ಸುಳ್ಯ: ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಒಳಿತಿಗಾಗಿ ಹಾಗೂ ಆಡಳಿತ ಪಾರದರ್ಶಕತೆಗಾಗಿ ಭಕ್ತರು ಇಟ್ಟಿರುವ ನ್ಯಾಯಯುತ ಆಗ್ರಹವನ್ನು ರಾಜಕೀಯಗೊಳಿಸಿ ವಿಷಯಾಂತರ ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಪಂಜದ ಮುಖಂಡರು ಹೇಳಿದ್ದಾರೆ.
ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಶಂಕರ್ ಕುಮಾರ್ ಮುಚ್ಚಿಲ, ಮುಖಂಡರಾದ ಚಂದ್ರಶೇಖರ ಶಾಸ್ತ್ರಿ, ಪ್ರಕಾಶ್ ಜಾಕೆ, ಅಂಕುಶ್ ಕುದ್ವ, ಶರತ್ ಕುದ್ದ ಹಾಗೂ ನಾರಾಯಣ ಕೃಷ್ಣನಗರ ಮಾತನಾಡಿ ಕಾಂಗ್ರೆಸ್ ಮುಖಂಡರ ಆರೋಪಗಳಿಗೆ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯ ಪ್ರಮುಖ ಮುಖ್ಯಾಂಶಗಳು:
ಪಕ್ಷಾತೀತ ಭಕ್ತರ ಮನವಿ: ಭಕ್ತರಾದ ನಾವು ದೇವಸ್ಥಾನದ ಸಮಿತಿಗೆ ನೇರವಾಗಿ ಮನವಿ ಮಾಡಿದ್ದೇವೆಯೇ ಹೊರತು ಯಾವುದೇ ರಾಜಕೀಯ ಪಕ್ಷಕ್ಕಲ್ಲ. ಆದರೆ ಕೆಲವರು ಇದನ್ನು ವೈಯಕ್ತಿಕ ಹಾಗೂ ರಾಜಕೀಯ ಆರೋಪವಾಗಿ ಬಿಂಬಿಸುತ್ತಿರುವುದು ದುರದೃಷ್ಟಕರ.
ಲೆಕ್ಕಾಚಾರದಲ್ಲಿ ವ್ಯತ್ಯಾಸ: ದೇವಳದ ನೌಕರರ ವಜಾ, ಒಳಾಂಗಣದ ಶಾಶ್ವತ ಛಾವಣಿ ನಿರ್ಮಾಣ, ಅಡಿಕೆ ತೋಟದ ಹರಾಜು ಸೇರಿದಂತೆ ಭಕ್ತರ ಸಂಶಯ ನಿವಾರಣೆಗೆ ಕರೆದ ಸಭೆಯಲ್ಲಿ ಅಧ್ಯಕ್ಷರು ನೀಡಿದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಸಮರ್ಪಕ ಉತ್ತರ ಸಿಗದಿದ್ದಾಗ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಲಾಯಿತೇ ಹೊರತು ಯಾವುದೇ ಅವ್ಯವಹಾರದ ಆರೋಪ ಮಾಡಿಲ್ಲ.
ಧಾರ್ಮಿಕ ಕಾರ್ಯಕ್ರಮಗಳು: ಭಕ್ತರ ಮುಂದಿನ ನಡೆಯಾಗಿ ದೇವರ ಸನ್ನಿಧಿಯಲ್ಲಿ 12 ದಿನಗಳ ಕಾಲ ಶಿವ ಪಂಚಾಕ್ಷರಿ ಜಪ ಹಾಗೂ ಕೊನೆಯ ದಿನ ಶತರುದ್ರ, ಸಹಸ್ರಾಧಿಕ ನಾಳಿಕೇರಾಭಿಷೇಕವನ್ನು ಸಂಪೂರ್ಣ ಪಕ್ಷಾತೀತವಾಗಿ ನಡೆಸಲಾಗಿದೆ.
ತನಿಖೆಗೆ ಸ್ವಾಗತ: 2003ರಿಂದ ಇದುವರೆಗಿನ ದೇವಸ್ಥಾನದ ಎಲ್ಲಾ ಆಡಳಿತ ಮಂಡಳಿಯ ಅವಧಿಯ ಲೆಕ್ಕಾಚಾರಗಳ ತನಿಖೆಗೆ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿರುವುದನ್ನು ಮುಖಂಡರು ಪೂರ್ಣವಾಗಿ ಸ್ವಾಗತಿಸಿದ್ದಾರೆ.
















































