ನವದೆಹಲಿ: ಅಯೋಧ್ಯೆಯ ರಾಮಮಂದಿರದ ದೇಣಿಗೆದುರುಪಯೋಗದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ದಳದ (ಎಸ್‌ಐಟಿ) ಪ್ರಾಥಮಿಕ ವರದಿಯ ಶಿಫಾರಸಿನ ಮೇರೆಗೆ ಹೆಸರಿಸಲಾದ ಎಂಟು ಮಂದಿ ಆರೋಪಿಗಳು ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಕೃಷ್ಣ ಮೋಹನ್ ಅವರ ದೂರಿನ ಮೇರೆಗೆ ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಎಸ್‌ಐಟಿಯ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ದೇವಾಲಯದ ಟ್ರಸ್ಟ್ ಕ್ರಮ ಕೈಗೊಳ್ಳುವಂತೆ ಕೋರಿದ ನಂತರ ಈ ಪ್ರಕರಣ ದಾಖಲಾಗಿದೆ.’ರಮಾಶಂಕರ್ ಯಾದವ್ ಅಲಿಯಾಸ್ ಟಿನ್ನು, ಅವಿನಾಶ್ ಶುಕ್ಲಾ, ಅನುಕಲ್ಸ್ ಮಿಶ್ರಾ, ಮನೀಶ್ ಯಾದವ್, ರಮಾಶಂಕರ್ ಮಿಶ್ರಾ, ಸುಭಾಷ್ ಮತ್ತು ಕರುಣೇಶ್ ಅವರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಲಾಗಿದೆ. ಮತ್ತೊಬ್ಬ ಆರೋಪಿಯ ಹೆಸರು ಇನ್ನಷ್ಟೇ ತಿಳಿಯಬೇಕಿದೆ.ಉತ್ತರ ಪ್ರದೇಶ ಸರ್ಕಾರದ ನಿರ್ದೇಶನದ ಮೇರೆಗೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 306, 316(5), 317(4), 317(5), 61 ಮತ್ತು 3(5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದೇಣಿಗೆ ಕಳ್ಳತನದ ಆರೋಪದ ಪ್ರಕರಣದ ಪ್ರಾಥಮಿಕ ವರದಿಯಲ್ಲಿ ಎಫ್‌ಐಆರ್ ದಾಖಲಿಸಲು ಎಸ್‌ಐಟಿ ಶಿಫಾರಸು ಮಾಡಿತ್ತು. ಎಸ್‌ಐಟಿ ಶಿಫಾರಸಿನ ಮೇರೆಗೆ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಿದ್ದರು.ರಾಮಮಂದಿರಕ್ಕೆ ಬಂದ ದೇಣಿಗೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿನಂತಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ಜೂನ್ 13ರಂದು ಎಸ್‌ಐಟಿಯನ್ನು ರಚಿಸಿತ್ತು.ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ದೇವಾಲಯಕ್ಕೆ ಬಂದ ಕೋಟ್ಯಂತರ ರೂಪಾಯಿ ದೇಣಿಗೆ ನಾಪತ್ತೆಯಾಗಿದೆ ಎಂದು ಆರೋಪಿಸುವ ವರದಿಗಳನ್ನು ಉಲ್ಲೇಖಿಸಿ, ನ್ಯಾಯಾಲಯಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ ನಂತರ ಈ ವಿವಾದವು ರಾಜಕೀಯ ಗಮನ ಸೆಳೆದಿತ್ತು.










































