ಪ್ರೆಸ್ ಕ್ಲಬ್ ನ ಮುಂದೆಯೇ ಕಾಂಗ್ರೆಸ್ ಗೂಂಡಾಗಿರಿ: ‘ಕಿಸೆಯಲ್ಲಿ ಸಂವಿಧಾನ, ಕೃತ್ಯದಲ್ಲಿ ಸರ್ವಾಧಿಕಾರ ಇದುವೇ ಕಾಂಗ್ರೆಸ್ ಸಂಸ್ಕೃತಿ – ಎಂಎಲ್ಸಿ ಕಿಶೋ‌ರ್ ಕುಮಾರ್ ಪುತ್ತೂರು ಕಿಡಿ

Picture of Savistara

Savistara

Bureau Report

ಪುತ್ತೂರು: ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಇರುವ ‘ವಾಕ್ ಸ್ವಾತಂತ್ರ್ಯ’ವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪುತ್ತೂರು ಪತ್ರಿಕಾ ಭವನದ ಎದುರೇ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ನಡೆಸಿರುವ ಘಟನೆಯನ್ನು ಉಡುಪಿ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್‌ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಅವರು ಅತ್ಯುಗ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಮಾತನಾಡಿದ ಕಿಶೋರ್ ಅವರು, ಶಾಸಕ ಅಶೋಕ್‌ ಕುಮಾ‌ರ್ ರೈ ಅವರ ಬೆಂಬಲಿಗರ ರೌಡಿಸಂ ಹಾಗೂ ರಾಜ್ಯದಲ್ಲಿ ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಟೀಕಿಸಿದವರ ಮೇಲೆ ಹಲ್ಲೆ ಮಾಡುವುದು ಸರ್ವಾಧಿಕಾರ:“ಪ್ರಜಾಪ್ರಭುತ್ವದಲ್ಲಿ ಒಬ್ಬರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಮತ್ತು ಪ್ರಜಾಸತ್ತಾತ್ಮಕವಾಗಿ ಟೀಕಿಸಲು ಎಲ್ಲರಿಗೂ ಹಕ್ಕಿದೆ. ಶಾಸಕರನ್ನು ಟೀಕಿಸಲು ಬಂದ ಹಕೀಮ್ ಕೂರ್ನಡ್ಕ ಎಂಬುವವರ ಮೇಲೆ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕಾ ಪ್ರತಿನಿಧಿಗಳ ಮುಂದೆಯೇ ಹಲ್ಲೆಗೆ ಯತ್ನಿಸಿರುವುದು ಕಾಂಗ್ರೆಸ್‌ನ ಅಹಂಕಾರವನ್ನು ತೋರಿಸುತ್ತದೆ. ಸಾರ್ವಜನಿಕ ಜೀವನದಲ್ಲಿರುವಾಗ ಟೀಕೆಗಳು ಸಹಜ. ನನ್ನನ್ನೂ ಅನೇಕರು ಟೀಕಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಟೀಕಿಸಿದವರನ್ನೆಲ್ಲಾ ಹಿಡಿದು ಹೊಡೆಯಲು ಹೋದರೆ ಅದು ಪ್ರಜಾಪ್ರಭುತ್ವವಾಗುವುದಿಲ್ಲ. ಬದಲಾಗಿ ಸರ್ವಾಧಿಕಾರವಾಗುತ್ತದೆ. ಪುತ್ತೂರಿನಂತಹ ಪುಣ್ಯಭೂಮಿಯಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಶೋಚನೀಯ. ಶಾಸಕರು ಟೀಕೆಗಳಿಗೆ ಗೂಂಡಾಗಿರಿಯ ಮೂಲಕ ಉತ್ತರಿಸಬಾರದು” ಎಂದು ಕಿಶೋರ್ ಕುಮಾ‌ರ್ ಪುತ್ತೂರು ತೀಕ್ಷ್ಮವಾಗಿ ನುಡಿದಿದ್ದಾರೆ.

ತುರ್ತು ಪರಿಸ್ಥಿತಿಯ ನೆನಪು ತರಿಸಿದ ಕಾಂಗ್ರೆಸ್‌:“ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪತ್ರಿಕೆಗಳಲ್ಲಿ ಏನೂ ಪ್ರಕಟವಾಗದಂತೆ ನಿರ್ಬಂಧ ಹೇರಿ ಮಾಧ್ಯಮಗಳ ಕತ್ತು ಹಿಸುಕಲಾಗಿತ್ತು.ಇಂದು ಅದೇ ಕಾಂಗ್ರೆಸ್ ಪಕ್ಷದವರು, ಪತ್ರಿಕಾಗೋಷ್ಠಿಯಲ್ಲಿ ಸತ್ಯ ಮಾತನಾಡಲು ಬರುವವರ ಬಾಯಿ ಮುಚ್ಚಿಸಲು ಗೂಂಡಾಗಿರಿ ಮಾಡುತ್ತಿದ್ದಾರೆ. ಇದು ಅಘೋಷಿತ ತುರ್ತು ಪರಿಸ್ಥಿತಿಯಲ್ಲದೇ ಮತ್ತೇನು?” ಎಂದು ಶಾಸಕರು ಪ್ರಶ್ನಿಸಿದ್ದಾರೆ.

