ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಮಂಗಳವಾರ ಕೆಲಬದಲಾವಣೆಗಳನ್ನು ಮಾಡಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಇದ್ದ ಸಂಸದೀಯ ವ್ಯವಹಾರಗಳ ಖಾತೆಯನ್ನು ಕೃಷ್ಣಬೈರೇಗೌಡ ಅವರಿಗೆ ನೀಡಲಾಗಿದೆ.
‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಶಿಫಾರಸಿನಂತೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಸಚಿವರ ಖಾತೆಗಳ ಮರುಹಂಚಿಕೆ ಮಾಡಿದ್ದಾರೆ’ ಎಂದು ಲೋಕಭವನದ ಪ್ರಕಟಣೆ ತಿಳಿಸಿದೆ.ಕೃಷ್ಣ ಬೈರೇಗೌಡ ಅವರು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ವಹಿಸಿಕೊಂಡಿದ್ದಾರೆ.ಬಿಡಿಎ, ಬಿಎಂಆರ್‌ಡಿಎ ಹೊರತುಪಡಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಐದು ನಗರ ಪಾಲಿಕೆಗಳು, ಬೆಂಗಳೂರು ಜಲಮಂಡಳಿ, ಮೆಟ್ರೊ ಮಾತ್ರ ‘ಗ್ರೇಟರ್ ಬೆಂಗಳೂರು ಅಭಿವೃದ್ಧಿ’ ಖಾತೆಗೆ ಹಂಚಲಾಗಿದೆ.
ಸದ್ಯ ಡಿಕೆಶಿ ಬಳಿ ಹಣಕಾಸು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ಕಾನೂನು ಮತ್ತು ಹಂಚಿಕೆಯಾಗದ ಖಾತೆಗಳಿವೆ.ಮುಖ್ಯಮಂತ್ರಿಯಾಗಿ ಶಿವಕುಮಾರ್ ಜೂನ್ 3ರಂದು ಪ್ರಮಾಣವಚನ ಸ್ವೀಕರಿಸಿದಾಗ ಅವರ ಜೊತೆ 13 ಸಚಿವರು ಸಂಪುಟ ಸೇರಿದ್ದರು. ಒಂದು ತಿಂಗಳ ಬಳಿಕ, ಜುಲೈ 3ರಂದು ಸಂಪುಟ ವಿಸ್ತರಣೆ ಆಗಿತ್ತು.ಬಳಿಕ ಆಗಸ್ಟ್ 13ರಂದು ಡಿಕೆಶಿ ನೇತೃತ್ವದ ಸರ್ಕಾರದ 19 ನೂತನ ಸಚಿವರಿಗೆ ವಿಧಾನಮಂಡಲದ ಅಧಿವೇಶನ ಆರಂಭವಾಗುವುದಕ್ಕೂ ಒಂದು ದಿನ ಮೊದಲು ಖಾತೆ ಹಂಚಿಕೆಯಾಗಿತ್ತು.ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಬೇಡಿಕೆಯಂತೆ ಅವರ ಖಾತೆಗಳನ್ನು ಬದಲಾವಣೆ ಮಾಡಲಾಗಿತ್ತು.ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಅಧಿವೇಶನ ಆರಂಭವಾಗಿದೆ. ಸಂಪುಟ ವಿಸ್ತರಣೆಯಾದ ಬಳಿಕ ಖಾತೆ ಹಂಚಿಕೆಯು ಕಗ್ಗಂಟಾಗಿತ್ತು. ಹೀಗಾಗಿ, ಅಧಿವೇಶನದಲ್ಲಿ ನಿರ್ದಿಷ್ಟ ಇಲಾಖೆಗೆ ಸಂಬಂಧಿಸಿದಂತೆ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಯಾವ ಸಚಿವರು ಉತ್ತರ ನೀಡಬೇಕು ಎಂಬ ಪ್ರಶ್ನೆಯೂ ಎದುರಾಗಿತ್ತು. ಖಾತೆ ಇಲ್ಲದ ಸಚಿವ ಸಂಪುಟದ ಬಗ್ಗೆ ವಿರೋಧ ಪಕ್ಷಗಳು ಟೀಕೆಯನ್ನೂ ಮಾಡಿದ್ದವು. ಕಾಂಗ್ರೆಸ್ ಹೈಕಮಾಂಡ್ ಅಳೆದೂ ತೂಗಿ, ಸಚಿವರಿಗೆ ವಹಿಸಬೇಕಾದ ಖಾತೆಯ ಪಟ್ಟಿಗೆ ಅನುಮೋದನೆ ನೀಡಿತ್ತು. ಈ ಬೆನ್ನಲ್ಲೇ ಮುಖ್ಯಮಂತ್ರಿ ಶಿಫಾರಸು ಅನ್ವಯ ರಾಜ್ಯಪಾಲರು ಅಂಕಿತ ಹಾಕಿದ್ದರು.
ರಾಮಲಿಂಗಾ ರೆಡ್ಡಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಖಾತೆಯೇ ಬೇಕೆಂದು ಪಟ್ಟು ಹಿಡಿದಿದ್ದರು. ಅದನ್ನು ಕೃಷ್ಣಬೈರೇಗೌಡ ಅವರಿಗೆ ನೀಡಲಾಗಿತ್ತು. ಇದರಿಂದ ಮುನಿಸಿಕೊಂಡಿದ್ದ ರೆಡ್ಡಿ ಅವರು ರಾಜೀನಾಮೆಗೂ ಮುಂದಾಗಿದ್ದರು. ಅವರಿಗೆ ಈಗ ಅರಣ್ಯ ಮತ್ತು ಪರಿಸರ ಖಾತೆ ನೀಡಲಾಗಿದೆ.














































