ಸೈಬೀರಿಯಾ (ರಷ್ಯಾ): ರಷ್ಯಾದ ಸೈಬೀರಿಯಾ ಪ್ರದೇಶದ ಸಂಶೋಧನಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಲ್ಯಾಬ್ ಟೆಕ್ನಿಷಿಯನ್ ದಾರಿಯಾ ಶಿಪಿಲೋವಾ ಅವರ ಸಾವಿನ ಬಳಿಕ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ಲೇಗ್ ರೋಗಾಣುವಿನ ಸೋಂಕಿನ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 200ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಐದು ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಸಜೀವ ಬ್ಯಾಕ್ಟೀರಿಯಾ ಇದ್ದ ಟೆಸ್ಟ್ ಟ್ಯೂಬ್ ಒಡೆದಿತ್ತೇ?
ದಾರಿಯಾ ಶಿಪಿಲೋವಾ ಅವರು ಇರ್ಕುಟ್ಸ್ ಪ್ರದೇಶದ ಶೆಲೆಖೋವ್‌ನಲ್ಲಿರುವ ‘ಆಂಟಿ-ಪ್ಲೇಗ್ ರಿಸರ್ಚ್ ಇನ್‌ಸ್ಟಿಟ್ಯೂಟ್’ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರಯೋಗಾಲಯದಲ್ಲಿ ಸ್ಯಾಂಪಲ್ ಸಂಗ್ರಹಿಸುವ ಸಂದರ್ಭದಲ್ಲಿ ಸಜೀವ ಬ್ಯಾಕ್ಟೀರಿಯಾಗಳಿದ್ದ ಟೆಸ್ಟ್ ಟ್ಯೂಬ್ ಆಕಸ್ಮಿಕವಾಗಿ ಒಡೆದಿತ್ತು ಎಂದು ಅವರು ವೈದ್ಯಕೀಯ ಸಿಬ್ಬಂದಿಗೆ ತಿಳಿಸಿದ್ದರು ಎನ್ನಲಾಗಿದೆ.
ಈ ಘಟನೆಯ ಬಳಿಕ ದಾರಿಯಾ ಅವರ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಸೆಪ್ಟೆಂಬರ್ 29ರಂದು ತೀವ್ರ ಉಸಿರಾಟದ ತೊಂದರೆ ಮತ್ತು ನ್ಯುಮೋನಿಯಾ ಲಕ್ಷಣಗಳ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ಸಹಾಯ ನೀಡಲಾಗಿತ್ತಾದರೂ, ಅಕ್ಟೋಬರ್ 1ರಂದು ಅವರು ಮೃತಪಟ್ಟಿದ್ದಾರೆ.
200ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್:ಮುನ್ನೆಚ್ಚರಿಕಾ ಕ್ರಮವಾಗಿ ದಾರಿಯಾ ಅವರ ಸಂಪರ್ಕದಲ್ಲಿದ್ದ 200ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಸೋಂಕು ಹರಡುವ ಸಾಧ್ಯತೆಯನ್ನು ತಡೆಯುವ ಉದ್ದೇಶದಿಂದ ಇರ್ಕುಟ್ಸ್ ನಗರದಲ್ಲಿ ಸಾರ್ವಜನಿಕ ಸಮಾರಂಭಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದ್ದು, ಐದು ಆಸ್ಪತ್ರೆಗಳನ್ನು ಮುಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.
ಅಧಿಕಾರಿಗಳ ಹೇಳಿಕೆಗಳಿಂದ ಹೆಚ್ಚಿದ ಗೊಂದಲ:ಇರ್ಕುಟ್ಸ್ ಗವರ್ನರ್ ಇಗೋರ್ ಕೊಬ್ಲೆವ್ ಅವರ ಪ್ರಕಾರ, ಮೃತರ ಮಾದರಿಗಳನ್ನು ಪರೀಕ್ಷಿಸಿದಾಗ ಯಾವುದೇ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿಲ್ಲ ಮತ್ತು ಅವರ ಸಾವಿಗೆ ಅಜ್ಞಾತ ಕಾರಣದ ನ್ಯುಮೋನಿಯಾ ಕಾರಣವಾಗಿರಬಹುದು ಎಂದಿದ್ದಾರೆ. ಆದರೆ, ನೆರೆಯ ಬುರ್ಯಾಟಿಯಾ ಪ್ರದೇಶದ ಗವರ್ನರ್ ಅಲೆಕ್ಸಿ ಟ್ರೈಡೆನೋವ್ ಅವರು ದಾರಿಯಾ ಪ್ಲೇಗ್‌ನಿಂದ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಹೇಳಿರುವುದು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ಲೇಗ್ ಎಂಬುದು Yersinia pestis ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಗಂಭೀರ ಸಾಂಕ್ರಾಮಿಕ ರೋಗವಾಗಿದ್ದು, ಅಂತಿಮ ಪರೀಕ್ಷಾ ವರದಿ ಬಂದ ನಂತರವಷ್ಟೇ ನೈಜ ಕಾರಣ ಸ್ಪಷ್ಟವಾಗಲಿದೆ. ಪ್ರಸ್ತುತ ರಷ್ಯಾದ ಗ್ರಾಹಕ ಸುರಕ್ಷತಾ ಸಂಸ್ಥೆ ಪರಿಸ್ಥಿತಿಯ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿದೆ.











































