ಇ-ಕೆವೈಸಿ ಚುರುಕುಗೊಳಿಸಿ, ಕಾರ್ಡ್ ರದ್ದುಪಡಿಸಬೇಡಿ: ರಿಜ್ವಾನ್‌ ಸೂಚನೆ

Picture of Savistara

Savistara

Bureau Report

ಮೈಸೂರು: ‘ಸದ್ಯಕ್ಕೆ ಯಾವುದೇ ಪಡಿತರ ಚೀಟಿಗಳನ್ನು ರದ್ದುಪಡಿಸಬಾರದು, ಇ-ಕೆವೈಸಿ ಚುರುಕುಗೊಳಿಸಿ 15 ದಿನಗಳಲ್ಲಿ ಪೂರ್ಣಗೊಳಿಸಬೇಕು’ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಮೈಸೂರು ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.’ಇ-ಕೆವೈಸಿ ಮುಗಿದ ಮೇಲೆ ವಾಸ್ತವಾಂಶದ ವರದಿ ಸಲ್ಲಿಸಬೇಕು. ಅದನ್ನು ಆಧರಿಸಿ ನಾವು ನೀತಿ ರೂಪಿಸುತ್ತೇವೆ. ಅನರ್ಹರನ್ನು ಹೊರಹಾಕಿ, ಅರ್ಹರನ್ನು ಒಳಗಡೆಗೆ ತೆಗೆದುಕೊಳ್ಳಬೇಕಾಗಿದೆ’ ಎಂದರು.’ಇಲಾಖೆಯ ಬಗ್ಗೆ ಜನರು ಕೆಟ್ಟದಾಗಿ ಮಾತನಾಡುವುದನ್ನು ಕೇಳಿಸಿಕೊಳ್ಳಲು ನಾನು ಸಿದ್ಧವಿಲ್ಲ. ಅಧಿಕಾರಿಗಳು ಅಧಿಕಾರವನ್ನು ಒಳ್ಳೆಯ ಉದ್ದೇಶಕ್ಕೆ ಮಾತ್ರ ಉಪಯೋಗಿಸಬೇಕು. ಉದ್ದೇಶ ಸರಿ ಇಲ್ಲದಿದ್ದರೆ ಸಹಿಸುವುದಿಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸಿದರೆ ನಿಮ್ಮನ್ನು ರಕ್ಷಿಸುತ್ತೇವೆ. ಯಾವುದೇ ಪ್ರಭಾವ ತಂದರೂ ಬಗ್ಗಲ್ಲ, ವರ್ಗಾವಣೆ ಮಾಡಿಕೊಡುವುದಿಲ್ಲ. ತಂಡವಾಗಿ ಕೆಲಸ ನಿರ್ವಹಿಸಿ ಕಡಿಮೆ ಅವಧಿಯಲ್ಲೇ ದೊಡ್ಡ ಸಾಧನೆ ಮಾಡೋಣ’ ಎಂದರು.

‘ನಮ್ಮದು ಸಾಮಾನ್ಯ ಜನರನ್ನು ತಲುಪುವ, ಬಡವರಿಗೆ ಸೇವೆ ಕೊಡುತ್ತಿರುವ ಇಲಾಖೆ, ಗ್ರಾಹಕರು ಅಥವಾ ಜನರಿಗೆ ಮೋಸ ಅಥವಾ ವಂಚನೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಜನರು ಮೆಚ್ಚುಗೆ ವ್ಯಕ್ತಪಡಿಸುವಂತೆ ಆಗಬೇಕು

‘ಇಲಾಖೆಯಲ್ಲಿನ ಸೇವೆ ಉತ್ತಮಗೊಳ್ಳಬೇಕಿದೆ. ಬಹಳಷ್ಟು ಬದಲಾವಣೆ, ಸುಧಾರಣೆ ಆಗಿದೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸುವಂತೆ ಆಗಬೇಕು. ಆದರೆ, ಸದ್ಯಕ್ಕೆ ಆ ಸ್ಥಿತಿಯಲ್ಲಿ ಇಲಾಖೆ ಇಲ್ಲ. ನಮ್ಮ ನಡವಳಿಕೆ, ಕೆಲಸದ ಶೈಲಿ ಹಿಂದಿನಿಂದ ಬಂದಿದ್ದೇ ಇದೆ. ಕಾನೂನು ಮಾಪನಶಾಸ್ತ್ರ ಇಲಾಖೆ ಇದೆಯೋ, ಇಲ್ಲವೋ ಎನ್ನುವಂತಿದೆ. ಇದೆಲ್ಲವೂ ಬದಲಾಗಬೇಕು’ ಎಂದರು.“ನಾವೆಲ್ಲರೂ ನಿಶ್ಚಯಿಸಿದರೆ ಆಹಾರಧಾನ್ಯ ಕಾಳಸಂತೆಗೆ ಹೇಗೆ ಹೋಗುತ್ತದೆ? ಎತ್ತುವಳಿ ವೇಳೆ ಜಿಪಿಎಸ್ ಅಳವಡಿಸಿಕೊಳ್ಳಬೇಕು. ಅದು ಇನ್ನೂ ಸಾಧ್ಯವಾಗಿಲ್ಲ. ಮೈಸೂರು ವಿಭಾಗದಲ್ಲಿನ ಪ್ರಗತಿಯು ಸಮಾಧಾನಕರವಾಗಿಲ್ಲ’ ಎಂದು ಹೇಳಿದರು.

