ಸುಹಾಸ್‌ ಶೆಟ್ಟಿ ಕೊಲೆ ಆರೋಪಿಗಳಿಂದ ಜೈಲು ವಾರ್ಡನ್ ಕತ್ತು ಹಿಸುಕಿ ಕೊಲೆಯತ್ನ ; ಗಾಂಜಾ ಒಯ್ಯಲು ಅಡ್ಡಿಯಾಗಿದ್ದಕ್ಕೆ ಹಲ್ಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೃತ್ಯ

Picture of Savistara

Savistara

Bureau Report

ಬೆಂಗಳೂರು, ಸೆ.4: ಮಂಗಳೂರಿನಲ್ಲಿ ಒಂದು ವರ್ಷದ ಹಿಂದೆ ಕೊಲೆಯಾದ ಶೆಟ್ಟಿ ಪ್ರಕರಣದಲ್ಲಿ ಆರೋಪಿಗಳಾಗಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ಐದು ಮಂದಿ ನಿಷೇಧಿತ ಮಾದಕ ವಸ್ತುಗಳನ್ನು ಜೈಲಿಗೆ ತರಿಸಿಕೊಳ್ಳಲು ಅಡ್ಡಿಯಾದ ಕಾರಣಕ್ಕೆ ಜೈಲಿನ ವಾರ್ಡನ್ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಹವೇಲಿ ಎಂಬವರ ಮೇಲೆ ಹಲ್ಲೆ ನಡೆದಿದ್ದು ಪೊಲೀಸ್ ದೂರು ದಾಖಲಾಗಿದೆ. ಸೆಪ್ಟೆಂಬರ್ 02 ರಂದು ಬೆಳಿಗ್ಗೆ ಅನೆಕ್ಸ್-1ರಲ್ಲಿ ಮಂಜುನಾಥ್ ಅವರು ಕರ್ತವ್ಯದಲ್ಲಿದ್ದಾಗ ಐವರು ಆರೋಪಿಗಳು ಅವರನ್ನು ನಾಲ್ಕನೇ ಕೊಠಡಿಗೆ ಎಳೆದೊಯ್ದು ಬಲವಂತವಾಗಿ ಮನಬಂದಂತೆ ಥಳಿಸಿದ್ದಾರೆ.

ಆಗಸ್ಟ್ 22 ರಂದು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಈ ಆರೋಪಿಗಳು ಜೈಲಿನೊಳಗೆ ಕೆಲವು ನಿಷೇಧಿತ ವಸ್ತುಗಳನ್ನು ತರಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ, ವಾರ್ಡನ್ ಮಂಜುನಾಥ್ ಹವೇಲಿ ಆ ವಸ್ತುಗಳನ್ನು ತಡೆಹಿಡಿದಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು ಅಂದೇ ಮಂಜುನಾಥ್ ಅವರಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಜೈಲಿನಲ್ಲಿ ಪದೇ ಪದೇ ಕಾನೂನು ಉಲ್ಲಂಘನೆ ಆಗುತ್ತಿರುವುದರಿಂದ ಇತ್ತೀಚೆಗೆ ಜೈಲಿನ ನಿಯಮಗಳನ್ನು ಬಿಗಿಗೊಳಿಸಲಾಗಿತ್ತು.

ಕತ್ತು ಹಿಸುಕಿ ಕೊಲ್ಲಲು ಯತ್ನ

ದೂರಿನ ಅನ್ವಯ, ಆರೋಪಿಗಳು ಮಂಜುನಾಥ್ ಅವರ ಮುಖ ಮತ್ತು ಮೂಗಿಗೆ ಮುಷ್ಠಿಯಿಂದ ಬಲವಾಗಿ ಗುದ್ದಿದ್ದಾರೆ. ಅಷ್ಟೇ ಅಲ್ಲದೆ, ಜೈಲಿನಲ್ಲೇ ಅವರ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಲಾಗಿದೆ. ಕೂಡಲೇ ಇತರ ಸಿಬ್ಬಂದಿ ಧಾವಿಸಿ ವಾರ್ಡನ್ ಅವರನ್ನು ಕೈದಿಗಳ ಹಲ್ಲೆಯಿಂದ ರಕ್ಷಿಸಿದ್ದಾರೆ.ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮೊಹಮದ್ ಮುಶಾಮೀರ್, ಅಬ್ದುಲ್ ಶಪನ್, ಮೊಹ್ಮದ್ ರಿಜ್ವಾನ್, ನಿಯಾಜ್, ಕಲಂದರ್ ವಿರುದ್ಧ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ತಮ್ಮ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ಕುರಿತು ಮಂಜುನಾಥ್ ಹವೇಲಿ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

[t4b-ticker]
error: Content is protected !!