ನವದೆಹಲಿ: ‘ಸಂಘಟನೆಯು ಮೀಸಲಾತಿಯನ್ನು ಬೆಂಬಲಿಸುತ್ತದೆ.ದೇಶಕ್ಕೆ ಇಂತಹ ವ್ಯವಸ್ಥೆ ಅಗತ್ಯ’ ಎಂದು ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ(ಎಬಿವಿಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ವೀರೇಂದ್ರ ಸಿಂಗ್ ಸೋಲಂಕಿ ಹೇಳಿದ್ದಾರೆ.
‘ಮೀಸಲಾತಿಯನ್ನು ತೆಗೆದು ಹಾಕಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಕೆಲವರು ಹೋರಾಟ ನಡೆಸುತ್ತಿದ್ದಾರೆ. ಅಂಥವರು ಈ ವಿಚಾರವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವಅಗತ್ಯವಿದೆ’ ಎಂದೂ ಡಾ.ಸೋಲಂಕಿ ಪ್ರತಿಪಾದಿಸಿದ್ದಾರೆ.ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅವರು, ‘ಸಂವಿಧಾನವು ಮೀಸಲಾತಿ ಸೌಲಭ್ಯ ಒದಗಿಸುತ್ತದೆ ಹಾಗೂ ಈ ಸೌಲಭ್ಯ ಮುಂದುವರಿಯಬೇಕು’ ಎಂದು ಹೇಳಿದ್ದಾರೆ.’ವಿದ್ಯಾರ್ಥಿಗಳ ಪರ ಹೋರಾಟ ನಿಲ್ಲದು’: ‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಇದು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಉಗ್ರ ಹೋರಾಟ ನಡೆಸುವುದಕ್ಕೆ ಸಂಘಟನೆಯ ಕೈಕಟ್ಟಿ ಹಾಕುತ್ತದೆಯೇ’ ಎಂಬ ಪ್ರಶ್ನೆಗೆ, ‘ಬಿಜೆಪಿ ಇಲ್ಲವೇ ಇತರ ಯಾವುದೇ ಪಕ್ಷದ ಸರ್ಕಾರವಿರಲಿ, ವಿದ್ಯಾರ್ಥಿಗಳ ವಿಚಾರ ಬಂದಾಗ ಎಬಿವಿಪಿ ಪ್ರಬಲ ಹೋರಾಟ ನಡೆಸಲಿದೆ. ಇದು ನಮ್ಮ ಸ್ಪಷ್ಟ ನಿಲುವು’ ಎಂದು ಉತ್ತರಿಸಿದ್ದಾರೆ.
‘ಕೆಲವು ಬಾರಿ ಸಂವಾದ-ಮಾತುಕತೆ ಮೂಲಕ ಪರಿಹಾರ ಹೊರಹೊಮ್ಮುತ್ತದೆ. ಈ ಮಾರ್ಗದ ಮೂಲಕವೂ ಸಮಸ್ಯೆ ಬಗೆಹರಿಯದಿದ್ದಾಗ ಹೋರಾಟಕ್ಕೆ ಸಂಘಟನೆ ಸಿದ್ಧವಾಗಿರಲಿದೆ’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.’ಜೆನ್ ಅಲ್ಪಾ ಹೆಚ್ಚು ಪ್ರಬುದ್ಧ’ : ಜೆನ್ ಅಲ್ಪಾ ಬಹಳ ಪ್ರಬುದ್ಧ ಪೀಳಿಗೆ ಹಿಂದಿನ ಪೀಳಿಗೆಗಳಿಗೆ ಹೋಲಿಸಿದರೆ ಇವರು ಹೆಚ್ಚು ಚುರುಕು ಹಾಗೂ ತಂತ್ರಜ್ಞಾನ ಬಳಕೆ ಬಗ್ಗೆ ಹೆಚ್ಚು ಒಲವು ಹೊಂದಿದವರಾಗಿದ್ದಾರೆ ಎಂದು ಡಾ.ಸೋಲಂಕಿ ಹೇಳಿದ್ದಾರೆ.’ಜೆನ್ ಅಲ್ಪಾಗಳಿಗೆ ಬೆರಳಂಚಿನಲ್ಲಿಯೇ ಎಲ್ಲ ಮಾಹಿತಿ ಲಭ್ಯ. ಅವರು ವಿಷಯಗಳನ್ನು ಬೇಗನೇ ಅರ್ಥ ಮಾಡಿಕೊಳ್ಳಬಲ್ಲವರೂ ಆಗಿದ್ದಾರೆ. ಹೀಗಾಗಿ ಅವರಿಗೆ ಸಂಬಂಧಿಸಿದ ವಿಚಾರವನ್ನು ರಾಜಕೀಯಗೊಳಿಸುವ ಅಗತ್ಯ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂದರ್ಶನದ ಪ್ರಮುಖ ಅಂಶಗಳು
