ಸುಳ್ಯ: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಬೆಳೆ ವಿಮೆ ಯೋಜನೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ರೈತರಿಗೆ ದ್ರೋಹ ಎಸಗಿದೆ ಎಂದು ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದ ರೈತನ ಆರ್ಥಿಕ ಸಬಲೀಕರಣಕ್ಕಾಗಿ ಸಹಕಾರಿ ಸಂಘಗಳ ಮೂಲಕ ವಿಮಾ ಕಂತು ಕಟ್ಟಿಸಿದ್ದು, ಗ್ರಾಮಗಳಲ್ಲಿ ಸರಿಯಾದ ಮಳೆ ಮಾಪನ ಅಳವಡಿಸದೆ ಕೆಟ್ಟು ಹೋದ ಮಾಪನದ ಮೂಲಕ ವಿಮಾ ಕಂಪನಿ ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸೇರಿಕೊಂಡು ಕೇಂದ್ರ ಸರ್ಕಾರದ ಹಣವನ್ನು ಕೃಷಿಕರಿಗೆ ನೀಡದೆ ವಂಚಿಸಿದೆ ಎಂದು ಆರೋಪಿಸಿದ್ದಾರೆ.
ಬೆಳೆ ನಾಶವಾಗಿದ್ದು, ತಮ್ಮ ಖಾತೆಗೆ ದೊಡ್ಡ ಮೊತ್ತ ಜಮೆಯಾಗುವ ವಿಶ್ವಾಸದಿಂದ ಕಾಯುತ್ತಿದ್ದ ರೈತರಿಗೆ ನಿರಾಸೆ ಉಂಟುಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸರಾಸರಿ ಮಳೆಯ ಆಧಾರದಲ್ಲಿ ಲೆಕ್ಕ ಹಾಕಿ, ಸುಳ್ಯ ಕ್ಷೇತ್ರದಲ್ಲಿ ಅಡಿಕೆಗೆ ಕೊಳೆರೋಗ ಮತ್ತು ಹಳದಿ ರೋಗ ಬಂದು ಕಂಗಾಲಾಗಿರುವ ರೈತನ ಬದುಕಿಗೆ ದ್ರೋಹ ಬಗೆದಿದೆ.ಕಡಿಮೆ ಕೃಷಿ ಇರುವ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವಾದ ಉಳ್ಳಾಲವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ರಾಜ್ಯದ ರೈತರ ಹಣದಲ್ಲಿ ತಾರತಮ್ಯ ಎಸಗಿ ನೈಜ ರೈತರಿಗೆ ಅಪಮಾನ ಮಾಡಲಾಗಿದೆ ಎಂದು ವಳಲಂಬೆ ಕಿಡಿಕಾರಿದ್ದಾರೆ.ರೈತರು ಕಾಂಗ್ರೆಸ್ ಜನಪ್ರತಿನಿಧಿಗಳ ಮೇಲಿನ ವಿಶ್ವಾಸ ಕಳೆದುಕೊಂಡಿದ್ದು, ಮುಂದೆ ವಿಮಾ ಕಂತು ಕಟ್ಟಲು ರೈತರಿಗೆ ವಿಶ್ವಾಸವಿಲ್ಲದಂತೆ ಮಾಡಿದೆ.
ಕರ್ನಾಟಕ ಸರ್ಕಾರ ತಕ್ಷಣ ಮಳೆ ಜಾಸ್ತಿ ಆಗಿರುವ ಪ್ರದೇಶದಲ್ಲಿ ಕಡಿಮೆ ಕಂತು ಬಿಡುಗಡೆಯಾಗಿರುವ ಸಹಕಾರಿ ಸಂಘದ ವ್ಯಾಪ್ತಿಯ ರೈತರ ಖಾತೆಗೆ ಹೆಚ್ಚುವರಿ ನ್ಯಾಯಯುತ ಹಣ ಪಾವತಿಸಬೇಕು. ತಪ್ಪಿದಲ್ಲಿ ನೊಂದ ಗ್ರಾಮದ ರೈತರ ಹಕ್ಕಿನ ಹಣಕ್ಕಾಗಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.











































