ಎಲ್ಲದಕ್ಕೂ ಇದು ಸಾಕಾಗಲ್ಲ ಅಂತ ಸಿಎಂ ಆದ ಮೇಲೆ ಗೊತ್ತಾಯಿತು: ರೇವಂತ್
ನವದೆಹಲಿ:ಕರ್ನಾಟಕದ ರೀತಿಯಲ್ಲಿ ಗ್ಯಾರಂಟಿಗಳನ್ನುನೀಡಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಅದಕ್ಕೆ ದುಡ್ಡು ಹೊಂದಿಸಲು ಪರದಾಡುತ್ತಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಆಡಳಿತ ಇರುವ ಮತ್ತೊಂದು ರಾಜ್ಯ ಹಿಮಾಚಲಪ್ರದೇಶದಲ್ಲಿ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಬರಿದು ಮಾಡಿಕೊಂಡ ಬಗ್ಗೆ ವರದಿಗಳು ಇರುವಂತೆಯೇ ದಕ್ಷಿಣದ ತೆಲಂಗಾಣದಲ್ಲಿನ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿದ್ದ ವಾಗ್ದಾನ ಪೂರೈಸಲು ಪರದಾಡುತ್ತಿರುವ ಬಗ್ಗೆ ಮುಖ್ಯಮಂತ್ರಿಯೇ ಹೇಳಿಕೊಂಡಿದ್ದಾರೆ.
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ”ಪ್ರತಿ ತಿಂಗಳಿಗೆ ತೆಲಂಗಾಣ ಸರ್ಕಾರಕ್ಕೆ 18500 ಕೋಟಿ ರೂ. ಆದಾಯ ಬರುತ್ತದೆ. ಈ ಪೈಕಿ 6500 ಕೋಟಿ ರೂ. ಮೊತ್ತವನ್ನು ಸರ್ಕಾರಿ ನೌಕರರ ವೇತನ ಮತ್ತು ಮಾಜಿ ನೌಕರರ ಪಿಂಚಣಿಗಾಗಿ ವೆಚ್ಚ ಮಾಡಲಾಗುತ್ತದೆ. ಇನ್ನುಳಿದ 6500 ಕೋಟಿ ರೂ. ಮೊತ್ತವನ್ನು ಸಾಲ ಮತ್ತು ಬಡ್ಡಿ ಪಾವತಿ ಮಾಡಲು ಬಳಕೆ ಮಾಡಬೇಕಾಗುತ್ತದೆ. ಹೀಗಾಗಿ, ಒಟ್ಟು 13000 ಕೋಟಿ ರೂ.ಗಳನ್ನು ಪ್ರತಿ ತಿಂಗಳ 10ನೇ ತಾರೀಕಿನ ಒಳಗೆ ಹೊಂದಾಣಿಕೆ ಮಾಡಬೇಕಾಗಿದೆ’ ಎಂದು ಹೇಳಿದ್ದಾರೆ.
ವೇತನ ಪಾವತಿ ಮತ್ತು ಬಡ್ಡಿ, ಸಾಲ ಪಾವತಿ ಬಳಿಕ ರಾಜ್ಯ ಸರ್ಕಾರದ ಬಳಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಉಳಿಯುವುದು ಕೇವಲ 5000 ಕೋಟಿ ರೂ. ಹೀಗಾಗಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗೆ ನೀಡಲು ದುಡ್ಡ ಇಲ್ಲ. ಎಂದು ರೇವಂತ್ ರೆಡ್ಡಿ ರಾಜ್ಯದ ಹಣಕಾಸು ಪರಿಸ್ಥಿತಿ ವಿವರಿಸಿದ್ದಾರೆ.
ಅಧಿಕಾರ ವಹಿಸಿದ ಬಳಿಕ ಮನವರಿಕೆ:2023ರ ಡಿಸೆಂಬರ್ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ನಿಜವಾದ ತಿಳಿವಳಿಕೆ ಬಂತು ಎಂದು ರೆಡ್ಡಿ ಒಪ್ಪಿಕೊಂಡರು. ಹಲವು ರೀತಿಯ ಕಲ್ಯಾಣ ಕಾರ್ಯಕ್ರಮಗಳು ಯಾವ ರೀತಿ ಜಾರಿಯಾಗಬೇಕು ಎಂಬ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯಬೇಕು ಎಂದೂ ಸಲಹೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳು ಬೇಕೋ ಬೇಡವೋ ಎಂಬ ಬಗ್ಗೆ ಆಯ್ದ ವ್ಯಕ್ತಿಗಳು ಚರ್ಚೆ ನಡೆಸಿದರೆ ಪ್ರಯೋಜನವಿಲ್ಲ. ಒಂದು ದೇಶ; ಒಂದು ಚುನಾವಣೆ, ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಗಳು ನಡೆಯಬೇಕಾಗಿದೆ ಎಂದರು.
ತೆಲಂಗಾಣ ಸಿಎಂ ಹೇಳಿದ್ದೇನು?
- ವೇತನ ಮತ್ತು ಪಿಂಚಣಿಗಾಗಿ 6500 ಕೋಟಿ ರೂ. ನೀಡಬೇಕು
- ಸಾಲ, ಬಡ್ಡಿ ಪಾವತಿಗೆ ಇನ್ನೊಂದು 6500 ಕೋಟಿ ರೂ. ಕೊಡಬೇಕು
- ಹೀಗಾಗಿ, ಪ್ರತಿ ತಿಂಗಳ 10ರೊಳಗೆ 13000 ಕೋಟಿ ರೂ. ಹೊಂದಿಸಿಕೊಳ್ಳಬೇಕು
- ನಾವೇ ಘೋಷಿಸಿದ ಗ್ಯಾರಂಟಿಗೆ ಮೀಸಲಾಗಿ ಇರಿಸಲು ದುಡ್ಡಿಲ್ಲ
- ಕ್ಷೇತ್ರ ಪುನರ್ವಿಂಗಡಣೆ ಬದಲು, ಗ್ಯಾರಂಟಿ ಬಗ್ಗೆ ದೇಶಾದ್ಯಂತ ಚರ್ಚೆ ಆಗಲಿ













































