ಬೆಂಗಳೂರು: ಸೂರ್ಯನಗರ 4ನೇ ಹಂತದ ವಸತಿ ಯೋಜನೆಗಾಗಿಆನೇಕಲ್ ತಾಲ್ಲೂಕಿನಲ್ಲಿ ಕರ್ನಾಟಕ ಗೃಹ ಮಂಡಳಿ ಕೈಗೊಂಡಿದ್ದ 1,938.13 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.
ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಕೋನಸಂದ್ರದ ಆರ್.ಗೋವಿಂದ ರೆಡ್ಡಿ ಸೇರಿದಂತೆ ಇತರರು ಸಲ್ಲಿಸಿದ್ದ ರಿಟ್ ಮೇಲ್ಮನವಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್.ಶಾಂತಿಭೂಷಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರಕಟಿಸಿದೆ.’ಈ ಯೋಜನೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ 268.96 ಚದರ ಕಿ.ಮೀ ಪರಿಸರದ ಸೂಕ್ಷ್ಮವಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಇಡೀ ಯೋಜನೆ ಇಲ್ಲಿನ ಪರಿಸರ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಜೀವಜಂತುಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ’ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ.’ಮಾನವನ ಅಸ್ತಿತ್ವಕ್ಕೆ ವಸತಿ ಮಾತ್ರವೇ ಅಗತ್ಯವಲ್ಲ. ಪರಿಸರ, ವನ್ಯಜೀವಿಗಳು, ಅರಣ್ಯ, ಹೊಳೆಗಳೂ ಸೇರಿದಂತೆ ಪ್ರಕೃತಿಯ ಅನೇಕ ಅಂಶಗಳು ಸಮಾನವಾಗಿ ಆದ್ಯತೆ ಪಡೆದಿರುತ್ತವೆ. ಸಾರ್ವಜನಿಕ ಉದ್ದೇಶದ ವ್ಯಾಪ್ತಿಗೆ ಬರುವ ವಿವಿಧ ಯೋಜನೆಗಳಿಗಾಗಿ ನಡೆಯುವ ಭೂ ಸ್ವಾಧೀನದ ಉದ್ದೇಶವು ಸಾರ್ವಜನಿಕ ಹಿತದೃಷ್ಟಿಯಿಂದ ನಡೆಯಬೇಕು. ಆದರೆ, ಇಂತಹ ಯಾವುದೇ ಸಾರ್ವಜನಿಕ ಉದ್ದೇಶವು ಪರಿಸರ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶವನ್ನು ಮೀರಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಖಂಡತುಂಡವಾಗಿ ನುಡಿದಿದೆ.
‘ಪ್ರಸ್ತಾವಿತ ಸೂರ್ಯನಗರ ಯೋಜನೆಯು ಹಂಚಿಕೆದಾರರಿಗೆ ಮತ್ತು ಸಾರ್ವಜನಿಕರಿಗೆ ಕೈಗೆಟುಕುವ ಹಾಗೂ ಯೋಜಿತ ವಸತಿ ಫ್ಲ್ಯಾಟ್‌ಗಳನ್ನು ನೀಡುವ ಗುರಿಯನ್ನು ಹೊಂದಿರುವುದೇನೊ ಸರಿ. ಆದರೆ, ಇಂತಹ ಒಂದು ಯೋಜನೆಯನ್ನು ವನ್ಯಜೀವಿಗಳನ್ನು ಸ್ಥಳಾಂತರಿಸಿ ಅವುಗಳ ನೈಸರ್ಗಿಕ ಆವಾಸಸ್ಥಾನವನ್ನು ಕಸಿದುಕೊಳ್ಳುವ ಮೂಲಕ ನಡೆಸುತ್ತಿರುವುದು ದುರದೃಷ್ಟಕರ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.“ಈ ನಿಟ್ಟಿನಲ್ಲಿ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಯು, ಸಿಇಸಿ (ಕೇಂದ್ರೀಯ ಅಧಿಕಾರ ಸಮಿತಿ) ಗುರುತಿಸಿದಂತೆ ಪರಿಸರ ಪ್ರಭಾವದ ವೈಜ್ಞಾನಿಕ ಅಧ್ಯಯನ, ಮೌಲ್ಯಮಾಪನ, ಸಾಮಾಜಿಕ-ಪರಿಸರ ಅಂಶಗಳೂ ಸೇರಿದಂತೆ ಇತ್ಯಾದಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ನಡೆಸಲಾಗಿದೆ. ಆದ್ದರಿಂದ, ಭೂ ಸ್ವಾಧೀನ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗಿದೆ’ ಎಂದು ನ್ಯಾಯಪೀಠ ಆದೇಶಿಸಿದೆ.ಸ್ವಾಧೀನ ಅಧಿಸೂಚನೆ: ವಸತಿ ಬಡಾವಣೆ ನಿರ್ಮಾಣದ ಉದ್ದೇಶಕ್ಕಾಗಿ ಆನೇಕಲ್ ತಾಲ್ಲೂಕಿನ ಇಂಡಲವಾಡಿ, ಕೋನಸಂದ್ರ, ಕಾಡುಜಕ್ಕನಹಳ್ಳಿ, ಬಗ್ಗನದೊಡ್ಡಿ ಮತ್ತು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 2,220 ಹಾಗೂ 2 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು; ಭೂ ಸ್ವಾಧೀನ ಕಾಯ್ದೆ-1984ರ ಕಲಂ 4(1)ರ ಅಡಿಯಲ್ಲಿ 2013ರ ಅಕ್ಟೋಬರ್ 19ರಂದು ಪ್ರಾಥಮಿಕ ಅಧಿಸೂಚನೆ ಹಾಗೂ ಅಂತಿಮವಾಗಿ 2015ರಲ್ಲಿ ಮೂರು ಹಂತಗಳಲ್ಲಿ 1,938.13 ಗುಂಟೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.
















































