ಚಾಂಪಿಯನ್ಸ್ ಟ್ರೋಫಿ 2025ರ 2ನೇ ಸೆಮಿಫೈನಲ್‌ನಲ್ಲಿ ಬುಧವಾರ, ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಭಾನುವಾರ ದುಬೈನಲ್ಲಿ ಭಾರತ-ನ್ಯೂಜಿಲೆಂಡ್ ಫೈನಲ್ ನಡೆಯಲಿದ್ದು, ಕೋಟ್ಯಂತರ ಕ್ರಿಕೆಟ್‌ಪ್ರೇಮಿಗಳು ಕಾತರದಿಂದ ಈ ಪಂದ್ಯವನ್ನು ಎದುರು ನೋಡುತ್ತಿದ್ದಾರೆ
ಲಾಹೋರ್(ಪಾಕಿಸ್ತಾನ): ರಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸನ್ ಅವರ ಜವಾಬ್ದಾರಿಯುತ ಶತಕದಾಟದ ಫಲವಾಗಿ ಬುಧವಾರ ಲಾಹೋರ್‌ನ ಗದ್ದಾಫಿ ಮೈದಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ದಕ್ಷಿಣ ಆಫ್ರಿಕಾವನ್ನು 50 ರನ್‌ಗಳಿಂದ ಮಣಿಸಿತು. ಈ ಮೂಲಕ ಟೂರ್ನಿಯ ಫೈನಲ್ ಪ್ರವೇಶಿಸಿತು. ಮಾರ್ಚ್ 9ರ ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪ್ರತಿಷ್ಟಿತ ಪ್ರಶಸ್ತಿಗೆ ಪೈಪೋಟಿ ನಡೆಯಲಿದೆ.ಟಾಸ್ ಗೆದ್ದ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಓಪನರ್ ಆಗಿ ಕಣಕ್ಕಿಳಿದ ರವೀಂದ್ರ 101 ಎಸೆತಗಳಲ್ಲಿ 108 ರನ್ ಸಿಡಿಸಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಇದರಲ್ಲಿ 13 ಬೌಂಡರಿ ಮತ್ತು ಒಂದು ಸಿಕ್ಸ್ ಒಳಗೊಂಡಿತ್ತು. ಅದೇ ರೀತಿ, ಒನ್ ಡೌನ್ ಆಗಿ ಕ್ರೀಸಿಗಿಳಿದ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ 94 ಎಸೆತಗಳಲ್ಲಿ 102 ಸಿಡಿಸಿದರು. 10 ಬೌಂಡರಿ ಮತ್ತು 2 ಸಿಕ್ಸ್ ಇವರ ಇನ್ನಿಂಗ್ಸ್‌ನಲ್ಲಿತ್ತು.
ಇವರನ್ನು ಹೊರತುಪಡಿಸಿ, ಡೇರಿಲ್ ಮಿಚೆಲ್ (49 ರನ್), ಗ್ಲೆನ್ ಫಿಲಿಪ್ಸ್ (49) ಮತ್ತು ಮೈಕಲ್ ಬ್ರೇಸ್‌ವೆಲ್(16) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಕೊನೆಯ 10 ಓವರ್‌ಗಳಲ್ಲಿ 112 ರನ್ ಹರಿದುಬಂದ ಕಾರಣ ತಂಡ ದಕ್ಷಿಣ ಆಫ್ರಿಕಾಕ್ಕೆ 362 ರನ್‌ಗಳ ಬೃಹತ್ ಟಾರ್ಗೆಟ್ ನೀಡಲು ಸಾಧ್ಯವಾಯಿತು. ಇದು ಚಾಂಪಿಯನ್ ಟ್ರೋಫಿ ಇತಿಹಾಸದಲ್ಲೇ ದಾಖಲಾದ ಅತಿ ದೊಡ್ಡ ಸ್ಕೋರ್ ಎಂಬುದು ಗಮನಾರ್ಹ.ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ತಂಡವೇ ಎರಡು ಬಾರಿ ಅತಿ ದೊಡ್ಡ ಟಾರ್ಗೆಟ್ ಚೇಸ್ ಮಾಡಿತ್ತು. ಆದರೆ ಈ ಬಾರಿ 9 ವಿಕೆಟ್ ನಷ್ಟಕ್ಕೆ 312 ರನ್‌ಗಳಿಸಲಷ್ಟೇ ಸಾಧ್ಯವಾಗಿ ಸೋಲಿಗೆ ಶರಣಾಯಿತು. ಡೇವಿಡ್ ಮಿಲ್ಲರ್ ಶತಕದಾಟ (67 ಎಸೆತಗಳಲ್ಲಿ 100 ರನ್), ರಸ್ಸಿ ವನ್ ಡೆನ್ ಡುಸ್ಸನ್ (69) ಹಾಗು ನಾಯಕ ತೆಂಬ ಬವುವಾ (56) ಹೋರಾಟ ಗೆಲುವಿಗೆ ಸಾಕಾಗಲಿಲ್ಲ.ಇನ್ನು ಬೌಲಿಂಗ್‌ನಲ್ಲೂ ಕಿವೀಸ್ ಕರಾರುವಾಕ್ ಪ್ರದರ್ಶನ ನೀಡಿತು. ನಾಯಕ ಸ್ಯಾಂಟ್ನರ್ 43 ರನ್‌ಗಳಿಗೆ 3 ವಿಕೆಟ್ ಉರುಳಿಸಿದರು. ಈ ಮೂಲಕ ಕಿವೀಸ್‌ನ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಉಳಿದಂತೆ, ಮೈಕಲ್ ಬ್ರೇಸ್‌ವೆಲ್ (1/53), ಗ್ಲೆನ್ ಫಿಲಿಪ್ಸ್(2/27), ರವೀಂದ್ರ (1/20) ಇನ್ನಿಂಗ್ಸ್ ಮಧ್ಯ ಭಾಗದಲ್ಲಿ ಹರಿಣಗಳನ್ನು ಕಟ್ಟಿಹಾಕುವಲ್ಲಿ ಯಶಸ್ಸು ಕಂಡರು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಹೀಗಿತ್ತು: ದಕ್ಷಿಣ ಆಫ್ರಿಕಾ ತಂಡವು ಕಿವೀಸ್ ನೀಡಿದ ಬೃಹತ್ 363 ರನ್ ಗುರಿ ಬೆನ್ನತ್ತುವ ಉತ್ಸಾಹದಿಂದ ಕಣಕ್ಕಿಳಿಯಿತು. ಆದರೆ, ಮೊದಲಿಗರಾಗಿ ಬಂದ ರಿಕೆಲ್ಟನ್ ಕೇವಲ 17 ರನ್ ಗಳಿಸಿ ಬಹುಬೇಗನೆ ವಿಕೆಟ್ ಒಪ್ಪಿಸಿದರು. ನಾಯಕ ಬವುಮಾ ಆರಂಭದಲ್ಲಿ ಕಿವೀಸ್ ಬೌಲಿಂಗ್ ದಾಳಿ ಎದುರಿಸಲು ಪ್ರಯಾಸಪಟ್ಟರೂ ನಂತರ ದುಸ್ಸೆನ್ ಅವರೊಂದಿಗೆ 105 ರನ್‌ಗಳ ಉಪಯುಕ್ತ ಪಾಲುದಾರಿಕೆಯ ಇನ್ನಿಂಗ್ಸ್ ಕಟ್ಟುವಲ್ಲಿ ನೆರವಾದರು.ಆದರೆ, ಸ್ಯಾಂಟ್ನರ್ ದಕ್ಷಿಣ ಆಫ್ರಿಕಾದ ಮೂರು ಪ್ರಮುಖ ವಿಕೆಟ್‌ಗಳನ್ನು ಉರುಳಿಸಿ ರನ್ ಚೇಸ್‌ಗೆ ಕಡಿವಾಣ ಹಾಕಿದರು. ಎಡಗೈ ಸ್ಪಿನ್ನರ್ ಸ್ಯಾಂಟ್ನರ್ 23ನೇ ಓವರ್‌ನಲ್ಲಿ ಮೊದಲು ಕ್ರೀಸ್‌ನಲ್ಲಿ ನೆಲೆ ನಿಂತು ಆಡುತ್ತಿದ್ದ ಬವುಮಾ ಅವರನ್ನು ಪೆವಿಲಿಯನ್‌ಗಟ್ಟಿದರೆ, ನಂತರ ಅಪಾಯಕಾರಿ ಬ್ಯಾಟರ್ ಡುಸ್ಸೆನ್ ಅವರ ವಿಕೆಟ್ ಕಿತ್ತು, ಹರಿಣಗಳಿಗೆ ಮತ್ತೊಂದು ಆಘಾತ ನೀಡಿದರು. ಇಷ್ಟೇ ಅಲ್ಲದೇ, ಸ್ಯಾಂಟ್ನರ್ ಮತ್ತೋರ್ವ ಡೇಂಜರಸ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ (3 ರನ್) ಅವರನ್ನೂ ಔಟ್ ಮಾಡಿದರು. ಇಲ್ಲಿಂದ ಹರಿಣ ಪಡೆಯ ಸೋಲು ಖಚಿತವಾಯಿತು. ಇದಾದ ನಂತರದಲ್ಲಿ ಆಲ್‌ರೌಂಡರ್ ರವೀಂದ್ರ ಐಡೆನ್ ಮಾಕ್ರಮ್ ಅವರ ವಿಕೆಟ್ ಪಡೆದರು. ಈ ಸಂದರ್ಭದಲ್ಲಿ 33 ಓವರ್‌ಗಳು ಮುಗಿದಿದ್ದು, ದ.