ಮಂಗಳೂರು: ನಾಗರಪಂಚಮಿ ಎನ್ನುವುದು ಪರಿಸರಕ್ಕೆ ತೀರಾಹತ್ತಿರವಾದ ಆಚರಣೆ, ನಾಗನ ಪೂಜೆ ಎಂದರೆ ಕಾಡಿನ ಪರಿಸರ ಅಥವಾ ಮರಗಳೇ ಹೆಚ್ಚಿರುವ ಬನದಲ್ಲಿ ಆಗುವ ಕಟ್ಟುಕಟ್ಟಳೆ. ನಿಸರ್ಗದಲ್ಲಿ ಆಗುವ ಆಚರಣೆ ನಿಸರ್ಗಕ್ಕೆ ಪೂರಕವಾಗಿದ್ದರೆ ಚೆನ್ನ ಎಂದು ಅನೇಕರಿಗೆ ಅನ್ನಿಸಿರಬಹುದು. ನಾಗರ ಪಂಚಮಿಯಂದು ಬೇಕಾಬಿಟ್ಟಿ ಪ್ಲಾಸ್ಟಿಕ್‌ನಲ್ಲಿ ಹೂವು ಹಣ್ಣು, ಸೀಯಾಳ ತಂದು ನಾಗಬನದಲ್ಲಿ ಎಸೆಯುವುದು, ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹಾಲು ತಂದು ತನಿ ಎರೆಯುವುದು ಪರಿಸರಕ್ಕೆ ಪೂರಕವಲ್ಲ. ಇಂತಹ ವಿಚಾರಗಳ ಬಗ್ಗೆ ನಗರದಲ್ಲಿ ಅಭಿಯಾನವನ್ನು ಸಂಘಟನೆಯೊಂದು ನಡೆಸುತ್ತಿದೆ.ಅಂಬಾಮಹೇಶ್ವರಿ ಟ್ರಸ್ಟ್ ತನ್ನ ಅವೇಕ್ ಕುಡ್ಲ ಎನ್ನುವ ಪರಿಕಲ್ಪನೆಯಡಿ “ಪ್ಲಾಸ್ಟಿಕ್ ಮುಕ್ತ ನಾಗರಪಂಚಮಿ” ಅಭಿಯಾನ ಹಮ್ಮಿಕೊಂಡಿದೆ.ಯಾವ ರೀತಿಯಲ್ಲಿ ನಮ್ಮ ಹಬ್ಬಗಳಲ್ಲಿ ಪ್ಲಾಸ್ಟಿಕ್ ಅನ್ನು ನಿಷೇಧಿಸಬಹುದು ಅಥವಾ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಬಹುದು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತಹ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಿದ್ದೇವೆ. ನಾಗರಪಂಚಮಿಯಿಂದ ಸಾಲು-ಸಾಲಾಗಿ ಹಬ್ಬಗಳು ಪ್ರಾರಂಭವಾಗುವುದರಿಂದ ಇಲ್ಲಿಂದಲೇ “ಪ್ಲಾಸ್ಟಿಕ್ ಮುಕ್ತ ಅಭಿಯಾನ”ವನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಜನರಿಗೆ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ ಎಂದು ಸ್ವಯಂಸೇವಕ ಸಂಚಾಲಕ ಪುನೀತ್ ತಿಳಿಸುತ್ತಾರೆ.
ನಾಗಾರಾಧನೆ ಸೇರಿದಂತೆ ಹೆಚ್ಚಿನ ಹಬ್ಬಗಳು ಪ್ರಕೃತಿಯ ಆರಾಧನೆಗಳೇ ಆಗಿವೆ. ಇಂತಹ ಆಚರಣೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರಿಂದ ಒಂದರ್ಥದಲ್ಲಿ ನಾವು ಪ್ರಕೃತಿಯ ಸೇವೆ ಮಾಡಿದಂತೆಯೇ. ನಾಗರಪಂಚಮಿಯ ವಿಷಯಕ್ಕೆ ಬಂದರೆ, ನಾಗ ದೇವರನ್ನು ನಾವು ಅತ್ಯಂತ ಶುದ್ಧಾಚಾರದಿಂದ ಪೂಜಿಸುತ್ತಿದ್ದು, ದೇವರಿಗೆ ಅರ್ಪಿಸುವ ಹಾಲನ್ನು ನಾವು ಕೊಂಡೊಯ್ಯುವುದು ಯಾವತ್ತೋ ಯಾವಾಗಲೂ ಉಪಯೋಗಿಸಿದ “ಪ್ಲಾಸ್ಟಿಕ್ ಬಾಟಲಿ”ಯನ್ನು. ಅದರ ಬದಲಾಗಿ ದೇವರ ಕಾರ್ಯಕ್ಕೆಂದೇ ಒಂದು ಸಣ್ಣ “ಸ್ಟೀಲ್ ಪಾತ್ರೆ”ಯನ್ನು ಉಪಯೋಗಿಸುವುದರಿಂದ ಶುದ್ಧತೆಯೊಂದಿಗೆ ಒಂದೇ ಪಾತ್ರೆಯನ್ನು ಹಲವು ಬಾರಿ ಉಪಯೋಗಿಸಲೂಬಹುದು.ದೇವರ ಪೂಜೆಗೆ ಬೇಕಾಗುವ ಸಾಮಗ್ರಿಗಳು ಹಾಗೂ ದೇವರ ಪ್ರಸಾದವನ್ನು ಕೊಂಡು ಹೋಗಲು “ಪ್ಲಾಸ್ಟಿಕ್ ಬದಲಾಗಿ, ಬಟ್ಟೆ ಚೀಲವನ್ನು ಬಳಸುವುದರಿಂದ ಅದನ್ನು ಕೂಡ ಹಲವು ಬಾರಿ ಮರುಬಳಕೆ ಮಾಡುವುದೂ ಸೇರಿದಂತೆ ಪ್ಲಾಸ್ಟಿಕ್ ಬಳಕೆಯೂ ಕಡಿಮೆಯಾಗುತ್ತದೆ. ಕುಟುಂಬದ (ಮನೆತನ) ನಾಗಬನಗಳು ಸೇರಿದಂತೆ ಎಲ್ಲ ನಾಗಬನಗಳ ಆಡಳಿತ ಮಂಡಳಿಯವರು ತಮ್ಮ ಕುಟುಂಬಸ್ಥರಲ್ಲಿ ಹಾಗೂ ಭಕ್ತರಲ್ಲಿ ಈ ಬಗ್ಗೆ ತಿಳಿವಳಿಕೆ ಮೂಡಿಸುವಂತೆ ಟ್ರಸ್ಟ್ ಸ್ವಯಂಸೇವಕರು ಈಗಾಗಲೇ ಮನೆ ಮನೆಗಳಿಗೆ ತೆರಳಿ ಜಾಗೃತಿ ಹುಟ್ಟುಹಾಕುತ್ತಿದ್ದಾರೆ. ಜೊತೆಗೆ ಟ್ರಸ್ಟ್ ವತಿಯಿಂದ ಜಪ್ಪು, ಮಂಗಳಾದೇವಿ, ಬೋಳಾರ, ಪಾಂಡೇಶ್ವರ, ಅತ್ತಾವರ ಸೇರಿದಂತೆ ಕೆಲವು ಸ್ಥಳೀಯ ಪ್ರದೇಶಗಳ ನಾಗಬನಗಳಿಗೆ ಖುದ್ದಾಗಿ ಭೇಟಿ ನೀಡಿ ಸಾಂಕೇತಿಕವಾಗಿ “ಬಟ್ಟೆ ಚೀಲಗಳನ್ನು” ವಿತರಿಸಿ ಈ ಬಗ್ಗೆ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ.
3 ವಾರ್ಡ್‌ಗಳಲ್ಲಿ ಜಾಗೃತಿ
ಜನರು ಪ್ಲಾಸ್ಟಿಕ್ ಚೀಲಗಳನ್ನು ತಂದರೆ ನೂರಾರು ಬನಗಳಲ್ಲಿ ಎಷ್ಟು ಪ್ಲಾಸ್ಟಿಕ್ ಸೃಷ್ಟಿಸಿದಂತಾಗುತ್ತದೆ, ಇದರ ಬದಲು ಜನರು ಸ್ಟೀಲ್ ಪಾತ್ರೆಯಲ್ಲಿ, ಬಟ್ಟೆ ಚೀಲದಲ್ಲಿ ನಾಗರ ಪಂಚಮಿ ಸಾಮಗ್ರಿಗಳನ್ನು ತರುವುದು ಪರಿಸರಕ್ಕೆ ಪೂರಕ ಎನ್ನುವ ನಿಟ್ಟಿನಲ್ಲಿ ಜಾಗೃತಿ ಕಾರ್ಯ ಹಮ್ಮಿಕೊಂಡಿದ್ದೇವೆ. ನಮ್ಮ ಮೂರು ವಾರ್ಡ್ ವ್ಯಾಪ್ತಿಯ ಸುಮಾರು 35 ನಾಗಬನ ಮಾತ್ರವಲ್ಲದೆ, ಹೊರಗಿನ ವಾರ್ಡ್‌ಗಳಲ್ಲೂ ಸಾಧ್ಯವಾದಷ್ಟು ಅರಿವು ಮೂಡಿಸಲು ನಮ್ಮ ತಂಡ ಮುಂದಾಗಿದೆ.
–ಉಮಾನಾಥ ಕೋಟೆಕಾರ್, ಅಂಬಾಮಹೇಶ್ವರಿ ಟ್ರಸ್ಟ್











































