ತಮಿಳುನಾಡಲ್ಲಿ ‘ಪ್ರಧಾನಿ’ ಬಿಕ್ಕಟ್ಟು: TVK ಸರ್ಕಾರಕ್ಕೆ ‘ಕೈ’ ಕೊಟ್ಟರೆ ಮುಂದೇನು?

Picture of Savistara

Savistara

Bureau Report

‘ಭವಿಷ್ಯದ ಪ್ರಧಾನಿ’ ಅಭ್ಯರ್ಥಿ ವಿಚಾರವಾಗಿ ತಮಿಳುನಾಡಿನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಇದೇ ವಿಚಾರವು, ಆಡಳಿತಾರೂಢ ಮೈತ್ರಿಕೂಟದಲ್ಲಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಹಾಗೂ ಕಾಂಗ್ರೆಸ್ ನಾಯಕರ ನಡುವೆ ಬಿಕ್ಕಟ್ಟು ಸೃಷ್ಟಿಸಿದೆ. ಪರಸ್ಪರ ಟೀಕಾ ಪ್ರಹಾರದಲ್ಲಿ ತೊಡಗಿದ್ದಾರೆ..

“ದಕ್ಷಿಣ ಭಾರತದವರೇ ದೇಶದ ಮುಂದಿನ ಪ್ರಧಾನಿಯಾಗಬೇಕು’ ಎಂದು ಅಲ್ಲಿನ ಲೋಕೋಪಯೋಗಿ ಸಚಿವ ಆಧವ್ ಅರ್ಜುನ್ ಇತ್ತೀಚೆಗೆ ನೀಡಿದ್ದ ಹೇಳಿಕೆಯೇ ಮಿತ್ರ ಪಕ್ಷಗಳ ನಡುವಣ ಒಡಕಿಗೆ ಮೂಲ. ಅದಾದ ನಂತರ, ನಟ, ತಮಿಳುನಾಡು ಮುಖ್ಯಮಂತ್ರಿ ಚಂದ್ರಶೇಖ‌ರ್ ಜೋಸೆಫ್ ವಿಜಯ್ ಅವರು ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಜನಪ್ರಿಯತೆ ಹೊಂದಿದ್ದಾರೆ.ಹಾಗಾಗಿ, 2029ರ ಲೋಕಸಭಾ ಚುನಾವಣೆ ವೇಳೆಗೆ ದೇಶದ ಪ್ರಧಾನಿಯಾಗುವ ಸಾಮರ್ಥ್ಯ ಅವರಲ್ಲಿದೆ ಎಂದು ಟಿವಿಕೆ ನಾಯಕರು ಪ್ರತಿಪಾದಿಸುತ್ತಿದ್ದಾರೆ.’ವಿಜಯ್ ಅವರೇ ಮುಂದಿನ ಪ್ರಧಾನಿ’ ಎಂಬುದು ಟಿವಿಕೆಯ ಅಧಿಕೃತ ಹೇಳಿಕೆಯೇನಲ್ಲ. ಆದಾಗ್ಯೂ, ತಮ್ಮ ನಾಯಕ ರಾಹುಲ್ ಗಾಂಧಿ ಅವರೇ 2029ರ ಲೋಕಸಭಾ ಚುನಾವಣೆ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರಾಳಿ ಎಂದು ಬಿಂಬಿಸಲು ಹೊರಟಿರುವ ಕಾಂಗ್ರೆಸ್ಸಿಗರಿಗೆ ಬೇಸರವನ್ನುಂಟು ಮಾಡಿದೆ.

