ ಪ್ರಭಾವ ಹೆಚ್ಚಿರುವುದರಿಂದ, ಅನೇಕ ಅಭ್ಯರ್ಥಿಗಳು ಕೆ.ಸಿ. ವೇಣುಗೋಪಾಲ್ ಪರ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆಡೆ, ಹಿರಿಯ ನಾಯಕ ಚೆನ್ನಿತ್ತಲ ಕೂಡಾ ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ಸಂಸದರಾಗಿದ್ದ ಚೆನ್ನಿತ್ತಲ ಅವರಿಗೆ ಸೋನಿಯಾ ಗಾಂಧಿ ಅವರೊಂದಿಗೆ ಆತ್ಮೀಯತೆ ಇದೆ ಎಂದು ಕಾಂಗ್ರೆಸ್ ವಲಯಗಳು ಹೇಳುತ್ತಿವೆ.140 ಸದಸ್ಯರ ವಿಧಾನಸಭೆಯಲ್ಲಿ ಯುಡಿಎಫ್‌ ಮೈತ್ರಿಕೂಟ ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿದರೆ, ಮುಖ್ಯಮಂತ್ರಿ ಆಯ್ಕೆಯಲ್ಲಿ ಎರಡನೇ ಅತಿ ದೊಡ್ಡ ಮೈತ್ರಿ ಪಕ್ಷವಾದ ಐಯುಎಂಎಲ್ ನ ಪಾತ್ರ ನಿರ್ಣಾಯಕವಾಗಲಿದೆ ಎಂದು ರಾಜಕೀಯ ವಲಯಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!