ಜಂಟಿ ಕಾರ್ಯಾಚರಣೆ ನಡೆಸಿ

‘ಆಹಾರ ಇಲಾಖೆ ಹಾಗೂ ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು. ನಿಮಗಿರುವ ಅಧಿಕಾರ ಬಳಸಿಕೊಂಡು ಅಕ್ರಮ ತಡೆಗೆ ಕ್ರಮ ಕೈಗೊಳ್ಳಬೇಕು. ಮಧ್ಯವರ್ತಿಗಳು ಹಾಗೂ ಸಗಟು ಮಾರಾಟಗಾರರು ಆಹಾರ ಧಾನ್ಯ, ಸಕ್ಕರೆ ಮೊದಲಾದ ಪದಾರ್ಥಗಳನ್ನು ಅನಧಿಕೃತವಾಗಿ ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಕಾರ್ಯಾಚರಣೆ ಮೂಲಕ ಅದನ್ನು ತಡೆಯಬೇಕು. ಇಂತಹ ಜಾಲವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣ ದಾಖಲಿಸಬೇಕು. ಇಲಾಖೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಹಾಗೆಂದು, ಜನರಿಗೆ ಕಿರುಕುಳ ಕೊಡಬಾರದು’ ಎಂದು ನಿರ್ದೇಶನ ನೀಡಿದರು.

ಹಾಸನ ಜಿಲ್ಲೆಯಲ್ಲಿ ಇ-ಕೆವೈಸಿಯಲ್ಲಿ ಶೇ 8.53ರಷ್ಟು ಮಾತ್ರ ಪ್ರಗತಿ ಆಗಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, 15 ದಿನಗಳಲ್ಲಿ ಪೂರ್ಣಗೊಳಿಸುವಂತೆ ಗಡುವು ನೀಡಿದರು.

ಗಂಭೀರವಾಗಿ ಪರಿಗಣಿಸಿ

‘ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಕೊಡಗು ಜಿಲ್ಲೆಗಳಲ್ಲಿ 88,424 ಚೀಟಿಗಳ ಇ- ಕೆವೈಸಿ ಮಾಡುವುದು ಬಾಕಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕುಟುಂಬದ ಯಾರೋ ಒಬ್ಬರು ಕೆಲಸಕ್ಕೆ ಸೇರಿದರೆಂದು ಇಡೀ ಚೀಟಿಯನ್ನೇ ರದ್ದುಪಡಿಸಬಾರದು. ಆಹಾರ ಧಾನ್ಯ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಕೆಯಲ್ಲಿ ನಿರ್ಲಕ್ಷ್ಯ ತೋರಬಾರದು. ವಾರದೊಳಗೆ ಈ ಕೆಲಸ ಆಗಬೇಕು’ ಎಂದು ಸೂಚಿಸಿದರು.’ಅಕ್ರಮ ದಾಸ್ತಾನು ಸಾಗಣೆ ಮಾಡುತ್ತಿದ್ದರೆ, ಎಫ್‌ಐಆ‌ರ್ ಹಾಕಿಸಿ ಬಂಧಿಸಬೇಕು. ಇಲ್ಲದಿದ್ದರೆ ಅ ಅಕ್ರಮ ಮಾಡುವವರಿಗೆ ಭಯವೆಲ್ಲಿ ಬರುತ್ತದೆ? ಈ ನಿಟ್ಟಿನಲ್ಲಿ ನಾನೇ ವೈಯಕ್ತಿಕವಾಗಿ ಗಮನಿಸುತ್ತೇನೆ’ ಎಂದರು.

‘ಮೈಸೂರು ವಿಭಾಗದಲ್ಲಿ ಸಗಟು/ ಚಿಲ್ಲರೆ ಲಾಭಾಂಶ ಮತ್ತು ಸಾಗಣೆ ವೆಚ್ಚಕ್ಕಾಗಿ ಬಿಡುಗಡೆ ಆಗಿರುವ ಅನುದಾನದಲ್ಲಿ ₹ 28 ಕೋಟಿ ಬಾಕಿ ಉಳಿದಿರುವುದು ಸರಿಯಲ್ಲ. ವೃತ್ತಿಪರವಾಗಿ ಕೆಲಸ ಮಾಡೋಣ. ನಮ್ಮ ವೇಗಕ್ಕೆ ನೀವೂ ಬರಬೇಕು. ಅಕ್ರಮಗಳನ್ನು ತಡೆಯಬೇಕು. ಮುಂದಿನ ದಿನಗಳಲ್ಲಿ ದಾಳಿಯ ಗುರಿ ಕೊಡಲಾಗುವುದು’ ಎಂದು ತಿಳಿಸಿದರು.

ಇಲಾಖೆಯ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತ ಬಿ.ಆರ್.ಪೂರ್ಣಿಮಾ, ಆಹಾರ ನಿಗಮದ ಪ್ರಧಾನ ವ್ಯವಸ್ಥಾಪಕ ಮಂಜುನಾಥ್‌, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್‌ ಕುಮಾರ್, ನಗರ ಸಮಿತಿಯ ಅಧ್ಯಕ್ಷೆ ಪುಷ್ಪವಲ್ಲಿ, ವಿಭಾಗೀಯ ನಿರ್ದೇಶಕಿ ಕುಮುದಾ, ಜಂಟಿ ನಿರ್ದೇಶಕರಾದ ರಾಜಶೇಖರ್, ಮಂಟೇಸ್ವಾಮಿ ಪಾಲ್ಗೊಂಡಿದ್ದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!