ಸೌಜನ್ಯ ಪ್ರಕರಣ ಮರು ತನಿಖೆಗೆ ಶಶಿಕುಮಾ‌ರ್ ಐಪಿಎಸ್ ನೇತ್ರತ್ವದ SIT ರಚನೆ ಮಂಗಳೂರಿನ ಸೂಪರ್ ಕಾಪ್ ಸುಧೀ‌ರ್ ಕುಮಾ‌ರ್ ರೆಡ್ಡಿ ಗೂ ತಂಡದಲ್ಲಿ ಸ್ಥಾನ

Picture of Savistara

Savistara

Bureau Report

ಬೆಂಗಳೂರು, ಸೆ.24: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರು ತನಿಖೆಗಾಗಿ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶ ಹೊರಡಿಸಿದೆ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಈ ತಂಡವನ್ನು ರಚಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿ ಶಶಿಕುಮಾರ್ ರವರ ನೇತೃತ್ವದಲ್ಲಿ ತನಿಖೆ ನಡೆಯಲಿದೆ.

2012ರ ಅಕ್ಟೋಬರ್ 9ರಂದು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಕ್ರೈಂ ನಂ.250/2012ರ ಪ್ರಕರಣವನ್ನು ಬಳಿಕ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ಎಸ್‌ಸಿಬಿ ಚೆನ್ನೈ ಘಟಕವು ಪ್ರಕರಣವನ್ನು RC 2(S)/2014/CBI/SCB/CHENNAI ಎಂದು ಮರುನೋಂದಣಿ ಮಾಡಿಕೊಂಡಿತ್ತು.

ಸರ್ವೋಚ್ಚ ನ್ಯಾಯಾಲಯವು ಪ್ರಕರಣದಲ್ಲಿ ‘ಡೆ ನೊವೊ’ (ಹೊಸತಾಗಿ) ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ತಂಡದಲ್ಲಿ ಆಧುನಿಕ ತನಿಖಾ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಅಧಿಕಾರಿಗಳನ್ನು ಒಳಗೊಂಡಿದೆ. ಪೊಲೀಸ್‌ ಅಧಿಕಾರಿಯೊಬ್ಬರು ತಂಡದ ನೇತೃತ್ವ ವಹಿಸಲಿದ್ದಾರೆ.

ಎಸ್.ಐ.ಟಿ (SIT) ಉನ್ನತ ಮಟ್ಟದ ತಂಡದ ವಿವರ:ರಾಜ್ಯ ಸರ್ಕಾರವು ನೇಮಿಸಿರುವ ವಿಶೇಷ ತನಿಖಾ ತಂಡವು ಕೆಳಗಿನ ಅಧಿಕಾರಿಗಳನ್ನು ಒಳಗೊಂಡಿದೆ:

1. ಎನ್. ಶಶಿಕುಮಾರ್, ಐ.ಪಿ.ಎಸ್. – ಪೊಲೀಸ್ ಮಹಾನಿರೀಕ್ಷಕರು (ಮುಖ್ಯಸ್ಥರು). ಇವರು ಇ ಹಿಂದೆ ಮಂಗಳೂರು ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸಿದರು

2. ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ. ಐ.ಪಿ.ಎಸ್. -ಪೊಲೀಸ್‌ ಆಯುಕ್ತರು, ಮಂಗಳೂರು ನಗರ (ಸದಸ್ಯರು)

3. ಶ್ರೀಮತಿ ನಿಶಾ ಜೇಮ್ಸ್, ಐ.ಪಿ.ಎಸ್. – ಪೊಲೀಸ್ ಅಧೀಕ್ಷಕರು, ರಾಜ್ಯ ಗುಪ್ತ ವಾರ್ತೆ, ಬೆಂಗಳೂರು (ಸದಸ್ಯರು). ಇವರು ಕೆಲ ವರ್ಷಗಳ ಹಿಂದೆ ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು

4. ಲೋಕೇಶ್ ಜಗಲಸಾರ್. ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು, ಸಿ.ಐ.ಡಿ, ಬೆಂಗಳೂರು (ಸದಸ್ಯರು)

5. ವೆಂಕಟೇಶ್ ಪ್ರಸನ್ನ – ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ (ಸದಸ್ಯರು)

ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆ, ಸಿಐಡಿ ಅಥವಾ ಸಿಬಿಐ ತನಿಖಾ ತಂಡಗಳಲ್ಲಿ ಭಾಗಿಯಾಗಿದ್ದ ಯಾವುದೇ ಅಧಿಕಾರಿಯನ್ನು ಹೊಸ ಎಸ್‌ಐಟಿಯಲ್ಲಿ ಸೇರ್ಪಡೆಗೊಳಿಸಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಈ ಪ್ರಕರಣದಲ್ಲಿ ಈ ಹಿಂದೆ ವಿಚಾರಣೆಗೊಳಗಾಗಿ ಖುಲಾಸೆಗೊಂಡಿರುವ ಸಂತೋಷ್ ರಾವ್ ಅವರಿಗೆ ಸಂವಿಧಾನದ ವಿಧಿ 20(2) ಹಾಗೂ ಸಿಆರ್‌ಪಿಸಿ ಸೆಕ್ಷನ್ 300ರ ರಕ್ಷಣೆ ಇರುವುದರಿಂದ, ಅವರ ವಿರುದ್ಧ ಮತ್ತೊಮ್ಮೆ ತನಿಖೆ ಅಥವಾ ವಿಚಾರಣೆ ನಡೆಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಅದೇ ರೀತಿ ಮಲ್ಲಿಕ್ ಜೈನ್, ದೀರಜ್ ಜೈನ್‌ ಹಾಗೂ ಉದಯ್ ಜೈನ್ ಸೇರಿದಂತೆ ಯಾವುದೇ ವ್ಯಕ್ತಿಯ ಪಾತ್ರದ ಕುರಿತು ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಎಸ್‌ಐಟಿ ಯಾವುದೇ ಪೂರ್ವನಿರ್ಧಾರ ಅಥವಾ ಪ್ರಭಾವಕ್ಕೆ ಒಳಗಾಗದೆ ತನಿಖೆ ನಡೆಸಬೇಕು ಎಂದು ನಿರ್ದೇಶಿಸಲಾಗಿದೆ.ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ, ಕಾನೂನು ಪ್ರಕಾರ ಸಂಬಂಧಪಟ್ಟ ನ್ಯಾಯಾಲಯಕ್ಕೆ ಪೊಲೀಸ್‌ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸೆ.24ರಂದು ವಿಶೇಷ ತನಿಖಾ ತಂಡ ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.

[t4b-ticker]
error: Content is protected !!