ಬಂಟ್ವಾಳ: ಮನೆಯಲ್ಲಿ ಒಬ್ಬಂಟಿಯಾಗಿದ್ದ 82 ವರ್ಷದ ವೃದ್ಧೆಯ ಮುಖಕ್ಕೆ ಬಟ್ಟೆ ಕಟ್ಟಿ, ಕೈಯಲ್ಲಿದ್ದ 5 ಲಕ್ಷ ರೂ. ಮೌಲ್ಯದ ಚಿನ್ನದ ಬಳೆಗಳನ್ನು ಬಲಾತ್ಕಾರವಾಗಿ ಎಳೆದು ಸುಲಿಗೆ ಮಾಡಿದ್ದ ಪ್ರಕರಣವನ್ನು ಪುಂಜಾಲಕಟ್ಟೆ ಪೊಲೀಸರು ಭೇದಿಸಿದ್ದು, ಕೃತ್ಯವೆಸಗಿದ ವೃದ್ಧೆಯ ಸ್ವಂತ ಮೊಮ್ಮಗನನ್ನೇ ಬ೦ಧಿಸಿದ್ದಾರೆ.ಬಂಟ್ವಾಳ ತಾಲೂಕಿನ ತೆಂಕಕಜೆಕಾರು ನಿವಾಸಿ ಶಬೀರ್ (33) ಬಂಧಿತ ಆರೋಪಿ.
ಬಂಟ್ವಾಳ ತೆಂಕಕಜೆಕಾರು ಉದ್ದದ ಗುಡ್ಡೆ ಎಂಬಲ್ಲಿ ಅವ್ವಮ್ಮ (82) ಎಂಬವರು ಆ.14ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಮುಖಚಹರೆ ಕಾಣದಂತೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಮನೆಯೊಳಗೆ ಬಂದು ಅವ್ವಮ್ಮ ಅವರ ಎರಡೂ ಕೈಗಳಲ್ಲಿದ್ದ ಸುಮಾರು 5 ಲಕ್ಷ ರೂ ಮೌಲ್ಯದ ಸುಮಾರು 40 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಬಲತ್ಕಾರವಾಗಿ ಎಳೆದುಕೊಂಡು ಹೋದ ಕುರಿತು ಹಾಗೂ ಅವ್ವಮ್ಮ ಅವರ ಕೈಯಿಂದ ಬಳೆಗಳನ್ನು ಎಳೆದ ಸಂದರ್ಭಕೈಗೆ ಗಾಯವಾಗಿದ್ದ ಕುರಿತು ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಅವ್ವಮ್ಮ ಅವರ ಮೊಮ್ಮಗನಾದ ಬಂಟ್ವಾಳ ತೆಂಕಕಜೆಕಾರು ನಿವಾಸಿ ಶಬೀರ್ ಆರೋಪಿ ಎಂದು ತಿಳಿದುಬಂದಿದ್ದು, ಆತನಿಂದ ಎರಡು ಚಿನ್ನದ ಬಳೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.














































