ಮಂಡ್ಯ: ಇಲ್ಲಿನ ಮಂಡ್ಯ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡಿರುವ ಎಲ್ಲ ಅತಿಥಿ ಉಪನ್ಯಾಸಕರಿಗೆ ಈ ಹಿಂದಿನಂತೆ ಸರ್ಕಾರದಿಂದಲೇ ವೇತನ ಪಾವತಿಸುವ ಕುರಿತು ಉಂಟಾಗಿರುವ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸುವಂತೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕರಾದ ಮಧು ಜಿ. ಮಾದೇಗೌಡ ಮತ್ತು ಪಿ.ರವಿಕುಮಾರ್ ಅವರು ಭೇಟಿ ಮಾಡಿ, ವಿಶ್ವವಿದ್ಯಾಲಯವು ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಕುರಿತು ವಿವರಿಸಿದರು.ಮಂಡ್ಯ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 150ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ವಾರ್ಷಿಕವಾಗಿ ವೇತನ ಪಾವತಿಸಲು ಅಂದಾಜು ₹6 ಕೋಟಿ ಅನುದಾನದ ಅವಶ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಂಡ್ಯ ವಿ.ವಿ.ಯಿಂದ ಅಷ್ಟೂ ಉಪನ್ಯಾಸಕರಿಗೆ ವೇತನ ಪಾವತಿಸಲು ಆಗುವುದಿಲ್ಲ ಎಂಬುದನ್ನು ಸಿಎಂ ಅವರ ಗಮನಕ್ಕೆ ತಂದರು.ಈಗಿನ ಆದೇಶದಿಂದ ವಿವಿಯ ಅಸ್ತಿತ್ವ, ಅತಿಥಿ ಉಪನ್ಯಾಸಕರ ಮೇಲಷ್ಟೇ ಆಗದೆ ಉನ್ನತ ಶಿಕ್ಷಣದ ಕನಸು ಹೊಂದಿರುವ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಆಗಲಿದೆ. ಹಾಗೆಯೇ ವೇತನ ಪಾವತಿ ವಿಷಯವು ಮುಖ್ಯಮಂತ್ರಿ ಅವರಿಂದ ಅನುಮೋದನೆ ಆಗಿದೆ ಎಂದು ಹೇಳಿ ಅಧಿಕಾರಿಗಳು ಸಮಸ್ಯೆ ಪರಿಹರಿಸುತ್ತಿಲ್ಲ. ತಾವು ಮಧ್ಯೆ ಪ್ರವೇಶಿಸಬೇಕು ಎಂದು ಶಾಸಕದ್ವಯರು ವಿನಂತಿಸಿದರು.
ಅತಿಥಿ ಉಪನ್ಯಾಸಕರಿಗೆ ವೇತನ ನೀಡುವ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಮತ್ತು ವಿವಿ ನಡುವಿನ ಜಟಾಪಟಿ ಕುರಿತು ‘ಪ್ರಜಾವಾಣಿ’ ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿಯ ನಂತರ ಜಿಲ್ಲೆಯ ಶಾಸಕರು ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.














































