ಕಡಬ: ಪ್ರವಾಸಕ್ಕೆ ಬಂದಿದ್ದ ಜನರು – ಮತಾಂತರ, ಅಕ್ರಮ ಚಟುವಟಿಕೆ ಅಲ್ಲವೆಂದು ಪೊಲೀಸರ ಸ್ಪಷ್ಟನೆ

Picture of Savistara

Savistara

Bureau Report

ಕಡಬ ಮೇ 08: ಐತೂರು ಗ್ರಾಮದ ಕೆರ್ಮಾಯಿ ಎಂಬಲ್ಲಿ ಮತಾಂತರ ಮತ್ತು ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಪ್ರಾಥಮಿಕ ತನಿಖೆಯಲ್ಲಿ ಅಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಿಲ್ಲ ಎಂದು ಕಡಬ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮೇ 07ರಂದು ಐತ್ತೂರಿನ ಮನೆಯೊಂದರಲ್ಲಿ ಅತಿ ಹೆಚ್ಚು ಜನ ಸೇರಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಶಂಕೆ ವ್ಯಕ್ತವಾಗಿತ್ತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ವಿಚಾರಣೆ ನಡೆಸಿದಾಗ, ಅಲ್ಲಿ ಒಟ್ಟು ನಾಲ್ಕು ಕುಟುಂಬಗಳಿಗೆ ಸೇರಿದ 23 ಸದಸ್ಯರು (ಪುರುಷರು, ಮಹಿಳೆಯರು ಮತ್ತು ಮಕ್ಕಳು) ಇರುವುದು ಕಂಡುಬಂದಿದೆ.

ಪೊಲೀಸರ ವಿಚಾರಣೆ ವೇಳೆ, ಅಲ್ಲಿ ನೆರೆದಿದ್ದವರೆಲ್ಲರೂ ಬೆಂಗಳೂರು ಮೂಲದವರು ಎಂಬುದು ದೃಢಪಟ್ಟಿದೆ. ಮಂಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಇವರು, ತಮಗೆ ಹಲವು ವರ್ಷಗಳಿಂದ ಪರಿಚಯವಿರುವ ಬೆಂಗಳೂರಿನ ಚರ್ಚ್ ಒಂದರ ಫಾದರ್ ಅವರ ಸಹೋದರನ ಮನೆಯಲ್ಲಿ (ಕಡಬ) ತಂಗಿರುವುದಾಗಿ ತಿಳಿಸಿದ್ದಾರೆ.

ಬಲವಂತದ ಮತಾಂತರದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, “ನಾವು ಕಳೆದ 15-20 ವರ್ಷಗಳಿಂದ ಸ್ವಯಂಪ್ರೇರಿತವಾಗಿ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿದ್ದೇವೆ. ಇಲ್ಲಿ ಯಾವುದೇ ಬಲವಂತದ ಮತಾಂತರವಾಗಲಿ ಅಥವಾ ಅನೈತಿಕ ಚಟುವಟಿಕೆಯಾಗಲಿ ನಡೆಯುತ್ತಿಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ವಿಚಾರಗಳು ಕಂಡುಬಂದಿಲ್ಲ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]
error: Content is protected !!