ವಾಷಿಂಗ್ಟನ್: ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸುವಸಂಬಂಧ ಮಾತುಕತೆ ನಡೆಯುತ್ತಿರುವುದರಿಂದ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಂದ ಯಾವುದೇ ಶುಲ್ಕ ಸಂಗ್ರಹಿಸುವುದಿಲ್ಲ ಎಂದು ಇರಾನ್ ಭರವಸೆ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಿಳಿಸಿದ್ದಾರೆ.
‘ಇರಾನ್ ಯಾವುದೇ ಶುಲ್ಕ, ವಿಮಾ ವೆಚ್ಚವನ್ನು ಸ್ವೀಕರಿಸಿಲ್ಲ’ ಎಂದು ಟ್ರಂಪ್ ಅವರು ತಮ್ಮ ‘ಟೂಥ್’ನಲ್ಲಿ ಪೋಸ್ಟ್ ಮಾಡಿದ್ದಾರೆ.60 ದಿನಗಳ ಮಾತುಕತೆ ಅವಧಿಯ ನಂತರವೂ ಆ ಭರವಸೆಯು ಚಾಲ್ತಿಯಲ್ಲಿ ಇರುತ್ತದೆಯೇ ಎಂಬ ಬಗ್ಗೆ ಅವರು ಸ್ಪಷ್ಟಪಡಿಸಿಲ್ಲ.ಜಲಸಂಧಿಯನ್ನು ದಾಟಲು ಹಡಗುಗಳಿಗೆ ಶುಲ್ಕದ ಬದಲಾಗಿ ಸಮುದ್ರ ಸೇವಾ ಶುಲ್ಕ ವಿಧಿಸಲು ಇರಾನ್ ಯೋಜಿಸುತ್ತಿದೆ. ಇದನ್ನು ಅಮೆರಿಕ ತೀವ್ರವಾಗಿ ವಿರೋಧಿಸಿದೆ.
ಹೊರ್ಮುಜ್ ಜಲಸಂಧಿಯಲ್ಲಿ ಒದಗಿಸುವ ಸೇವೆಗಳಿಗೆ ಶುಲ್ಕ ವಿಧಿಸುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಇರಾನ್ ಮತ್ತು ಒಮಾನ್ ಮಂಗಳವಾರ ಹೇಳಿದ್ದವು. ‘ಜಲಮಾರ್ಗದ ಮೇಲೆ ತಾವು ಸಾರ್ವಭೌಮತ್ವವನ್ನು ಹೊಂದಿದ್ದೇವೆ’ ಎಂದೂ ಈಗ ಹೇಳಿವೆ.ಒಮಾನ್‌ಗೆ ಕತಾರ್ ಪ್ರಧಾನಿ: ಹೊರ್ಮುಜ್ ಜಲಸಂಧಿಯ ಕಾರ್ಯಾಚರಣೆ ಕುರಿತು ಕೊಲ್ಲಿ ರಾಷ್ಟ್ರಗಳು, ಇರಾಕ್ ಮತ್ತು ಇರಾನ್ ನಡುವೆ ಮಾತುಕತೆ ನಡೆಸುವ ಸಂಬಂಧ ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಅಲ್ ಥನಿ ಅವರು ಒಮಾನ್‌ಗೆ ಬುಧವಾರ ಪ್ರಯಾಣ ಬೆಳೆಸಿದ್ದಾರೆ ಎಂದು ರಾಜತಾಂತ್ರಿಕ ಅಧಿಕಾರಿ ತಿಳಿಸಿದ್ದಾರೆ.
ಹಡಗುಗಳ ಪ್ರಯಾಣಕ್ಕೆ ಅನುವು ಲಂಡನ್ : ಪಶ್ಚಿಮ ಏಷ್ಯಾಸಂಘರ್ಷದಿಂದ ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿದ್ದ ಹಡಗುಗಳು ಪ್ರಯಾಣಿಸಲು ಅನುವು ಮಾಡಿಕೊಡಲಾಗಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಸಮುದ್ರಯಾನ ಸಂಘಟನೆಯು (ಐಎಂಒ) ಬುಧವಾರ ತಿಳಿಸಿದೆ. ‘ಸುಮಾರು 11 ಸಾವಿರ ನಾವಿಕರನ್ನು ಹೊಂದಿರುವ ನೂರಾರು ಹಡಗುಗಳು ಜಲಸಂಧಿಯಲ್ಲಿ ಸಿಲುಕಿದ್ದವು. ಇವುಗಳನ್ನು ಸ್ಥಳಾಂತರಿಸಲು ಹೊಸ ಯೋಜನೆಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಹಡಗುಗಳು ಈಗಾಗಲೇ ಹೊರ್ಮುಜ್ ಜಲಸಂಧಿ ಮೂಲಕ ಹಾದುಹೋಗಲು ಪ್ರಾರಂಭಿಸಿವೆ’ ಎಂದು ಐಎಂಒ ವಕ್ತಾರರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಎರಡು ಖಾಲಿ ಹಡಗು ಹಾಗೂ ಒಂದು ಸರಕು ಸಾಗಣೆ ಹಡಗುಗಳು ಸಾಗಿವೆ. 35 ವಾಣಿಜ್ಯ ಹಡಗುಗಳು ಜಲಸಂಧಿಯ ಮೂಲಕ ಸಾಗಲು ತಯಾರಿ ನಡೆಸಿವೆ.










































