ನವದೆಹಲಿ: ನೀವು ಹೊಸದಾಗಿ ಪಾಸ್‌ಪೋರ್ಟ್ ಅರ್ಜಿಯನ್ನುಸಲ್ಲಿಸಲು ಯೋಜಿಸುತ್ತಿದ್ದರೆ ಜುಲೈ 1 ರ ಒಳಗಾಗಿ ಅರ್ಜಿ ಸಲ್ಲಿಸಿ ಇಲ್ಲವಾದರೆ ಹೆಚ್ಚಿನ ಶುಲ್ಕ ಭರಿಸಬೇಕಾಗುತ್ತದೆ. ಯಾಕೆಂದರೆ ಜುಲೈ 1 ರಿಂದ ಅನ್ವಯವಾಗುವಂತೆ ಪಾಸ್‌ಪೋರ್ಟ್ ಅರ್ಜಿ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದ್ದು.
ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳು, 2026ರ ಅಡಿಯಲ್ಲಿ ಹೊಸ ಪಾಸ್‌ಪೋರ್ಟ್, ತತ್ಕಾಲ್ ಅರ್ಜಿಗಳು ಸೇರಿದಂತೆ ವಿವಿಧ ಸೇವೆಗಳ ದರವನ್ನು ಪರಿಷ್ಕರಿಸಿ ಕೇಂದ್ರ ವಿದೇಶಾಂಗ ಸಚಿವಾಲಯ (MEA) ಗುರುವಾರ (ಜೂ.25) ಅಧಿಸೂಚನೆ ಹೊರಡಿಸಿದೆ.ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ ಪರಿಷ್ಕೃತಗೊಂಡಿರುವ ಹೊಸ ದರಗಳ ವಿವರ ಇಲ್ಲಿದೆ:
ಸಾಮಾನ್ಯ 36 ಪುಟಗಳ ಪಾಸ್‌ಪೋರ್ಟ್ (18 ವರ್ಷ ಮೇಲ್ಪಟ್ಟವರಿಗೆ):
ಸಾಮಾನ್ಯ ಪ್ರಕ್ರಿಯೆ: ರೂ. 2,500
ತತ್ಕಾಲ್ ಯೋಜನೆ: ರೂ. 5,000
60 ಪುಟಗಳ ಜಂಬೋ ಪಾಸ್‌ಪೋರ್ಟ್ (ಹೆಚ್ಚು ವಿದೇಶ ಪ್ರಯಾಣ ಮಾಡುವವರಿಗೆ):
ಸಾಮಾನ್ಯ ಪ್ರಕ್ರಿಯೆ: ರೂ. 3,500
ತತ್ಕಾಲ್ ಯೋಜನೆ: ರೂ. 6,000
ಮೈನರ್ಸ್ (18 ವರ್ಷದೊಳಗಿನ ಮಕ್ಕಳಿಗೆ) 36 ಪುಟಗಳ ಪಾಸ್‌ಪೋರ್ಟ್:
ಸಾಮಾನ್ಯ ಪ್ರಕ್ರಿಯೆ: ರೂ. 1,750
ತತ್ಕಾಲ್ ಯೋಜನೆ: ರೂ. 4,250
ಪಾಸ್‌ಪೋರ್ಟ್ ಕಳೆದುಹೋದರೆ ಅಥವಾ ಹಾನಿಯಾದರೆ:
ಒಂದು ವೇಳೆ ನಿಮ್ಮ ಪಾಸ್‌ಪೋರ್ಟ್ ಕಳೆದುಹೋದರೆ ಅಥವಾ ಹಾನಿಗೊಳಗಾಗಿ ಹೊಸದಕ್ಕೆ ಅರ್ಜಿ ಸಲ್ಲಿಸಿದರೆ ಇದರ ಪರಿಷ್ಕೃತ ದರ:
36 ಪುಟಗಳ ಬದಲೀ ಪಾಸ್‌ಪೋರ್ಟ್: ಸಾಮಾನ್ಯ ವಿಭಾಗದಲ್ಲಿ ರೂ. 5,000 ಹಾಗೂ ತತ್ಕಾಲ್‌ನಲ್ಲಿ ರೂ.7,500.
60 ಪುಟಗಳ ಬದಲೀ ಪಾಸ್‌ಪೋರ್ಟ್: ಸಾಮಾನ್ಯ ವಿಭಾಗದಲ್ಲಿ ರೂ. 6,000 ಹಾಗೂ ತತ್ಕಾಲ್‌ನಲ್ಲಿ ರೂ. 8,500.
ಮಕ್ಕಳ ಪಾಸ್‌ಪೋರ್ಟ್ ಬದಲಾವಣೆ: ಸಾಮಾನ್ಯ ವಿಭಾಗದಲ್ಲಿ ರೂ. 4,250 ಹಾಗೂ ತತ್ಕಾಲ್‌ನಲ್ಲಿ ರೂ. 6,750.
ಇತರ ಸೇವೆಗಳ ಶುಲ್ಕದಲ್ಲೂ ಹೆಚ್ಚಳ:
ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC), ಸರೆಂಡರ್ ಸರ್ಟಿಫಿಕೇಟ್:
ಭಾರತದಲ್ಲಿ ರೂ. 750 ಮತ್ತು ವಿದೇಶಗಳಲ್ಲಿ 40 ಯುಎಸ್ ಡಾಲರ್.
ತುರ್ತು ಪ್ರಮಾಣಪತ್ರ :ವಿದೇಶಗಳಲ್ಲಿ 15 ಯುಎಸ್ ಡಾಲರ್.
ಗುರುತಿನ ಪ್ರಮಾಣಪತ್ರ (ಗುರುತಿನ ಪ್ರಮಾಣಪತ್ರ):ಭಾರತದಲ್ಲಿ ರೂ. 1,000 ಮತ್ತು ವಿದೇಶಗಳಲ್ಲಿ 50 ಯುಎಸ್ ಡಾಲರ್.
ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ:
ಇತ್ತೀಚೆಗಷ್ಟೇ ನಡೆದ ‘ಪಾಸ್‌ಪೋರ್ಟ್ ಸೇವಾ ದಿವಸ್’ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವಾಲಯವು ಪ್ರಮುಖ ಸ್ಪಷ್ಟನೆಯೊಂದನ್ನು ನೀಡಿದೆ. ಪಾಸ್‌ಪೋರ್ಟ್ ಎಂಬುದು ಕೇವಲ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಬಳಸುವ ಪ್ರಯಾಣದ ದಾಖಲೆ (Travel Document) ಮಾತ್ರ. ಇದು ಭಾರತದ ಪೌರತ್ವವನ್ನು ಸಾಬೀತುಪಡಿಸುವ ಸ್ವತಂತ್ರ ಪ್ರಮಾಣಪತ್ರವಲ್ಲ ಎಂದು ಸಚಿವಾಲಯ ನೆನಪಿಸಿದೆ. ಉನ್ನತ ಮಟ್ಟದ ಪರಿಶೀಲನೆಗಳ ನಂತರವೇ ಇದನ್ನು ನೀಡಲಾಗುತ್ತದೆಯಾದರೂ, ಇದರ ಮುಖ್ಯ ಕಾನೂನು ಉದ್ದೇಶ ವಿದೇಶಗಳಲ್ಲಿ ಭಾರತೀಯ ರಾಷ್ಟ್ರೀಯತೆಯನ್ನು ದೃಢೀಕರಿಸುವುದಷ್ಟೇ ಆಗಿದೆ.ಈ ಎಲ್ಲಾ ಪರಿಷ್ಕೃತ ಶುಲ್ಕ ನಿಯಮಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.










