ಆಫ್ರಿಕಾ 189 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ವಿಯನ್ ಮುಲ್ಡರ್ (8), ಮಾರ್ಕೊ ಜನ್ಸನ್ (3) ಕೇಶವ್ ಮಹರಾಜ್ (1) ತಂಡಕ್ಕೆ ನೆರವಾಗಲಿಲ್ಲ. ಆದರೆ, ಸ್ಫೋಟಕ ಆಟಗಾರ ಡೇವಿಡ್ ಮಿಲ್ಲರ್ 10 ಬೌಂಡರಿ ಮತ್ತು 4 ಸಿಕ್ಸ್ ನೆರವಿನಿಂದ ಸೊಗಸಾದ ಶತಕದಾಟವಾಡಿದರು. ಈ ಮೂಲಕ ಕೊನೆಯ ಓವರ್‌ನ ಕೊನೆಯ ಎಸೆತದವರೆಗೂ ಆಟವನ್ನು ಕೊಂಡೊಯ್ದರು. ಆದರೆ ಮಿಲ್ಲರ್ ಸಾಹಸ ತಂಡಕ್ಕೆ ಗೆಲುವು ತಂದುಕೊಡಲಿಲ್ಲ.ರಚಿನ್ ರವೀಂದ್ರ 2ನೇ ಶತಕ: ನ್ಯೂಜಿಲೆಂಡ್‌ನ ಭರವಸೆಯ ಯುವ ಆಟಗಾರ ರಚಿನ್ ರವೀಂದ್ರ ಪ್ರಸಕ್ತ ಸಾಲಿನ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ 2ನೇ ಶತಕ ದಾಖಲಿಸಿ ಹೊಸ ದಾಖಲೆ ಬರೆದರು. ಆಕರ್ಷಕ ಪುಲ್ ಶಾಟ್‌ಗಳು ಹಾಗು ಬ್ಯಾಕ್‌ಫೂಟ್ ಡ್ರೈವ್‌ಗಳ ಮೂಲಕ ಆಟದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದು ಕಂಡುಬಂತು. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಶತಕದಾಟವಾಡಿದ್ದರು. ಐಸಿಸಿ ಟೂರ್ನಿಯಲ್ಲಿ ಇದು ರವೀಂದ್ರ ಅವರ 5ನೇ ಶತಕ. 2023ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ 3 ಶತಕ ಸಿಡಿಸಿದ್ದರು.
ಕೇನ್ ವಿಲಿಯಮ್ಸನ್ 19,000 ರನ್ ದಾಖಲೆ: ನಿನ್ನೆಯ ಪಂದ್ಯದಲ್ಲಿ ಶತಕದಾಟವಾಡುವ ಮೂಲಕ ಕೇನ್ ವಿಲಿಯಮ್ಸನ್ ವಿಶ್ವದಲ್ಲೇ ಅತೀ ವೇಗದಲ್ಲಿ 19,000 ರನ್ ಸಿಡಿಸಿದ 4ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಜಾಗತಿಕ ಕ್ರಿಕೆಟ್‌ನಲ್ಲಿ ಈವರೆಗೆ 16 ಬ್ಯಾಟರ್‌ಗಳು ಮಾತ್ರ 19000 ಸಾವಿರ ಸಿಡಿಸಿದ್ದಾರೆ. ಕೇನ್ ಈ ದಾಖಲೆ ಬರೆದ ನ್ಯೂಜಿಲೆಂಡ್‌ನ ಮೊದಲ ಆಟಗಾರನೂ ಹೌದು.
ಭಾನುವಾರ ಭಾರತ-ನ್ಯೂಜಿಲೆಂಡ್ ಫೈನಲ್: ಇದರೊಂದಿಗೆ ಆತಿಥೇಯ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಅಧಿಕೃತವಾಗಿ ಮುಗಿದವು. ಮಾರ್ಚ್ 9ರ ಭಾನುವಾರ ದುಬೈನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.













































