
ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಸಾಲ ದ.ಕ. ರೈತರಿಗೆ ಸಿಗುತ್ತಿಲ್ಲ – ಸರ್ಕಾರ ಗಮನ ಹರಿಸಬೇಕು: ಶಾಸಕ ಹರೀಶ್ ಪೂಂಜಾ

ಪೆರಾಡಿ: ಬೆಳ್ತಂಗಡಿ ತಾಲೂಕಿನ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಪೆರಾಡಿ ಇದರ ಸಂಗಮ ಸಭಾಭವನ ಮತ್ತು ಗೋದಾಮು ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು, ಬೆಳೆ ವಿಮೆ ಕಡಿಮೆ ಪಾವತಿ ಹಾಗೂ ಶೂನ್ಯ ಬಡ್ಡಿ ದರದ ಸಾಲದ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಬೆಳೆ ವಿಮೆ ಸಿಗಬೇಕಾದರೆ ವಿಮಾ ಕಂಪನಿಯು 2020ರ ಹೊಸ ನಿಯಮದ ಪ್ರಕಾರ ರೇನ್‌ಫಾಲ್ ಮಿತಿಯನ್ನು 100ರಿಂದ 250ಕ್ಕೆ ಏರಿಕೆ ಮಾಡಿದೆ. ಇದರಿಂದ ರೈತರಿಗೆ ಸಿಗಬೇಕಾದ ಬೆಳೆ ವಿಮೆ ಪರಿಹಾರ ಕಡಿಮೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಬೇಕು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಸಮ್ಮುಖದಲ್ಲಿಯೇ ಮಾತನಾಡಿದ ಪೂಂಜಾ, ಈ ವಿಚಾರದಲ್ಲಿ ತಕ್ಷಣ ನಿಯೋಗ ತೆರಳಿ ಸಂಬಂಧಪಟ್ಟ ಸಚಿವರಿಗೆ ತಿಳಿಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದ ಆದೇಶದ ಪ್ರಕಾರ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ. ವರೆಗಿನ ಸಾಲ ನೀಡುವ ಬಗ್ಗೆ ಘೋಷಣೆ ಮಾಡಿದ್ದರೂ, ನಮ್ಮ ಜಿಲ್ಲೆಯಲ್ಲಿ ರೈತರಿಗೆ ಅದು ಸಿಗುತ್ತಿಲ್ಲ. ಇದು ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು.

ಕೃಷಿಕರಿಗೆ ಈ ಸೌಲಭ್ಯ ಸಿಗದ ಕಾರಣ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ರಾಜ್ಯದಲ್ಲಿ ನಮ್ಮ ಜಿಲ್ಲೆಯ ರೈತರಿಗೆ ಮಾತ್ರ 5 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದ ಸಾಲ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಸುಳ್ಯ ಭಾಗದ ರೈತರು ಈ ವಿಚಾರವಾಗಿ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ. ವರೆಗೆ ಸಾಲ ನೀಡುವಂತೆ ಸರ್ಕಾರಕ್ಕೆ ಮನವಿ ನೀಡಿದ್ದರು ಎಂದು ಅವರು ಸ್ಮರಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಿಂದ ಎದ್ದು ನಿಂತು ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, ಸರ್ಕಾರ ಸರಿಯಾದ ಪಟ್ಟಿಯನ್ನು ನಮ್ಮ ಜಿಲ್ಲೆಗೆ ನೀಡುತ್ತಿಲ್ಲ. ಹೀಗಾಗಿ ಶೂನ್ಯ ಬಡ್ಡಿ ಸಾಲ ವಿತರಣೆಯಲ್ಲಿ ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ನಿರ್ದೇಶಕ ಶಶಿಕುಮಾರ್ ರೈ, ಕುಶಾಲಪ್ಪ ಗೌಡ, ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು.











































