West Bengal: ವೇದಿಕೆ ಮೇಲೆ ಹೋಗ್ತಿದ್ದಂತೆ ಪಾದ ಮುಟ್ಟಿ ನಮಸ್ಕರಿಸಿದ್ದು ಯಾರಿಗೆ ಮೋದಿ? ಬಿಜೆಪಿ ‘ಹಳೆ ಸಿಂಹ’ ಇವರೇನಾ?

Picture of Savistara

Savistara

Bureau Report

ಪಶ್ಚಿಮ ಬಂಗಾಳದ (West Bengal) ರಾಜಧಾನಿ ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಮೊದಲ ಬಿಜೆಪಿ ಸರ್ಕಾರದ ಪ್ರಮಾಣವಚನ (Oath Ceremony) ಸಮಾರಂಭದಲ್ಲಿ ಒಂದು ವಿಶೇಷ ಕ್ಷಣ ಎಲ್ಲರ ಮನಸೂರೆಗೊಂಡಿತು. ವೇದಿಕೆಗೆ ಬಂದ ಕೂಡಲೇ ಪ್ರಧಾನಿ ನರೇಂದ್ರ ಮೋದಿ, ವೇದಿಕೆಯ ಮೇಲಿದ್ದ ವೃದ್ಧರೊಬ್ಬರ ಬಳಿಗೆ ಹೋಗಿ, ಅವರ ಪಾದಗಳನ್ನು ಮುಟ್ಟಿ, ಅವರನ್ನು ಅಪ್ಪಿಕೊಂಡು ಪ್ರೀತಿಯಿಂದ ಮಾತನಾಡಿದರು. ಈ ದೃಶ್ಯವನ್ನು ನೋಡಿದವರು ಭಾವುಕರಾದರು.

ಮೊದಲಿಗೆ ಎಲ್ಲರಿಗೂ ಇವರಾರು ಎಂಬ ಕುತೂಹಲ, ಆಶ್ಚರ್ಯ ಮನೆಮಾಡಿತ್ತು. ನಂತರ ತಿಳಿದುಬಂದದ್ದು, ಇವರೇ 98 ವರ್ಷದ ಮಖನ್ಲಾಲ್ ಸರ್ಕಾರ್. ಮಖನ್ಲಾಲ್ ಸರ್ಕಾರ್ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು.

ವೇದಿಕೆ ಮೇಲೆ ಹೋಗ್ತಿದ್ದಂತೆ ಪಾದ ಮುಟ್ಟಿ ನಮಸ್ಕರಿಸಿದ ನಮೋ!

ಮಖನ್ಲಾಲ್ ಸರ್ಕಾರ್ ಸಾಮಾನ್ಯ ವ್ಯಕ್ತಿಯಲ್ಲ. ಅವರು ಪಶ್ಚಿಮ ಬಂಗಾಳದ ಬಿಜೆಪಿ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಸ್ವಾತಂತ್ರ್ಯಾನಂತರ ಭಾರತದ ರಾಜಕೀಯದಲ್ಲಿ, ವಿಶೇಷವಾಗಿ ರಾಷ್ಟ್ರಪ್ರೇಮ ಮತ್ತು ರಾಷ್ಟ್ರೀಯತೆಯ ಚಳುವಳಿಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಲಾಲ್ ಚೌಕ್‌ನಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಸೇರಿ ತ್ರಿವರ್ಣ ಧ್ವಜವನ್ನು ಹಾರಿಸಿದ ಐತಿಹಾಸಿಕ ವ್ಯಕ್ತಿಗಳಲ್ಲಿ ಮಖನ್ಲಾಲ್ ಸರ್ಕಾರ್ ಒಬ್ಬರು. ರಾಷ್ಟ್ರಧ್ವಜವನ್ನು ಅಲ್ಲಿ ಹಾರಿಸುವುದು ಆ ಕಾಲದಲ್ಲಿ ದೊಡ್ಡ ಧೈರ್ಯದ ಕೆಲಸವಾಗಿತ್ತು.

1952 ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಮಖನ್ಲಾಲ್ ಸರ್ಕಾರ್ ಬಂಧಿತರಾದರು. ದೇಶದ ಏಕತೆ, ಸಂವಿಧಾನ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ಅವರು ಹಲವಾರು ಬಾರಿ ಹೋರಾಟಕ್ಕೆ ಇಳಿದಿದ್ದರು. ಸ್ವತಂತ್ರ ಭಾರತದ ರಾಜಕೀಯದಲ್ಲಿ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಬಲ ಹೆಚ್ಚಾಗಿದ್ದ ಸಮಯದಲ್ಲೂ ಮಖನ್ಲಾಲ್ ಸರ್ಕಾರ್ ಭಾರತೀಯ ಜನಸಂಘ ಮತ್ತು ನಂತರದ ಬಿಜೆಪಿ ಪಕ್ಷದ ಪರವಾಗಿ ನೆಲಮಟ್ಟದಲ್ಲಿ ಕೆಲಸ ಮಾಡುತ್ತಲೇ ಇದ್ದರು.

