ಮಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸಹಾಯಧನ ಪಡೆಯುತ್ತಿರುವ ರೈತರಿಗೆ ಕೇಂದ್ರ ಸರ್ಕಾರವು ಪ್ರಮುಖ ಮಾಹಿತಿಯೊಂದನ್ನು ನೀಡಿದೆ.ಯೋಜನೆಯ ನಿಯಮಾನುಸಾರ, ರೈತರು ಪ್ರತಿ ವರ್ಷ ಕಡ್ಡಾಯವಾಗಿ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಯೋಜನೆಯಡಿ ಅರ್ಹ ರೈತರ ಬ್ಯಾಂಕ್ ಖಾತೆಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ. ನಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ರೂ. ಸಹಾಯಧನ ನೇರವಾಗಿ ಜಮೆ ಆಗುತ್ತದೆ.
ಆದರೆ, ಮುಂದಿನ ಕಂತಿನ ಹಣ ಪಡೆಯಲು ಇ-ಕೆವೈಸಿ ಪ್ರಕ್ರಿಯೆಯನ್ನು ತಪ್ಪದೆ ಪೂರ್ಣಗೊಳಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.ಇ-ಕೆವೈಸಿ ಪೂರ್ಣಗೊಳಿಸಲು ಎರಡು ಸರಳ ವಿಧಾನಗಳು: ಬಯೋಮೆಟ್ರಿಕ್ ಇ-ಕೆವೈಸಿ: ರೈತರು ತಮ್ಮ ಹತ್ತಿರದ ಗ್ರಾಹಕ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆಯನ್ನು ಒದಗಿಸಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಮುಖ ಗುರುತಿಸುವಿಕೆ ಇ-ಕೆವೈಸಿ:’ವಿ.ಎನ್.ಒ. ಆಪ್’ (VNO App) ಬಳಸಿ ಮುಖ ಗುರುತಿಸುವಿಕೆ ಆಧಾರಿತ ಇ-ಕೆವೈಸಿಯನ್ನು ಸ್ವತಃ ಮಾಡಿಕೊಳ್ಳಬಹುದು.ಒಂದುವೇಳೆ ಮೊಬೈಲ್ ಆಪ್ ಮೂಲಕ ಇ-ಕೆವೈಸಿ ಮಾಡಲು ತೊಂದರೆಯಾದಲ್ಲಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ನೆರವು ಪಡೆಯಬಹುದು.
















































