ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ, ಪರ್ಲಡ್ಕ ಶಿವಪೇಟೆಯ ವಿವೇಕಾನಂದ ಶಿಶು ಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸೆ.4ರಂದು ನಡೆದ 28ನೇ ವರ್ಷದ ‘ಶ್ರೀಕೃಷ್ಣಲೋಕ’ ಕಾರ್ಯಕ್ರಮವು ಸಂಭ್ರಮ ಮನೆ ಮಾಡಿತು. ಕೃಷ್ಣ-ರಾಧೆಯರ ವೇಷಧಾರಿ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸಿತು.

ಶಿಶು ಮಂದಿರದ ಆವರಣದಲ್ಲಿ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಂದ ಪ್ರಾರ್ಥನೆ ನಡೆದು ಕೃಷ್ಣ ರಾಧೆಯರ ನೊಂದಾವಣೆಯು ಪ್ರಾರಂಭಗೊಂಡಿತು. ವಿದ್ಯಾರ್ಥಿಗಳಿಂದ ಭಜನೆ ಜರುಗಿತು. ನಂತರ ಬಾಲಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಶಿಶು ಮಂದಿರದ ಕೋಶಾಧಿಕಾರಿ ಚಂದ್ರಪ್ರಭಾ ಸತೀಶ್ ಅವರು ತೊಟ್ಟಲ ಸಂಭ್ರಮದ ಮಗುವಿನ ಅಮ್ಮನಿಗೆ ಆರತಿ ಬೆಳಗಿ ಬಾಗಿನ ಅರ್ಪಿಸಿದರು. ಬಳಿಕ ಕುಂಜೂರುಪಂಜದ ಮಹೇಶ್ ಮತ್ತು ಗೀತಾ ದಂಪತಿಯ ಆರು ತಿಂಗಳ ಮಗುವನ್ನು ಸುಧಾ ರಾವ್ ಹಾಗೂ ರಾಜೀ ಬಲರಾಮ ಆಚಾರ್ಯ ಅವರು ತೊಟ್ಟಿಲಲ್ಲಿ ಮಲಗಿಸಿದರು. ಕೃಷ್ಣಲೋಕ ಸಮಿತಿ ಕೋಶಾಧಿಕಾರಿ ರಕ್ಷಾ ಅವರು ಮಗುವಿಗೆ ಬೆಣ್ಣೆ ತಿನ್ನಿಸಿದರು. ಮಾತೃ ಮಂಡಳಿಯ ಸದಸ್ಯರು, ಮಾತೆಯರು ಬಾಲಕೃಷ್ಣನ ತೊಟ್ಟಲ ತೂಗಿ, ಜೋಗುಳ ಹಾಡಿ ಸಂಭ್ರಮಿಸಿದರು.

ಕೃಷ್ಣ-ರಾಧೆಯರ ಶೋಭಾಯಾತ್ರೆ:ಬಾಲಕೃಷ್ಣನ ತೊಟ್ಟಿಲ ಸಂಭ್ರಮದ ಬಳಿಕ ಶಿಶು ಮಂದಿರದ ಆವರಣದಿಂದ ಹೊರಟ ಶ್ರೀಕೃಷ್ಣ-ರಾಧೆಯರ ಶೋಭಾಯಾತ್ರೆಗೆ ಮಾಜಿ ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಆರ್.ಎಸ್.ಎಸ್ ಮುಖಂಡ ಅಚ್ಚುತ್ತ ನಾಯಕ್ ಅವರು ಧ್ವಜ ಹಸ್ತಾಂತರಿಸಿದರು. ಶಿಶು ಮಂದಿರದ ಆವರಣದಿಂದ ಹೊರಟ ಶೋಭಾಯಾತ್ರೆಯು ಚೇತನ ಆಸ್ಪತ್ರೆಯ ಮುಂಭಾಗದ ರಸ್ತೆಯಾಗಿ ಕೋರ್ಟ್ ರಸ್ತೆ, ಮುಖ್ಯ ರಸ್ತೆಯ ಮೂಲಕ ಸಾಗಿ ಸಭಾ ಕಾರ್ಯಕ್ರಮ ನಡೆಯುವ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಮಾಪನಗೊಂಡಿತು. ಕೃಷ್ಣ ರಾಧೆಯ ವೇಷ ಧರಿಸಿದ ಸಾವಿರಾರು ಪುಟಾಣಿಗಳ ಜೊತೆಗೆ ಪೋಷಕರು ಹೆಜ್ಜೆ ಹಾಕಿದರು. ಕೃಷ್ಣ ಹಾಗೂ ರಾಧೆಯ ವೇಷ ಭೂಷಣದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿ ಮಗುವಿನಲ್ಲಿಯೂ ಕೃಷ್ಣನನ್ನು ಕಾಣುವ ಖುಷಿ ಪೋಷಕರದ್ದಾಗಿತ್ತು. ಕೆಲವು ಮಕ್ಕಳು ಕೊಳಲು ಹಿಡಿದು ಕುಣಿದು ಸಂಭ್ರಮಿಸಿದರೆ ಇನ್ನು ಕೆಲವು ಮಕ್ಕಳ ಆಟ, ತುಂಟಾಟವು ನೋಡುಗರ ಗಮನ ಸೆಳೆಯಿತು. ಕುಣಿತ ಭಜನೆ, ಶಂಖನಾದ, ಚೆಂಡೆ ಶೋಭಾಯಾತ್ರೆಯಲ್ಲಿ ವಿಶೇಷವಾಗಿತ್ತು. ಶೋಭಾಯಾತ್ರೆ ಆಗಮಿಸಿದ ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

















