ಬಿಜೆಪಿಯ ಹಳೆಯ ಸಿಂಹ ಮಖನ್ಲಾಲ್ ಸರ್ಕಾರ್

ಎಡಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬೆಳವಣಿಗೆ ತಡೆಯಲು ಬಹಳ ಪ್ರಯತ್ನಿಸಿದರೂ, ಮಖನ್ಲಾಲ್ ಸರ್ಕಾರ್ ಹಿಂಜರಿಯದೆ ಪಕ್ಷದ ಆಲೋಚನೆ, ಆಶಯಗಳನ್ನು ಜನರಿಗೆ ತಲುಪಿಸುತ್ತಿದ್ದರು. 1980 ರಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷ ಸ್ಥಾಪನೆಯಾದಾಗ, ಅವರನ್ನು ಪಶ್ಚಿಮ ದಿನಾಜ್‌ಪುರ ಜಿಲ್ಲೆಯ ಸಂಯೋಜಕರನ್ನಾಗಿ ನೇಮಿಸಲಾಯಿತು. ಈ ಹುದ್ದೆಯಲ್ಲಿ ಅವರು ಅಲ್ಪ ಸಮಯದಲ್ಲೇ ದೊಡ್ಡ ಕೆಲಸ ಮಾಡಿದರು. ಒಂದು ವರ್ಷದೊಳಗೆ ಡಾರ್ಜಿಲಿಂಗ್ ಪ್ರದೇಶದಲ್ಲಿ ಸುಮಾರು 10,000 ಜನರನ್ನು ಬಿಜೆಪಿ ಪಕ್ಷಕ್ಕೆ ಸಂಪರ್ಕಿಸಿದ ಸಾಧನೆ ಅವರದು. ಇದು ಆ ಕಾಲದ ರಾಜಕೀಯ ಪರಿಸ್ಥಿತಿಯಲ್ಲಿ ಮಹತ್ವದ ಬೆಳವಣಿಗೆ.

1981 ರಿಂದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಮಖನ್ಲಾಲ್ ಸರ್ಕಾರ್

 1981 ರಿಂದ ಮಖನ್ಲಾಲ್ ಸರ್ಕಾರ್ ಬಿಜೆಪಿ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ಜಿಲ್ಲಾ ಅಧ್ಯಕ್ಷ ಸೇರಿದಂತೆ ಅನೇಕ ಸಂಘಟನಾತ್ಮಕ ಜವಾಬ್ದಾರಿಗಳನ್ನು ಹೊತ್ತು ಪಕ್ಷದ ನೆಲಮಟ್ಟದ ಸಂಘಟನೆ ಬಲಪಡಿಸಿದರು. ಹಿರಿಯ ಕಾರ್ಯಕರ್ತ, ಸಂಘಟಕ, ಹೋರಾಟಗಾರ ಎಂಬ ಹೆಸರನ್ನು ಅವರು ತಮ್ಮ ಪರಿಶ್ರಮದಿಂದ ಗಳಿಸಿದರು. ಇಂತಹ ಹಿನ್ನಲೆ ಹೊಂದಿದ ಮಖನ್ಲಾಲ್ ಸರ್ಕಾರ್‌ರನ್ನು ಪ್ರಧಾನ ಮಂತ್ರಿ ಮೋದಿ ವೇದಿಕೆಯ ಮೇಲೆ ಗೌರವಿಸುವುದು, ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯುವುದು, ಅಲ್ಲಿದ್ದ ಎಲ್ಲರಿಗೂ ಭಾವನಾತ್ಮಕ ಕ್ಷಣವಾಯಿತು. ಅನೇಕರಿಗೆ ಮೊದಲಿಗೆ ಅವರು ಯಾರು ಎಂಬುದು ತಿಳಿದಿರಲಿಲ್ಲ. ಆದರೆ ಪ್ರಧಾನಿ ಅವರು ಶಾಲು ಹೊದಿಸಿ, ಗೌರವಪೂರ್ವಕವಾಗಿ ಅವರೊಂದಿಗೆ ದೀರ್ಘವಾಗಿ ಮಾತನಾಡುತ್ತಿರುವುದನ್ನು ಕಂಡು ಎಲ್ಲರಿಗೂ ಅವರ ಮಹತ್ವ ಅರ್ಥವಾಯಿತು.

ಈ ಕ್ಷಣವು ಕೇವಲ ಒಬ್ಬ ಹಿರಿಯ ಕಾರ್ಯಕರ್ತನಿಗೆ ನೀಡಿದ ಗೌರವವಲ್ಲ, ಪಕ್ಷದ ಪ್ರಾರಂಭಿಕ ದಿನಗಳಲ್ಲಿ ತ್ಯಾಗ, ಕಷ್ಟ, ಹೋರಾಟ ಮಾಡಿದ ಅನೇಕರಿಗೆ ನೀಡಿದ ಪ್ರತೀಕಾತ್ಮಕ ಸನ್ಮಾನವೂ ಆಗಿದೆ. ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಬಿಜೆಪಿ ಪಕ್ಷದ ಬೇರುಗಳನ್ನು ಬಿತ್ತಿದವರಲ್ಲಿ ಮಖನ್ಲಾಲ್ ಸರ್ಕಾರ್ ಅವರ ಹೆಸರು ಸ್ಮರಣೀಯವಾಗಿದ್ದು, ಇಂದು ಅವರು ಪಡೆದ ಗೌರವವು ಹೊಸ ಪೀಳಿಗೆಗೆ ಹಳೆಯ ಹೋರಾಟಗಾರರ ಬಗ್ಗೆ ಗೌರವ, ಪ್ರೇರಣೆ ಮತ್ತು ಕೃತಜ್ಞತೆಯ ಭಾವನೆ ಮೂಡಿಸುವಂತಿದೆ.

[t4b-ticker]
error: Content is protected !!