ಮಂಗಳೂರು, ಸೆ.26: ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ ನಿಮಿತ್ತ ಸಂಭ್ರಮಾಚರಣೆ ನಡೆಸುತ್ತಿದ್ದಾಗ ಐವರು ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿರುವ ಘಟನೆ ಪಾಂಡೇಶ್ವರ ಬಳಿಯ ಎಮ್ಮೆಕೆರೆಯಲ್ಲಿ ನಡೆದಿದ್ದು ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಮ್ಮೆಕೆರೆಯ ಲಕ್ಷ್ಮೀ ರಮಾ ಹಾಲ್ ನಲ್ಲಿ ಸಮಾರಂಭನಡೆದಿದ್ದು ಕಾರ್ಯಕ್ರಮದ ಬಳಿಕ ಕೆಳಗಡೆ ಹುಲಿವೇಷದ ತಾಸೆ ಮೆರವಣಿಗೆ ಆಗುತ್ತಿದ್ದಾಗಲೇ ಮೊದಲ ಮಹಡಿಯಲ್ಲಿ ನಿಂತಿದ್ದವರು ಸ್ಲಾಬ್ ಸಹಿತ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ, ಕಾಂಕ್ರೀಟ್ ಸ್ಲಾಬ್ ಬಿದ್ದು ಕೆಳಗಿದ್ದವರು ಕೂಡ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಮಂಗಳೂರು ನಗರದ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಹಳೆಯಂಗಡಿ ನಿವಾಸಿ ಮಹಮ್ಮದ್ ಶಮಾಜ್ (16) ಸ್ಥಿತಿ ಚಿಂತಾಜನಕವಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಸೂರಿಂಜೆ ನಿವಾಸಿ ಮಹಮ್ಮದ್ ಶನಾನ್ ಅಹಮ್ಮದ್ (18), ಅಡ್ಯಾರ್ ನಿವಾಸಿ ಹನೀಫ್ (23), ಕಾವೂರಿನ ದವೂದ್ ಫರ್ಸಿನ್ ಅಹಮ್ಮದ್ (18) ಮತ್ತು ಕಸಬಾ ಬೆಂಗ್ರೆಯ ಮಹಮ್ಮದ್ ಶಾಕೀಲ್ ಹುಸೈನ್ (18) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಳೆಯ ಕಟ್ಟಡದ ವೆರಾಂಡಾದಲ್ಲಿರುವ ಕಾಂಕ್ರೀಟ್ ಸ್ಲಾಬ್ ಕುಸಿದು ಬಿದ್ದಿದ್ದು ಪೊಲೀಸರು ಕಟ್ಟಡ ಮಾಲಕ, ಆಯೋಜಕರ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆಯಿದೆ. ಸ್ಲಾಬ್ ಕುಸಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
















