ಮೈತ್ರಿ’ ಎರಡೂ ಪಕ್ಷಗಳಿಗೆ ಅನಿವಾರ್ಯ

ಟಿವಿಕೆ ಸ್ಥಾಪನೆಯಾದ ಎರಡೇ ವರ್ಷಕ್ಕೆ ಅಧಿಕಾರಕ್ಕೇರಿದ ಸಾಧನೆ ಮಾಡಿದೆಯಾದರೂ, ವಿಧಾನಸಭಾ ಚುನಾವಣೆಯಲ್ಲಿ ಬಹುಮತ ದಕ್ಕಿಸಿಕೊಳ್ಳಲು ಆಗಿಲ್ಲ ಎಂಬುದು ಗಮನಿಸಬೇಕಾದ ಅಂಶ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭಾ ಚುನಾವಣೆಗೆ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನವಾಗಿತ್ತು. ಚುನಾವಣೋತ್ತರ ಪ್ರಕಟವಾಗಿದ್ದ ಬಹುತೇಕ ಸಮೀಕ್ಷೆಗಳು ಮತ್ತೊಮ್ಮೆ ಡಿಎಂಕೆ ನೇತೃತ್ವದ ಮೈತ್ರಿಕೂಟವೇ ಅಧಿಕಾರಕ್ಕೇರಲಿದೆ ಎಂದು ಷರಾ ಬರೆದಿದ್ದವು. ಮೇ 4ರಂದು ಫಲಿತಾಂಶ ಪ್ರಕಟವಾದಾಗ ಎಲ್ಲ ಲೆಕ್ಕಾಚಾರಗಳು ಉಲ್ಟಾ ಆಗಿದ್ದವು.

108 ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಟಿವಿಕೆ ಅತಿದೊಡ್ಡ ಪಕ್ಷ ಎನಿಸಿತ್ತು. ಪ್ರಮುಖ ಪಕ್ಷಗಳಾದ ಡಿಎಂಕೆ ಹಾಗೂ ಎಐಎಡಿಎಂಕೆ ಕ್ರಮವಾಗಿ ಗಳಿಸಿದ್ದ 59 ಹಾಗೂ 47 ಕ್ಷೇತ್ರಗಳಲ್ಲಿ ಮಾತ್ರ.ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಟಿವಿಕೆಗೆ ಅಗತ್ಯ ಬಹುಮತ (118 ಸ್ಥಾನ) ಗಳಿಸಲು ಇನ್ನೂ 10 ಸ್ಥಾನಗಳ ಕೊರತೆ ಎದುರಾಗಿತ್ತು. ಆಗ ಟಿವಿಕೆಗೆ ನೆರವಿಗೆ ಬಂದದ್ದು ಕಾಂಗ್ರೆಸ್. ದಕ್ಷಿಣ ಭಾರತದಲ್ಲಿ ವಿಜಯ್ ಅವರಿಗೆ ಇರುವ ಅಪಾರ ಜನಪ್ರಿಯತೆಯನ್ನು ಬಳಸಿಕೊಂಡು, ಮುಂದಿನ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಲೆಕ್ಕಾಚಾರದೊಂದಿಗೆ, ಡಿಎಂಕೆ ಜೊತೆಗಿನ ಹಲವು ದಶಕಗಳ ಮೈತ್ರಿ ಮುರಿದುಕೊಂಡಿತ್ತು.ಇನ್ನುಳಿದ ಸ್ಥಾನಗಳ ಕೊರತೆ ತುಂಬಲು ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಯುತ್ತಿದ್ದ ಹೊತ್ತಿನಲ್ಲಿ, ಬದ್ಧ ಎದುರಾಳಿಗಳಾಗಿರುವ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳೇ ಒಂದಾಗಿ ಸರ್ಕಾರ ರಚಿಸಲಿವೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ, ಹಾಗಾಗಲಿಲ್ಲ. ತಲಾ ಎರಡು ಸ್ಥಾನಗಳನ್ನು ಹೊಂದಿರುವ ವಿಡುತಲೈ ಚಿರುತೈಗಳ್ ಕಚ್ಚಿ (ವಿಸಿಕೆ), ಎಡಪಕ್ಷಗಳಾದ ಸಿಪಿಐ, ಸಿಪಿಐ(ಎಂ), ಇಂಡಿಯನ್ ಯೂನಿಯನ್ ಆಫ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷಗಳು ಟಿವಿಕೆಗೆ ಬೆಂಬಲ ನೀಡಿ, ಸರ್ಕಾರ ರಚಿಸಲು ಅನುವು ಮಾಡಿಕೊಟ್ಟವು.ಟಿವಿಕೆ ಜೊತೆಗಿನ ಮೈತ್ರಿಯು ಕಾಂಗ್ರೆಸ್ ಪಕ್ಷಕ್ಕೂ ಅನಿವಾರ್ಯವಾಗಿದೆ. ಆ ಪಕ್ಷದ (ಕಾಂಗ್ರೆಸ್) ನಾಯಕರು ರಾಜ್ಯದಲ್ಲಿ 1967ರ ನಂತರ ಮಂತ್ರಿ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಐವರು ಶಾಸಕರನ್ನು ಹೊಂದಿರುವ ಕಾಂಗ್ರೆಸ್, ಮುಂದಿನ ಚುನಾವಣೆಗಳಲ್ಲಿ ನೆಲೆ ವಿಸ್ತರಿಸಿಕೊಳ್ಳಲು ಇದರಿಂದ ಸಾಧ್ಯವಾಗಬಹುದು.

