ಅಮರಾವತಿ (ಪಿಟಿಐ): ಐಚಿ ನಾಗೋಯಾದಲ್ಲಿ ಶನಿವಾರ ಏಷ್ಯಾಡ್ ಕೂಟದಲ್ಲಿ ನಡೆದ ಆರ್ಚರಿಯಲ್ಲಿ ಕುಂಕುಮ್ ಮೊಹದ್ ಅವರು ತೊಟ್ಟ ಬಾಣಗಳು ನಿಖರ ಗುರಿಗೆ ಹೋಗಿ ನಾಟುತ್ತಿದ್ದವು. 17 ವರ್ಷದ ಕುಂಕುಮ್ ಚಿನ್ನದ ಪದಕ ಜಯಿಸಿದರು. ಅದೇ ಹೊತ್ತಿಗೆ ನಾಗೋಯಾದಿಂದ ಸಾವಿರಾರು ಕಿಲೋಮೀಟರ್‌ಗಳ ದೂರದ ಮಹಾ ರಾಷ್ಟ್ರದ ಅಮರಾವತಿಯ ಗೋಸಾವಿ ಕಾಲೋನಿಯಲ್ಲಿ ಜನರ ಸಂಭ್ರಮ ಮುಗಿಲುಮುಟ್ಟಿತ್ತು. ಕುಂಕುಮ್ ಅವರ ಮನೆ ಇರುವುದು ಇದೇ ಪ್ರದೇಶದಲ್ಲಿ.
ಕುಂಕುಮ್ ಅವರ ತಂದೆ ಅನಿಲ್ ಮೊಹದ್ ಅವರಿಗೆ ತಮ್ಮ ಮಗಳ ಮೇಲೆ ಅದಮ್ಯ ವಿಶ್ವಾಸ. ‘ಇದು ಆರಂಭ. ಮುಂದೆಯೂ ಇನ್ನೂ ಹೆಚ್ಚು ಪದಕಗಳನ್ನು ಗೆಲ್ಲುತ್ತಾಳೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕೂಟದಲ್ಲಿಯೂ ಚಿನ್ನ ಗೆಲ್ಲುವುದು ಖಚಿತ’ ಎಂದು ಭರವಸೆ ವ್ಯಕ್ತಪಡಿಸಿದರು.ರಿಕರ್ವ್ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಅವರಾಗಿದ್ದಾರೆ. ಕುಂಕುಮ್ ಎಂಟು ವರ್ಷದ ಬಾಲಕಿ ಯಾಗಿದ್ದಾಗಿನಿಂದಲೂ ತಮ್ಮ ಊರಿನ ಆರ್ಚರಿ ರೇಂಜ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಕೋಚ್ ಪ್ರಫುಲ್ ದಾಂಗೆ ತರಬೇತಿ ನೀಡಿದರು.’ಕುಂಕುಮ್ ಸ್ಪರ್ಧೆಯಲ್ಲಿ ಆಡುವುದನ್ನು ನಾನು ಯಾವತ್ತೂ ನೋಡಿಲ್ಲ. ಆಕೆ ಸ್ಪರ್ಧೆಯಲ್ಲಿದ್ದಾಗ ನಾನು ದೇವರ ಮೂರ್ತಿಯ ಮುಂದೆ ಕುಳಿತು ಪ್ರಾರ್ಥನೆ ಮಾಡುತ್ತಿದ್ದೆ. ಈ ಪಂದ್ಯವನ್ನೂ ನಾನು ನೋಡಿಲ್ಲ’ ಎಂದು ತಾಯಿ ರೂಪಾಲಿ ಹೇಳಿದರು.’ಆಕೆ 12ನೇ ತರಗತಿಯಲ್ಲಿದ್ದಾಳೆ. ಈ ವರ್ಷ ಬೋರ್ಡ್ ಪರೀಕ್ಷೆ ಬರೆಯ ಬೇಕು’ ಎಂದೂ ರೂಪಾಲಿ ಹೇಳಿದರು.











