- ದೇಶದಾದ್ಯಂತ 44 ಸಾವಿರ ಹಾಸ್ಟೆಲ್ ಪಿ.ಜಿ.ಹಾಸ್ಟೆಲ್‌ಗಳಿವೆ. ಅವುಗಳ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿದ್ದು ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ವಾರದೊಳಗೆ ಈ ವರದಿಯನ್ನು ಹಂಚಿಕೊಳ್ಳಲಾಗುವುದು
- ‘ಕೋಚಿಂಗ್ ಮಾಫಿಯಾ’ ನಿಯಂತ್ರಣಕ್ಕೆ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು. ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಶುಲ್ಕದ ಮೇಲೆ ಮಿತಿ ಹೇರಬೇಕು
- ಅಧಿಕಾರಿಗಳು ಹಾಗೂ ಪಿ.ಜಿ.ಹಾಸ್ಟೆಲ್ ಮಾಲೀಕರ ನಡುವಿನ ನಂಟಿನಿಂದಾಗಿ ವಿದ್ಯಾರ್ಥಿಗಳಿಗೆ ಅಸುರಕ್ಷಿತ ವಸತಿ ವ್ಯವಸ್ಥೆ ಸಿಗುವಂತಾಗಿದೆ
- ಕೋಚಿಂಗ್ ಮಾಫಿಯಾವನ್ನು ರಾತ್ರೋರಾತ್ರಿ ನಿರ್ಮೂಲನೆ ಮಾಡಲು ಸಾಧ್ಯ ಇಲ್ಲ. ಆದರೆ ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಈ ಸಂಬಂಧ ಕೋಚಿಂಗ್ ನಿಯಂತ್ರಣ ಕಾಯ್ದೆ ರೂಪಿಸುವಂತೆ 2024ರಲ್ಲಿಯೇ ಸರ್ಕಾರಕ್ಕೆ ಎಬಿವಿಪಿ ಸಲಹೆ ನೀಡಿತ್ತು.
‘ಶಿಥಿಲ ಕಟ್ಟಡ: ಫೋಟೊ ಅಪ್‌ಲೋಡ್ ಮಾಡಿ
‘ದೆಹಲಿಯಲ್ಲಿ ವಿದ್ಯಾರ್ಥಿಗಳು ನೆಲಸಿದ್ದ ಪಿ.ಜಿ.ಹಾಸ್ಟೆಲ್ ಕಟ್ಟಡಗಳು ಕುಸಿದು ಅವಘಡಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಇಂತಹ ಕಟ್ಟಡಗಳ ಕುರಿತ ಮಾಹಿತಿ ಸಂಗ್ರಹಿಸುವ ಅಭಿಯಾನ ಆರಂಭಿಸಲಾಗಿದೆ ಎಂದು ಡಾ.ಸೋಲಂಕಿ ಹೇಳಿದ್ದಾರೆ. ಅಸುರಕ್ಷಿತವೆಂದು ಕಂಡುಬರುವ ಹಾಸ್ಟೆಲ್‌ಗಳು ಹಾಗೂ ಪಿ.ಜಿ.ಹಾಸ್ಟೆಲ್‌ಗಳ ಚಿತ್ರಗಳು/ವಿಡಿಯೊಗಳನ್ನು NoMoreSatyaNiketan.in ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಸಂಘಟನೆಯ ತಂಡ ಅಂತಹ ಸ್ಥಳಗಳಿಗೆ ಭೇಟಿ ನೀಡುವುದು ಎಂದು ತಿಳಿಸಿದ್ದಾರೆ.
















