ಮೈತ್ರಿ ಮುರಿದು ಬಿದ್ದರೆ?

2029ರ ಲೋಕಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಟಿವಿಕೆ ಒಪ್ಪದಿದ್ದರೆ, ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್‌ ಸಚಿವರು ಹೇಳಿಕೊಂಡಿದ್ದಾರೆ.ಒಂದು ವೇಳೆ, ಉಭಯ ಪಕ್ಷಗಳ ನಾಯಕರ ನಡುವಣ ಅಸಮಾಧಾನ ತಣಿಯದಿದ್ದರೆ ಸರ್ಕಾರದ ಅಸ್ಥಿತ್ವಕ್ಕೂ ತೊಂದರೆಯಾಗಬಹುದು.

ಸದ್ಯ ಟಿವಿಕೆಗೆ ಬೆಂಬಲವಾಗಿ ನಿಂತಿರುವ ವಿಸಿಕೆ, ಚುನಾವಣಾ ಪೂರ್ವದಲ್ಲಿ ಡಿಎಂಕೆ ನೇತೃತ್ವದ ಸೆಕ್ಯುಲ‌ರ್ ಪ್ರೋಗ್ರೆಸ್ಸಿವ್ ಅಲಯನ್ಸ್‌ (ಎಸ್‌ಪಿಎ) ಭಾಗವಾಗಿತ್ತು. ಅದರ (ವಿಸಿಕೆ) ಮುಖ್ಯಸ್ಥ ತೋಲ್ ತಿರುಮಾವಳವನ್ ಅವರು, ಟಿವಿಕೆಗೆ ಬೆಂಬಲ ನೀಡಿದ್ದರೂ, ಡಿಎಂಕೆ ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳುವುದಿಲ್ಲ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವುದನ್ನು ತಪ್ಪಿಸಲು ಮತ್ತು ಜನಾದೇಶವನ್ನು ಗೌರವಿಸುವ ಸಲುವಾಗಿ ಟಿವಿಕೆಗೆ ಬೆಂಬಲ ನೀಡಿದ್ದೇವೆ ಎಂದು ಹೇಳಿದ್ದರು.

ಹೀಗಾಗಿ, ಕಾಂಗ್ರೆಸ್ ಶಾಸಕರು ಟಿವಿಕೆಗೆ ನೀಡಿರುವ ಮೈತ್ರಿಯನ್ನು ಹಿಂಪಡೆದರೆ, ವಿಸಿಕೆ ಶಾಸಕರೂ ಹಿಂದೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸದ್ಯ ಟಿವಿಕೆಗೆ ಇರುವ ಸ್ಥಾನ ಬಲ

ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ವಿಜಯ್, ಪೆರಂಬೂರು ಸ್ಥಾನವನ್ನು ಉಳಿಸಿಕೊಂಡು ತಿರುಚಿರಾಪಳ್ಳಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಟಿವಿಕೆ ಬಲ 107ಕ್ಕೆ ಇಳಿದಿದೆ. ಕಾಂಗ್ರೆಸ್‌ನ ಐವರು ಹಾಗೂ ಉಳಿದ ಪಕ್ಷಗಳ ಬೆಂಬಲದೊಂದಿಗೆ ಟಿವಿಕೆ ಸರ್ಕಾರದ ಜೊತೆ ಸದ್ಯ 120 ಶಾಸಕರು ಇದ್ದಾರೆ.

ಒಂದು ವೇಳೆ, ಕಾಂಗ್ರೆಸ್ ಹೊರಬಂದರೆ, ಟಿವಿಕೆ ಸಂಖ್ಯಾ ಬಲ 115ಕ್ಕೆ ಕುಸಿಯಲಿದೆ. ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಮಾಡುವ ಪ್ರಸಂಗ ಎದುರಾದರೆ, ಸರ್ಕಾರ ಉರುಳುವ ಪರಿಸ್ಥಿತಿಯೂ ಎದುರಾಗಬಹುದು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!