ಕಿಸೆಯಲ್ಲಿ ಸಂವಿಧಾನ, ಕೃತ್ಯದಲ್ಲಿ ದಬ್ಬಾಳಿಕೆ:“ಯಾವಾಗಲೂ ಕಿಸೆಯಲ್ಲಿ ಸಂವಿಧಾನದ ಸಣ್ಣ ಪುಸ್ತಕವನ್ನು ಇಟ್ಟುಕೊಂಡು ಪ್ರದರ್ಶನ ಮಾಡುವ ಕಾಂಗ್ರೆಸ್ ನಾಯಕರು, ಅದೇ ಸಂವಿಧಾನ ನೀಡಿರುವ ‘ವಾಕ್ ಸ್ವಾತಂತ್ರ್ಯ’ದ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಯೂತ್ ಕಾಂಗ್ರೆಸ್‌ನ ಕಾರ್ಯಕರ್ತರು ಓರ್ವ ಡಿಸಿಪಿ ಮಟ್ಟದ ಪೊಲೀಸ್ ಅಧಿಕಾರಿಯ ಮೇಲೆಯೇ ಹಲ್ಲೆ ಮಾಡಿದರೂ, ಅವರ ಮೇಲೆ ಒಂದು ದೂರು ದಾಖಲಾಗುವುದಿಲ್ಲ. ಇತ್ತ ಪುತ್ತೂರಿನಲ್ಲಿ ಪೊಲೀಸ್ ಜೀಪಿಗೆ ಹೊಡೆಯಲು ಮುಂದಾಗುತ್ತಾರೆ. ಪೊಲೀಸರ ಮೇಲೆಯೇ ಹಲ್ಲೆ ಮಾಡುವ ಕಾಂಗ್ರೆಸ್ಸಿಗರಿಗೆ ರಕ್ಷಣೆ ಸಿಗುತ್ತಿದೆ ಎಂದರೆ, ಈ ರಾಜ್ಯದಲ್ಲಿ ಕಾನೂನು ಇದೆಯೋ ಸತ್ತಿದೆಯೋ?” ಎಂದು ಕಿಡಿಕಾರಿದ್ದಾರೆ.

ದಶಕಗಳ ಬಳಿಕ ಗೂಂಡಾ ಸಂಸ್ಕೃತಿಯ ಮರುಕಳಿಕೆ:“ಪುತ್ತೂರಿನ ಶಾಸಕರು ಅಭಿವೃದ್ಧಿಯ ಹೆಸರಿನಲ್ಲಿ ಬರೀ ಪೋಸ್ ಕೊಡುತ್ತಿದ್ದಾರೆ. ಹತ್ತಾರು ಮಂದಿ ಬೆಂಬಲಿಗರನ್ನು ಇಟ್ಟುಕೊಂಡು ಕೇವಲ ಫೋಟೋ ಮತ್ತು ವಿಡಿಯೋ ರೀಲ್ಸ್ ಮಾಡಲು ಸುತ್ತಾಡುತ್ತಾರೆಯೇ ಹೊರತು, ಪುತ್ತೂರು ಕ್ಷೇತ್ರಕ್ಕೆ ಇವರಿಂದ ಯಾವುದೇ ನೈಜ ಅಭಿವೃದ್ಧಿ ಆಗಿಲ್ಲ. ದಶಕಗಳ ಕಾಲ ನೆಮ್ಮದಿ ಹಾಗೂ ಶಾಂತಿಯಿಂದಿದ್ದ ಪುತ್ತೂರಿನಲ್ಲಿ ಶಾಸಕರು ಮತ್ತೆ ಗೂಂಡಾ ಸಂಸ್ಕೃತಿಯನ್ನು ಮರುಕಳಿಸುವಂತೆ ಮಾಡುತ್ತಿದ್ದಾರೆ” ಎಂದು ಶಾಸಕರು ಗಂಭೀರ ಆರೋಪ ಮಾಡಿದ್ದಾರೆ.

ಪೊಲೀಸ್‌ ಇಲಾಖೆಗೆ ಎಚ್ಚರಿಕೆ:ಪೊಲೀಸರ ಸಮ್ಮುಖದಲ್ಲೇ ಗೂಂಡಾಗಿರಿ ನಡೆಯುತ್ತಿದ್ದರೂ ಪೊಲೀಸರು ಮೂಕಪ್ರೇಕ್ಷಕರಾಗಿರುವುದು ಆತಂಕಕಾರಿ. ಪೊಲೀಸ್‌ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಪ್ರೆಸ್ ಕ್ಲಬ್ ಎದುರು ದಾಂಧಲೆ ಮಾಡಿದ ಗೂಂಡಾಗಳನ್ನು ಬಂಧಿಸಬೇಕು. ವಾಕ್ ಸ್ವಾತಂತ್ರ್ಯದ ಹರಣ ಹಾಗೂ ಪೊಲೀಸ್‌ ಅಧಿಕಾರಿಗಳ ಮೇಲಿನ ದಬ್ಬಾಳಿಕೆಯನ್ನು ರಾಜ್ಯದ ಜನತೆ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿಯು ಈ ಸರ್ವಾಧಿಕಾರಿ ಧೋರಣೆಯ ವಿರುದ್ಧ ಬೀದಿಗಿಳಿದು ಹೋರಾಡಲಿದೆ ಎಂದು ಎಂಎಲ್ಸಿ ಕಿಶೋ‌ರ್ ಕುಮಾ‌ರ್ ಪುತ್ತೂರು ಎಚ್ಚರಿಸಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!