ನೇಪಾಳಕ್ಕೆ ತೆರಳಿ ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ನಟ ಸೋನು ಸೂದ್

Picture of Savistara

Savistara

Bureau Report

ಕಟ್ಮಂಡು : ಭೀಕರ ಪ್ರವಾಹಕ್ಕೆ ಸಿಲುಕಿ ನಲುಗಿದ ನೇಪಾಳಕ್ಕೆ ನೆರವಾಗಲು ನಟ ಸೋನು ಸೂದ್ ಖುದ್ದು ಧಾವಿಸಿದ್ದಾರೆ.

ಮಂಗಳವಾರ ತಮ್ಮ ಸೂದ್ ಚಾರಿಟಿ ಫೌಂಡೇಶನ್’ ಸದಸ್ಯರೊಂದಿಗೆ ಕಲ್ಮಂಡುವಿಗೆ ತೆರಳಿರುವ ಸೋನು ಅವರು, ನಿರಾಶ್ರಿತರಿಗೆ, ಅಗತ್ಯವಿರುವವರಿಗೆ ಭಾರತದಿಂದ ತಂದ ಆಹಾರ, ಬೆಡ್‌ಶೀಟ್‌, ಅಗತ್ಯ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.ಈ ಬಗ್ಗೆ ಕಲ್ಮಂಡುವಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸೋನು, ‘ಪ್ರವಾಹ ಸಂತ್ರಸ್ತರನ್ನು ನಾವು ಭೇಟಿಯಾಗುತ್ತೇವೆ. ಅಗತ್ಯ ಇರುವವರೊಂದಿಗೆ ನಾವು ಇದ್ದು, ಅವರ ಜೀವನವನ್ನು ಸುಸ್ಥಿತಿಗೆ ತರುವ ಪ್ರಯತ್ನ ಮಾಡುತ್ತೇವೆ. ಈ ತಿಂಗಳು ಮಾತ್ರವಲ್ಲ ಮುಂಬರುವ ದಿನಗಳಲ್ಲೂ ನಮ್ಮ ಸಂಸ್ಥೆಯ ವತಿಯಿಂದ ಪರಿಹಾರ ಸಾಮಗ್ರಿಗಳು ಪೂರೈಕೆಯಾಗಲಿವೆ’ ಎಂದಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿರುವ ಸೋನು, ‘ಈ ಇಡೀ ದೃಶ್ಯವನ್ನು ನೋಡಿದರೆ, ಪ್ರವಾಹ ಉಂಟು ಮಾಡಿರುವ ಪರಿಣಾಮ ಎಷ್ಟೆಂಬುದನ್ನು ಅರ್ಥಮಾಡಿಕೊಳ್ಳಬಹುದು. ಮನೆಗಳನ್ನು ಕಳೆದುಕೊಂಡಿರುವವರು, ಎಂತಹ ಪರಿಸ್ಥಿತಿ ಎದುರಿಸುತ್ತಿರಬಹುದು ಎಂದು ಊಹಿಸಬಹುದು. ಜನರು ಪ್ರಪಂಚದ ಎಲ್ಲಿಯೇ ಇದ್ದರೂ, ನೇಪಾಳದ ನೆರವಿಗೆ ಬರುವ ಅಗತ್ಯವಿದೆ. ನೇಪಾಳವು ಮತ್ತೆ ತನ್ನ ಕಾಲ ಮೇಲೆ ನಿಲ್ಲಲು ನಾವು ಸಹಾಯ ಮಾಡಲು ಈ ಜನರೊಂದಿಗೆ ನಿಲ್ಲುವುದು ಬಹಳ ಮುಖ್ಯ’ ಎಂದು ಹೇಳಿದ್ದಾರೆ.

ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ನೇಪಾಳದ ಮಕ್ಕಳ ನಡುವೆ ನಿಂತಿರುವ ಫೋಟೊಗಳನ್ನು ಹಂಚಿಕೊಂಡಿರುವ ಅವರು, ‘ತಮ್ಮ ಮನೆಗಳು, ಕುಟುಂಬಗಳು ಮತ್ತು ಬಾಲ್ಯವನ್ನು ಕಳೆದುಕೊಂಡಿದ್ದಾರೆ. ಆದರೆ ನಾವೆಲ್ಲರೂ ಸೇರಿ, ಅವರಿಗೆ ಹೊಸ ಆರಂಭವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

[t4b-ticker]
error: Content is protected !!